
ರಾಯಚೂರು, ಜೂನ್ 1: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB) ಮೇ 29 ರಂದು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಭರ್ಜರಿ ಗೆಲ್ಲುವು ದಾಖಲಿಸಿ ಐಪಿಎಲ್ ಫೈನಲ್ (IPL) ಪ್ರವೇಶಿಸಿತ್ತು. ಆರ್ಸಿಬಿ ಅಭಿಮಾನಿಗಳು ರಾಜ್ಯದಾದ್ಯಂತ ಸಂಭ್ರಮಾಚರಣೆ ಮಾಡಿದ್ದರು. ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು. ಗಡಿ ಜಿಲ್ಲೆ ರಾಯಚೂರಿನಲ್ಲಿ ಯುವಕರ ಗುಂಪೊಂದು ಪೆಟ್ರೋಲ್ ಬಾಂಬ್ ರೀತಿಯಲ್ಲಿ ಪೆಟ್ರೋಲ್ ಚೀಲಗಳನ್ನು ಸಿಡಿಸಿ ಸಂಭ್ರಮ ಆಚರಣೆ ಮಾಡಿದ್ದು, ಇದೀಗ ಜೈಲು ಪಾಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಯುವಕರ ಗುಂಪು ಆರ್ಸಿಬಿ ಪರಘೋಷಣೆಗಳನ್ನು ಕೂಗುತ್ತಾ, ಪಟಾಕಿ ಹಾಗೂ ಪೆಟ್ರೋಲ್ ಚೀಲಗಳನ್ನು ಸಿಡಿಸಿ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿತ್ತು.
ಪೆಟ್ರೋಲ್ ಚೀಲಗಳು ಭಯಾನಕವಾಗಿ ಸಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ಲಾಸ್ಟಿಕ್ ಚೀಲದಲ್ಲಿ ಪೆಟ್ರೋಲ್ ತುಂಬಿದ್ದ ಯುವಕರ ತಂಡ ಅದನ್ನು ನಡು ರಸ್ತೆಯಲ್ಲಿಟ್ಟು, ಆ ಚೀಲದ ಮೇಲೆ ಅಡುಗೆಗೆ ಬಳಸುವ ಹಿಟ್ಟನ್ನು ಇಟ್ಟಿದ್ದರು. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುವುದನ್ನು ಕ್ಯಾರೆ ಮಾಡದೆ ಚೀಲವನ್ನು ಸ್ಪೋಟಿಸಿದ್ದರು. ಸ್ಫೋಟದ ಭಯಾನಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು 8 ಮಂದಿ ಯುವಕರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಮಾನವ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಆರೋಪದಲ್ಲಿ ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳಿಗೆ ಅಡೆತಡೆ ಉಂಟುಮಾಡಿದ ಆರೋಪದಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಯುವಕರು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಸಂಭ್ರಮಾಚರಣೆಯ ಜೋಶ್‌ನಲ್ಲಿ ಯುವಕರು ಕೃತ್ಯ ಎಸಗಿರುವುದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಚಾನೆಲ್ಗಳಲ್ಲಿ ಪೆಟ್ರೋಲ್ ಬಾಂಬ್ ರೀತಿಯ ವಿಡಿಯೋಗಳನ್ನು ನೋಡಿ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ರಾಯಚೂರು ಎಸ್ಪಿ ಪುಟ್ಟ ಮಾದಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: IPL 2025: ಆರ್ಸಿಬಿಯ ಹೊಸ ಆಪತ್ಭಾಂಧವ ಜೋಶ್ ಹೇಜಲ್ವುಡ್ ಎಷ್ಟು ಕೋಟಿಯ ಒಡೆಯ ಗೊತ್ತಾ?
ಅದೇನೆ ಇರಲಿ, ಅಭಿಮಾನಕ್ಕಾಗಿ ಪಟಾಕಿ ಸಿಡಿಸುವುದೇನೋ ಸಹಿಸಬಹುದು, ಆದರೆ ಸಮಾಜಕ್ಕೆ ಘಾತುಕವಾಗುವ ರೀತಿಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟ ಮಾಡಿ ಹುಚ್ಚಾಟ ಮೆರೆಯುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆರ್ಸಿಬಿ ಅಭಿಮಾನಿಗಳ ಹುಚ್ಚಾಟವನ್ನು ಪ್ರಶ್ನಿಸಿದ್ದಾರೆ.
Published On - 11:34 am, Sun, 1 June 25