ಮಕ್ಕಳಿಗೆ ಶಿಫ್ಟ್ ಮಾದರಿಯಲ್ಲಿ ಪಾಠ: ರಾಯಚೂರಿನ ಸರ್ಕಾರಿ ಶಾಲೆಗೆ ಇದೆಂಥಾ ಸ್ಥಿತಿ ನೋಡಿ

ರಾಯಚೂರಿನ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ-ಮಧ್ಯಾಹ್ನ ಶಿಫ್ಟ್ ಮಾದರಿಯಲ್ಲಿ ತರಗತಿಗಳು ನಡೆಯುತ್ತಿವೆ. ಒಂದೂವರೆ ವರ್ಷದಿಂದ ಹೊಸ ಕಟ್ಟಡ ನಿರ್ಮಾಣವಾಗದಿರುವುದು ಇದಕ್ಕೆ ಕಾರಣ. ಈಗ, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಲು ಮುಂದಾಗಿದ್ದು, ಪೋಷಕರು ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಮಕ್ಕಳಿಗೆ ಶಿಫ್ಟ್ ಮಾದರಿಯಲ್ಲಿ ಪಾಠ: ರಾಯಚೂರಿನ ಸರ್ಕಾರಿ ಶಾಲೆಗೆ ಇದೆಂಥಾ ಸ್ಥಿತಿ ನೋಡಿ
ಶಿಫ್ಟ್ ಮಾದರಿಯಲ್ಲಿ ಪಾಠ
Image Credit source: tv9 kannada
Edited By:

Updated on: Sep 23, 2026 | 6:17 PM

ರಾಯಚೂರು, ಸೆಪ್ಟೆಂಬರ್​​ 23: ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಶಿಫ್ಟ್ ಆಧಾರದ ಮೇಲೆ ಕೆಲಸ ಇರುವುದನ್ನು ಕಂಡಿದ್ದೇವೆ. ಆದರೆ, ರಾಯಚೂರಿನ ಸರ್ಕಾರಿ ಶಾಲೆಯೊಂದರಲ್ಲಿ ಕಟ್ಟಡದ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಶಿಫ್ಟ್ ಮಾದರಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಇದೀಗ ಕೊಠಡಿಗಳ ಕೊರತೆಯ ನೆಪವೊಡ್ಡಿ ಅಲ್ಲಿನ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಪೋಷಕರು ಮತ್ತು ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವರ್ಷಗಳೇ ಕಳೆದರೂ ಆರಂಭವಾಗದ ಹೊಸ ಶಾಲಾ ಕಟ್ಟಡ

ರಾಯಚೂರು ನಗರದ ಅಸ್ಕಿಹಾಳ ವಾರ್ಡ್​​ನಲ್ಲಿ ಕಳೆದ ದಶಕಗಳಿಂದ ಪ್ರಾಥಮಿಕ ಹಾಗೂ ಪ್ರೌಢ ಸರ್ಕಾರಿ ಶಾಲೆ ಇದೆ. ಕಳೆದ ಒಂದುವರೆ ವರ್ಷದ ಹಿಂದೆ ಅಸ್ಕಿಹಾಳದ ಪ್ರಾಥಮಿಕ ಶಾಲಾ ಕಟ್ಟಡ ಹಾಳಾಗಿತ್ತು. ಹೀಗಾಗಿ ಆ ಕಟ್ಟಡವನ್ನ ನೆಲಸಮ ಮಾಡಿ, ಹೊಸ ಕಟ್ಟಡ ಕಟ್ಟಿಸುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದರು.  ಆದರೆ ಒಂದುವರೆ ವರ್ಷ ಕಳೆದರೂ ಹೊಸ ಕಟ್ಟಡದ ಕಾಮಗಾರಿಯೇ ಆರಂಭವಾಗಿಲ್ಲ.

ಶಿಫ್ಟ್ ಮಾದರಿಯಲ್ಲಿ ತರಗತಿಗಳು 

ಶಾಲಾ ಕೋಣೆಗಳ ಸಮಸ್ಯೆ ಇರುವುದರಿಂದ ಬೆಳಿಗ್ಗೆ 7.45 ರಿಂದ ಮಧ್ಯಾಹ್ನ 12-45ರವರೆಗೆ ಪ್ರೌಢ ಶಾಲೆ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಆ ಬಳಿಕ 12.45 ರಿಂದ ಸಂಜೆ 5 ವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಒಂದುವರೆ ವರ್ಷದಿಂದ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ನಿರ್ಲಕ್ಷ ವಹಿಸಿದ್ದಕ್ಕಾಗಿ ಇಲ್ಲಿನ ಮಕ್ಕಳು ಪರದಾಡುವ ಸ್ಥಿತಿಬಂದಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆ: 5 ವರ್ಷದೊಳಗಿನ ಶೇ 40ಕ್ಕೂ ಹೆಚ್ಚು ಮಕ್ಕಳ ತೂಕ ಕಡಿಮೆ

ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾಏಕಿ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನ ನಗರದ ಮತ್ತೊಂದು ಸರ್ಕಾರಿ ಶಾಲೆಗೆ ಶಿಫ್ಟ್ ಮಾಡಲು ಮುಂದಾಗಿದ್ದರು. ಇದು ಅಸ್ಕಿಹಾಳ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲೆ ಮುಚ್ಚುವ ಹುನ್ನಾರ ಎಂದ ಪೋಷಕರು

ಎಸ್​ಡಿಎಂಸಿ ಕಮಿಟಿ ಸಭೆ ನಡೆಸದೇ ಏಕಾಏಕಿ ಬಿಇಓ, ಡಿಡಿಪಿಐ ಇಲ್ಲಿನ ಮಕ್ಕಳನ್ನ ಬೇರೆ ಸರ್ಕಾರಿ ಶಾಲೆಗೆ ಸ್ಥಳಾಂತರಕ್ಕೆ ಮುಂದಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ತಾತ್ಕಾಲಿಕವಾಗಿ ಶಿಫ್ಟಿಂಗ್ ಕೆಲಸ ಅಲ್ಲ, ಶಾಶ್ವತವಾಗಿ ಅಸ್ಕಿಹಾಳ ಪ್ರೌಢ ಶಾಲೆ ಮುಚ್ಚುವ ಹುನ್ನಾರ ಎನ್ನುವುದು ಪೋಷಕರ ಆರೋಪ.

ಶಾಶ್ವತವಾಗಿ ಶಿಫ್ಟ್ ಮಾಡುತ್ತಿಲ್ಲ ಎಂದ ಡಿಡಿಪಿಐ 

‘ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಇತ್ತ ರಾಯಚೂರಿನಲ್ಲೂ ಶಿಕ್ಷಕರ ಕೊರತೆ ಇದೆ. ಆದರೆ ಶಿಕ್ಷಕರ ಕೊರತೆ ಹಾಗೂ ಕಟ್ಟಡದ ಸಮಸ್ಯೆ ನೆಪದಲ್ಲಿ ಶಾಶ್ವತವಾಗಿ ಇಲ್ಲಿನ ಪ್ರೌಢ ಶಾಲೆ ಮಕ್ಕಳನ್ನ ಬೇರೆಡೆ ಶಿಫ್ಟ್ ಮಾಡಲಾಗುತ್ತಿದೆ. ಆ ಮೂಲಕ ಈ ಪ್ರೌಢ ಶಾಲೆಯನ್ನ ಶಾಶ್ವತವಾಗಿ ಮುಚ್ಚಲಾಗತ್ತೆ. ಇದು ಶಿಕ್ಷಕರ ಕೊರತೆ, ಕಟ್ಟಡಗಳ ಕೊರತೆ ಸಮಸ್ಯೆಗಳನ್ನ ಮರೆಮಾಚಲು ನಡೆಸುತ್ತಿರುವ ತಂತ್ರ. ಹೊಸ ಕಟ್ಟಡಕ್ಕೆ ಒಂದು ಕೋಟಿ ರೂ ಅನುದಾನ ಬಂದಿದೆ ಎಂದಿದ್ದಾರೆ. ಹೀಗಿರುವಾಗ ಮತ್ತೆ ಏಕೆ ಮಕ್ಕಳನ್ನ ಶಿಫ್ಟ್ ಮಾಡುತ್ತಿದ್ದೀರಿ’ ಎನ್ನುವುದು ಪೋಷಕರ ವಾದ. ‘ಆದರೆ ಇದು ತಾತ್ಕಾಲಿಕ ಶಿಫ್ಟಿಂಗ್, ಶಾಶ್ವತವಾಗಿ ಶಿಫ್ಟ್ ಮಾಡುತ್ತಿಲ್ಲ’ ಎಂದು ಡಿಡಿಪಿಐ ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಾಯಚೂರು: 350 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕ!

ಸದ್ಯ ಅಸ್ಕಿಹಾಳ ಶಾಲಾ ಮಕ್ಕಳನ್ನ ಬೇರೆಡೆ ಶಿಫ್ಟ್ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು, ಪೋಷಕರು ಸಲಹೆ ನೀಡಿದಂತೆ ಹೊಸ ಕಟ್ಟಡವಾಗುವವರೆಗೆ ತಾತ್ಕಾಲಿಕ ಶೆಡ್ ನಿರ್ಮಿಸಬೇಕಿದೆ.

Raichur School Problem: ಕೇಳಿದ್ದೀರಾ ಶಿಫ್ಟ್‌ವೈಸ್‌ ಪಾಠ! ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಎಂಥಾ ಶಿಕ್ಷೆ? | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:16 pm, Wed, 23 September 26

ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Loading...
Unable to load recommendations.
Follow Us