ಅಂಧ ವಿದ್ಯಾರ್ಥಿಗಳು, ಪ್ರಿನ್ಸಿಪಲ್ ನಡುವೆ ಜಟಾಪಟಿ! ರಾಯಚೂರಿನಲ್ಲಿ ವಿಶೇಷ ಚೇತನರ ಸಂಘದಿಂದ ಕಾಲೇಜು ಪ್ರಿನ್ಸಿಪಲ್ಗೆ ತರಾಟೆ
ಮೇ 24 ರಂದು ವಿವಿಧ ವಿಷಯಗಳ ಪದವಿ ಪರೀಕ್ಷೆ ನಡೆಸಲಾಗಿತ್ತು. ಹೀಗಾಗಿ ಇದೇ ಕಾಲೇಜಿಗೆ ಬೇರೆ ಕಾಲೇಜಿನ ಮೂವರು ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಬರೆಯಲು ಹೋಗಿದ್ದ ದೇವಪ್ಪ, ದೊಡ್ಡೇಶ್ ಹಾಗೂ ಭೀಮಾಶಂಕರ್ ಹೋಗಿದ್ದರು.
ರಾಯಚೂರು: ಅಂಧ ವಿದ್ಯಾರ್ಥಿಗಳು (Blind Students) ಹಾಗೂ ಪ್ರಿನ್ಸಿಪಲ್ ನಡುವೆ ಜಟಾಪಟಿ ನಡೆದಿರುವ ಘಟನೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಮೊಬೈಲ್ (Mobile) ವಿಚಾರವಾಗಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿಬಂದಿದ್ದು, ವಿಶೇಷ ಚೇತನರ ಸಂಘ ಕಾಲೇಜು ಪ್ರಿನ್ಸಿಪಲ್ನ ತರಾಟೆಗೆ ತೆಗೆದುಕೊಂಡಿದೆ. ಇದೇ ಮೇ 24 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಿನ್ಸಿಪಲ್ ವೆಂಕಣ್ಣರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ 24 ರಂದು ವಿವಿಧ ವಿಷಯಗಳ ಪದವಿ ಪರೀಕ್ಷೆ ನಡೆಸಲಾಗಿತ್ತು. ಹೀಗಾಗಿ ಇದೇ ಕಾಲೇಜಿಗೆ ಬೇರೆ ಕಾಲೇಜಿನ ಮೂವರು ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಬರೆಯಲು ಹೋಗಿದ್ದ ದೇವಪ್ಪ, ದೊಡ್ಡೇಶ್ ಹಾಗೂ ಭೀಮಾಶಂಕರ್ ಹೋಗಿದ್ದರು. ಈ ವೇಳೆ ಓರ್ವ ಅಂಧ ವಿದ್ಯಾರ್ಥಿ ಮೊಬೈಲ್ ಇಟ್ಟುಕೊಂಡಿದ್ದ. ಆಗ ಅದನ್ನು ಪ್ರಶ್ನಿಸಿ, ಪ್ರಿನ್ಸಿಪಲ್ ವೆಂಕಣ್ಣ ಮೊಬೈಲ್ ಹೊರಗಿಡಿಸಿದ್ದರು.
ಇದೇ ವೇಳೆ ಪರೀಕ್ಷೆಯ ಪೇಪರ್ ಕಸಿದುಕೊಂಡು ಗಂಟೆಗಟ್ಟಲೆ ವಾಪಸ್ ನೀಡದ ಆರೋಪ ಕೇಳಿಬಂದಿದೆ. ಕುರುಡರು, ಕುಂಟರಿಗೆ ಸ್ಪೆಷಲ್ ಟ್ಯಾಲೆಂಟ್ ಅಂದರೆ ಮೋಸ ಮಾಡೋದು ಅಂತ ಪ್ರಿನ್ಸಿಪಲ್ ವೆಂಕಣ್ಣ ಹೇಳಿದ್ದಾರೆಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಕ್ಷಮೆಯಾಚಿಸುವಂತೆ ಅಂಗವಿಕಲರ ಸಂಘ ಹೋರಾಟ ಮಾಡಿದೆ. ಕಣ್ಣೇ ಕಾಣಲ್ಲ ಮೊಬೈಲ್ನಲ್ಲಿ ನೋಡಿ ಬರಿಯೋದೇನಿದೆ ಅಂತ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಮೊಬೈಲ್ ಬಳಕೆ ಮಾಡಿದ್ದರೇ ಡಿಬಾರ್ ಮಾಡಲಿ. ವಿಶೇಷ ಚೇತನರಾಗಿರುವ ನಮ್ಮನ್ನ ಅವಮಾನಿಸಿದ್ದೇಕೆ ಅಂತ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 8 Years of Modi Government ಜನರಿಂದ ಅಭಿಪ್ರಾಯ ಪಡೆಯಲು ಕೇಂದ್ರ ಸರಕಾರ ತೆರದಿರುವ ಕೆಲವು ವೆಬ್ಸೈಟ್ಗಳು ಇಲ್ಲಿವೆ
ಮೊಬೈಲ್ ಇದ್ದರೆ ಪರೀಕ್ಷಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ. ಅದಕ್ಕೆ ಹಾಗೇ ವಾರ್ನ್ ಮಾಡಿದ್ದು ನಿಜ. ಆದರೆ, ನಿಂದಿಸಿಲ್ಲ ಅಂತ ಪ್ರಿನ್ಸಿಪಲ್ ವೆಂಕಣ್ಣ ತಿಳಿಸಿದ್ದಾರೆ. ಕೂಡಲೇ ಪ್ರಿನ್ಸಿಪಲ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಿ, ಉಗ್ರ ಹೋರಾಟ ಮಾಡೋದಾಗಿ ವಿಶೇಷ ಚೇತನ ಸಂಘ ಎಚ್ಚರಿಕೆ ನೀಡಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ