
ರಾಯಚೂರು, ಜುಲೈ 15: ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್ಎಫ್ಸಿ ಕೋರ್ಟ್ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಶೋರನಜೀತ್ ಮಂಡಲ್ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾ ಪ್ರಜೆಯಾಗಿದ್ದು, ಸಿಂಧನೂರು ತಾಲೂಕಿನ ಆರ್.ಹೆಚ್.ಕ್ಯಾಂಪ್ ನಂ-3ರಲ್ಲಿ ಈತ ನೆಲೆಸಿದ್ದ. ಸುಮಾರು 10ರಿಂದ 12 ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಗಡಿದಾಟಿ ಬಂದಿದ್ದ ಶೋರನಜೀತ್, ಬಳಿಕ ಬಾಂಗ್ಲಾ ನಿರಾಶ್ರಿತರ ಕೇಂದ್ರಗಳಿರುವ ಸಿಂಧನೂರು ತಾಲೂಕಿನಲ್ಲಿ ವಾಸವಿದ್ದ.
ತಾನು ಭಾರತದ ಪ್ರಜೆ ಎಂದು ಸಾಬೀತು ಪಡಿಸಲು ಶೋರನಜೀತ್ ಚುನಾವಣಾ ಆಯೋಗದಿಂದ ಗುರುತಿನ ಚೀಟಿ, ಆಧಾರ್ ಕಾರ್ಡ, ಪಾನ್ ಕಾರ್ಡ್ ಜೊತೆಗೆ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದ್ದ. ಈ ದಾಖಲೆಗಳ ಆಧಾರದಲ್ಲಿ 2028ರ ವರೆಗೆ ಪಾಸ್ ಪೋರ್ಟ್ ಕೂಡ ಪಡೆದಿದ್ದ. ಆದರೆ ಜುಲೈ 17 2018ರಲ್ಲಿ ಬಾಂಗ್ಲಾದೇಶಕ್ಕೆ ಹೋಗುವಾಗ ಚೀಫ್ ಇಮಿಗ್ರೇಷನ್ ಸಿಬ್ಬಂದಿ ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಈತ ಲಾಕ್ ಆಗಿದ್ದ. ಆ ಬಳಿಕ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ 2018ರಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕ ರಾಗಲಪರ್ವಿ ಹನುಮೇಶ್ ಈ ಬಗ್ಗೆ ಕೋರ್ಟ್ನಲ್ಲಿ ವಾದ ಮಂಡಿಸಿದ್ದು, ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ಶಿಕ್ಷೆ ಪ್ರಕಟಿಸಿದೆ.
ಇದನ್ನೂ ಓದಿ: ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್; ನಂಬರ್ ಪ್ಲೇಟ್, ಚೆಸ್ಸಿ ಅಳಿಸಿ ಮಾರಾಟ ದಂಧೆ
ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ನಾವರು ಅಪ್ರಾಪ್ತರು ಸೇರಿ 11 ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದರು. ವಲಸಿಗರು ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು, ಪಶ್ಚಿಮ ಬಂಗಾಳ ನಿವಾಸಿಗಳೆಂದು ನಕಲಿ ವಿಳಾಸ ಬಳಸಿ ಕೆಲಸಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಪಶ್ಚಿಮ ಬಂಗಾಳ ಮೂಲದ ಏಜೆಂಟ್ಗಳ ವಿರುದ್ಧವೂ ಮಂಗಳೂರಿನ ಉರ್ವಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದಕ್ಕೂ ಕೆಲ ದಿನಗಳ ಹಿಂದೆಯಷ್ಟೇ 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಸುರತ್ಕಲ್ನಲ್ಲಿ ಪೊಲೀಸರು ಬಂಧಿಸಿದ್ದರು ಎನ್ನುವುದಿಲ್ಲಿ ಗಮನಾರ್ಹ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:29 pm, Thu, 16 July 26