ಬಿಜೆಪಿಯ ಮೊದಲ ದಿನದ ಬಳ್ಳಾರಿ ಪಾದಯಾತ್ರೆ ಅಂತ್ಯ: ಕೇಸರಿ ಪಡೆಯ ಪ್ರಮುಖ ಅಜೆಂಡಾ ಹೀಗಿದೆ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ಲಿಂಗಸೂಗೂರಿನಿಂದ ಇಂದಿನಿಂದ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಈ ಪಾದಯಾತ್ರೆ ಸೆಪ್ಟೆಂಬರ್ 10ರಂದು ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ. ರಾಜ್ಯ ಸರ್ಕಾರದ ವಿವಿಧ ವೈಪಲ್ಯಗಳ ವಿರುದ್ಧ ಹೋರಾಟ ಜೋರಾಗಿದೆ. ಹಾಗಾದ್ರೆ, ಮೊದಲ ದಿನ ಪಾದಯಾತ್ರೆ ಎಲ್ಲಿಗೆ ಬಂತು ಎನ್ನುವ ಡಿಟೇಲ್ಸ್ ಇಲ್ಲಿದೆ.

ಬಿಜೆಪಿಯ ಮೊದಲ ದಿನದ ಬಳ್ಳಾರಿ ಪಾದಯಾತ್ರೆ ಅಂತ್ಯ: ಕೇಸರಿ ಪಡೆಯ ಪ್ರಮುಖ ಅಜೆಂಡಾ ಹೀಗಿದೆ
Bjp Bellary Chalo

Updated on: Sep 01, 2026 | 8:10 PM

ರಾಯಚೂರು, (ಸೆಪ್ಟೆಂಬರ್ 01): ವಾಲ್ಮೀಕಿ ನಿಗಮದ (Valmiki Scam Case) ಹಣ ದುರ್ಬಳಕೆ ಆರೋಪವೇ ಬಿಜೆಪಿಯ (BJP) ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದು, ಬಳ್ಳಾರಿ ಪಾದಯಾತ್ರೆ (Bellary padayatra) ಕೈಗೊಂಡಿದೆ. ರಾಯಚೂರು ಲಿಂಗಸೂರಿನ ಗುರುಗುಂಟದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿ.ಕೆ. ರೆಸಿಡೆನ್ಸಿ ಮುಂಭಾಗ ನಡೆದ ಸಮಾವೇಶದಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಳಿಕ ನಾಯಕರು ಪಾದಯಾತ್ರೆ ಶರು ಮಾಡಿದ್ದು, ಮೊದಲ ದಿನವಾದ ಇಂದು (ಸೆಪ್ಟೆಂಬರ್ 01) ಒಟ್ಟು 12 ಕಿ.ಮೀ. ಹೆಜ್ಜೆ ಹಾಕಿದ್ದಾರೆ. ಇನ್ನು ಬಳ್ಳಾರಿ ಚಲೋ ಪಾದಯಾತ್ರೆ ಇಂದು ಸಂತೆ ಕಲ್ಲೂರಿನ ಘನಮಠೇಶ್ವರ ಮಠದಲ್ಲಿ ವಾಸ್ತವ್ಯ ಹೂಡಿದ್ದು, ನಾಳೆಯಿಂದ (ಸೆ.2) ಎರಡನೇ ದಿನದ ಪಾದಯಾತ್ರೆ ಮಸ್ಕಿ ತಾಲೂಕಿನಲ್ಲಿ ಮುಂದುವರಿಯಲಿದೆ.

ಮೊದಲ ದಿನ 12 ಕಿಲೋ ಮೀಟರ್ ಸಾಗಿದ ಪಾದಯಾತ್ರೆ

ಇಂದು ಲಿಂಗಸೂಗೂರಿನಿಂದ ಆರಂಭವಾದ ಪಾದಯಾತ್ರೆ ಮೊದಲ ದಿನ 12 ಕಿಲೋ ಮೀಟರ್ ಸಾಗಿದೆ.
ಸಂತೆಕಲ್ಲೂರಿನಲ್ಲಿ ಮೊದಲ ದಿನದ ಪಾದಯಾತ್ರೆ ಅಂತ್ಯವಾಗಿದ್ದು,ರಾತ್ರಿ ಸಂತೆಕಲ್ಲೂರಿನ ಘನಮಠೇಶ್ವರ ಮಠದಲ್ಲಿ ಬಿಜೆಪಿ ನಾಯಕರು ವಾಸ್ತವ್ಯ ಹೂಡಿದ್ದಾರೆ. ಪ್ರತಿ ದಿನ ಪಾದಯಾತ್ರೆ ಮಧ್ಯೆ ಎರಡು ಸಾರ್ವಜನಿಕ ಸಭೆ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ಸೆಪ್ಟೆಂಬರ್ 10ರಂದು ಬಳ್ಳಾರಿಯಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದೆ. ಹೀಗಾಗಿ ಬಳ್ಳಾರಿ ಚಲೋ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರಂಭಿಸಿರುವ ಈ ಸಮರ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾವು ಪಡೆಯುವ ಸಾಧ್ಯತೆ ಇದೆ.

ಇದನ್ನೂ ನೋಡಿ: Ballary Chalo: ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!

ಬಿಜೆಪಿ ಪಾದಯಾತ್ರೆಯ ಪ್ರಮುಖ ಅಜೆಂಡಾ

  • ವಾಲ್ಮೀಕಿ ನಿಗಮದ ಹಣ ವಾಪಸ್
  •  ಬರ ಪರಿಹಾರಕ್ಕೆ ಆಗ್ರಹ
  •  ಕೆಪಿಎಸ್‌ಸಿ ಹಗರಣ
  •  ಎಸ್‌ಸಿ, ಎಸ್‌ಟಿ ಮೀಸಲಾತಿ
  •  ಗ್ಯಾರಂಟಿ ಯೋಜನೆಗಳ ಹಣ
  •  ಉತ್ತರ ಕರ್ನಾಟಕದ ಅಭಿವೃದ್ಧಿ

ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧದ ಆರೋಪಗಳ ಸುರಿಮಳೆಗೈದಿದೆ.
ಬರ, ವಾಲ್ಮೀಕಿ ನಿಗಮ, ಕೆಪಿಎಸ್‌ಸಿ, ಮೀಸಲಾತಿ, ಗ್ಯಾರಂಟಿ ಯೋಜನೆಗಳು, ಉತ್ತರ ಕರ್ನಾಟಕದ ಅಭಿವೃದ್ಧಿ, ಹೀಗೆ ಹತ್ತು ಹಲವು ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ.

ನಾಗೇಂದ್ರ ರಾಜೀನಾಮೆ ನಮ್ಮ ಪ್ರಧಾನ ಅಜೆಂಡಾ ಅಲ್ಲ ಎಂದ ರಾಜ್ಯಾಧ್ಯಕ್ಷ ವಿಜಯೇಂದ್ರ, ನಿಗಮದ ಹಣ ವಾಪಸ್ ಬರಬೇಕು. ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ರು. ಇನ್ನು ನಾಗೇಂದ್ರ ವಿಚಾರಕ್ಕೆ ಬಿಜೆಪಿ ನಾಯಕರು ಹೆಚ್ಚು ಮಹತ್ವ ನೀಡಲಿಲ್ಲ, ನಾಗೇಂದ್ರ ಚಾಪ್ಟರ್ ಕ್ಲೋಸ್’ ಬಿಜೆಪಿ ಕಾರ್ಯಕರ್ತರ ಕಾಲಿನ ಧೂಳಿಗೂ ಸಮರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇತ್ತ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ರು. 175ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಬರ ಪರಿಹಾರಕ್ಕೆ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ರು. ಇನ್ನು ಕೆಪಿಎಸ್‌ಸಿ ಹಗರಣವನ್ನೂ ಪ್ರಸ್ತಾಪಿಸಿದ ಅಶೋಕ್,‌ ಹಗರಣದಲ್ಲಿ ಇನ್ನೂ ದೊಡ್ಡ ಮಟ್ಟದವರು ಹೊರಬರಬೇಕಿದೆ. ಹಲವು ಸಚಿವರು, ಶಾಸಕರು ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಬಿಎಸ್​​​ವೈ ಆಕ್ರೋಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಡಿ.ಕೆ. ಶಿವಕುಮಾರ್ ಅವರೇ ನೀವು ಮುಖ್ಯಮಂತ್ರಿನಾ? ನಿಮಗೆ ಸ್ವಾತಂತ್ರ್ಯ ಇದ್ಯಾ?’ ಎಂದು ಪ್ರಶ್ನಿಸಿದ್ರು. ಪ್ರತಿ ವಿಚಾರಕ್ಕೂ ದೆಹಲಿಗೆ ಹೋಗಬೇಕು. ರಾಹುಲ್ ಗಾಂಧಿ ಕಾಲು ಹಿಡಿಯಬೇಕು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಇದು ಕೇವಲ ಬಿಜೆಪಿ ಪಾದಯಾತ್ರೆಯಲ್ಲ. ಆರು ಕೋಟಿ ಕನ್ನಡಿಗರ ಆಕ್ರೋಶ ಎಂದು ಬಣ್ಣಿಸಿದ್ರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us