ಲಿಂಗಸುಗೂರು: ತಹಶೀಲ್ದಾರ್ ಕಚೇರಿಯ ಖಾತೆಗಳಲ್ಲಿದ್ದ ಹಣ ಅಕ್ರಮವಾಗಿ ವರ್ಗಾವಣೆ
ಲಿಂಗಸುಗೂರು ತಹಶೀಲ್ದಾರ್ ಕಚೇರಿಯ ಖಾತೆಗಳಲ್ಲಿದ್ದ 1 ಕೋಟಿ 87 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಡಿಎ ಯಲ್ಲಪ್ಪ ತನ್ನ ಕುಟುಂಬದ ಸದಸ್ಯರ ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಯಚೂರು, ಫೆಬ್ರವರಿ 21: ಲಿಂಗಸುಗೂರು ತಹಶೀಲ್ದಾರ್ (Lingasugur Tahasildar) ಕಾರ್ಯಾಲಯದ ಖಾತೆಗಳಲ್ಲಿದ್ದ 1 ಕೋಟಿ 87 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಬೇಕಿದ್ದ ನೈಸರ್ಗಿಕ ವಿಕೋಪದ ಪರಿಹಾರದ ಹಣವನ್ನು ತಹಶೀಲ್ದಾರ್ ಕಚೇರಿಯಲ್ಲಿ ಎಸ್ಡಿಎಯಾಗಿದ್ದ ಯಲ್ಲಪ್ಪ ಲಿಂಗಸುಗೂರಿನ ಖಾಸಗಿ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಜೊತೆ ಸೇರಿ ತನ್ನ ಮಗ, ಮಗಳು, ಪತ್ನಿ ಖಾತೆಗೆ ಅಕ್ರಮವಾಗಿ ವರ್ಗಾಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರಮುಖ ಆರೋಪಿ ಯಲ್ಲಪ್ಪ ತನ್ನ ಮಗ ವಿಶಾಲ್ ಮಾಲೀಕತ್ವದ ವಿಶಾಲ್ ಡೆಕೋರೇಟರ್ಸ್್ ಖಾತೆಗೆ 1 ಕೋಟಿ 98 ಸಾವಿರ ಹಣ, ಪುತ್ರಿ ದೀಪಾ ಹೆಸರಿನ ದೀಪಾ ಟೆಕ್ಸ್ಟೈಲ್ಸ್ ಹೆಸರಿನ ಖಾತೆಗೆ 31 ಲಕ್ಷ ರೂ. ಪತ್ನಿ ನಿರ್ಮಲಾ ಹೆಸರಿನ ನಿರ್ಮಲಾ ಡಿಜಿಟಲ್ಸ್ ಖಾತೆಗೆ 18 ಲಕ್ಷ ರೂ. ಅನ್ನು ಅಕ್ರಮವಾಗಿ ವರ್ಗಾಯಿಸಿದ್ದಾನೆ.
ಬಳಿಕ ಸಂಶಯ ಬಾರದಂತೆ ಹಣವನ್ನ ಕಾರ್ಯಾಲಯದ ಸೆನ್ಸಸ್ ಖಾತೆಗೆ ಜಮೆ ಮಾಡಿದ್ದಾನೆ. ಬಳಿಕ ತಹಶೀಲ್ದಾರ್ ಕಾರ್ಯಾಲಯದ ಖಾತೆಗಳನ್ನ ಮುಕ್ತಾಯಗೊಳಿಸಲು ಮನವಿ ಮಾಡಿದ್ದಾನೆ. ಈ ಬಗ್ಗೆ ಅರಿತ ತಹಶೀಲ್ದಾರ್ ಶಂಶಾಲಂ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸ್‌ಡಿಎ ಯಲ್ಲಪ್ಪ, ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆದಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಆಸ್ಪತ್ರೆ
ಪ್ರಕರಣ ಸಂಬಂಧ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾತನಾಡಿ, ತಹಶಿಲ್ದಾರ್ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ತಹಶೀಲ್ದಾರ್ ಸಹಿ ನಕಲು ಮಾಡಿ ಹಣ ದೋಚಿದ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯ ಲಕ್ಷಾಂತರ ರೂಪಾಯಿ ಲಪಟಾಯಿಸಿ ಸಿಕ್ಕಿ ಬಿದ್ದಿದ್ದರು. ರೆವಿನ್ಯೂ ಇನ್ಸ್ಪೆಕ್ಟರ್ (ಆರ್ಐ) ಆಗಿ ಬರುವ ಮೊದಲು ಮುಜರಾಯಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಇಲಾಖೆಯ ಬಗ್ಗೆ ಹೆಚ್ಚು ಮಾಹಿತಿ ತಿಳಿದಿದ್ದರಿಂದ, 2023 ರಿಂದ ಇಲ್ಲಿಯವರೆಗೆ ಇಬ್ಬರು ತಹಶಿಲ್ದಾರ್, ಓರ್ವ ಕೇಸ್ ವರ್ಕರ್ ಸಹಿ ಮತ್ತು ಸೀಲ್ ಬಳಸಿ ಮುಜುರಾಯಿ ಇಲಾಖೆಯಲ್ಲಿನ ಸುಮಾರು 63 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Fri, 21 February 25



