
ರಾಯಚೂರು, ಮೇ 18: ಹದಿಹರೆಯದ ಮಕ್ಕಳಿದ್ದಾಗ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸರಿ ತಪ್ಪುಗಳ ಅರಿವಿಲ್ಲದ ಬಾಲಕ-ಬಾಲಕಿಯರು ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕಿ ನಾಪತ್ತೆಯಾಗುತ್ತಿರುವ (Teen girls Missing) ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಈಗಾಗಲೇ 19 ಕೇಸ್ಗಳು ದಾಖಲಾಗಿದ್ದು, ಪಾಲಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಅರಿವು ಮೂಡಿಸಲು ಪೊಲೀಸ್ ಇಲಾಖೆ ಹಲವು ಪ್ರಯತ್ನಗಳನ್ನು ಕೈಗೊಂಡಿದ್ದು, ಪೋಷಕರು ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಮನೆಯಿಂದ ಫ್ರೆಂಡ್ಸ್ ಮನೆಗೆ ಹೋಗಿ ಬರುತ್ತೇನೆ, ನೋಟ್ಸ್ ತರುತ್ತೇನೆ ಎಂದು ಪೋಷಕರಿಗೆ ಸುಳ್ಳು ಹೇಳಿ ಹೊರಡುವ ಬಾಲಕಿಯರು ವಯಸ್ಕ ಯುವಕರ ಜೊತೆ ನಾಪತ್ತೆಯಾಗುತ್ತಿದ್ದಾರೆ. ಪೋಷಕರು ಹಗಲಿರುಳು ಹುಡುಕಾಟ ನಡೆಸಿ, ಮಕ್ಕಳ ಸುಳಿವು ಸಿಗದೇ ಇದ್ದಾಗ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಸದ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಈ ಗಂಭೀರ ವಿಷಯದ ಕುರಿತು ಟಿವಿ9 ಜೊತೆ ಮಾತನಾಡಿದ ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ , ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗಿವೆ. ಈಗಾಗಲೇ 19 ಕೇಸ್ಗಲು ದಾಖಲಾಗಿದ್ದು, 6 ಬಾಲಕಿಯರ ಸುಳಿವು ಸಿಕ್ಕಿದೆ. ಉಳಿದ 13 ಪ್ರಕರಣಗಳ ತನಿಖೆ ಮುಂದುವರೆದಿದೆ. ಶಾಲಾ-ಕಾಲೇಜು ಪರೀಕ್ಷೆ ಮುಗಿದ ಬಳಿಕ ಇಂತಹ ಘಟನೆಗಳು ಮರುಕಳಿಸುತ್ತಿವೆ. 18 ವರ್ಷದ ಒಳಗಿನ ಬಾಲಕಿಯರು ವಯಸ್ಕ ಯುವಕರ ಜೊತೆ ಹೋದರೆ ಅದನ್ನು ಅಪಹರಣವೆಂದೇ ಪರಿಗಣಿಸಲಾಗುತ್ತದೆ. ಆದ್ದರಿಂದ ಪೋಷಕರು ಹಾಗೂ ಕುಟುಂಬಸ್ಥರು ಮಕ್ಕಳ ಮನಸ್ಥಿತಿಯನ್ನು ಅರಿತು ಅವರಿಗೆ ಸೂಕ್ತ ಕೌನ್ಸೆಲಿಂಗ್ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!
ಈಗಾಗಲೇ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಬಾಲಕಿಯರಿಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿರುವ ಎಸ್ಪಿ, ಕಾನೂನು ಪ್ರಾಧಿಕಾರದ ಜೊತೆಯೂ ಸಭೆ ನಡೆಸಲಾಗಿದ್ದು, ಪ್ರೇಮದ ಹೆಸರಿನಲ್ಲಿ ಅಪ್ರಾಪ್ತೆಯರನ್ನು ಸೆಳೆಯುವ ವಯಸ್ಕ ಯುವಕರಿಗೂ ಕಾನೂನಿನ ಕಠಿಣ ಶಿಕ್ಷೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಬೇಸಿಗೆ ರಜೆ ಅವಧಿಯಲ್ಲಿ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿದ್ದಾರೆ.ಪರೀಕ್ಷೆ ಮುಗಿದ ಬಳಿಕ ಪ್ರೇಮದ ಹೆಸರಿನಲ್ಲಿ ಬಾಲಕಿಯರು ನಾಪತ್ತೆಯಾಗುತ್ತಿದ್ದಾರೆ.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸದ್ಯ 19 ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ