
ರಾಯಚೂರು, ಮೇ 16: ಕಾವಿ ಬಟ್ಟೆ ಹಾಕಿಕೊಂಡು, ಸಾಧು ಸಂತರಂತೆ ಬಂದು ನಿಮ್ಮನ್ನ ಹಾಡಿ ಹೊಗಳುವವರನ್ನು ನಂಬುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ರಾಯಚೂರಿನ (Raichur) ಸಿಂಧನೂರು ನಗರದಲ್ಲಿ ನಡೆದ ಘಟನೆಯೇ ಸಾಕ್ಷಿ. ನಗರದಲ್ಲಿ ಸಾಧು ಸಂತರ ಸೋಗಿನಲ್ಲಿ ಬಂದು, ಹೂವುಗಳನ್ನು ನೀಡಿ, ಸಮ್ಮೋಹನ (Hypnotize) ಮಾಡುವ ಮೂಲಕ ಸಾರ್ವಜನಿಕರ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿರುವ ಖದೀಮರ ಕೃತ್ಯ ಈಗ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಸಿಕ್ಕಿದೆ. ಧರ್ಮ, ಭಕ್ತಿ ಮತ್ತು ಸತ್ಕಾರದ ಹೆಸರಿನಲ್ಲಿ ಜನರನ್ನು ಮಂಕುಬೂದಿ ಎರಚಿ ಲೂಟಿ ಮಾಡುವ ‘ಖದೀಮ ಸಾಧುಗಳ’ ಗ್ಯಾಂಗ್ ಈಗ ಜಿಲ್ಲೆಯಲ್ಲಿ ತೀವ್ರ ಆತಂಕ ಮೂಡಿಸಿದೆ.
ಸಿಂಧನೂರು ನಗರದ ಪ್ರಮುಖ ರಸ್ತೆಯಲ್ಲಿರುವ ‘ಸಾಯಿ ಮೆಡಿಕಲ್ಸ್’ ಫಾರ್ಮಸಿಗೆ ಸಾಧುವೊಬ್ಬರು ಆಗಮಿಸಿದ್ದರು. ಬಿಸಿಲಿನ ಬೇಗೆಯಿಂದ ಬಳಲಿದ್ದ ಆ ಸಾಧು, ಕುಡಿಯಲು ನೀರು ಕೇಳಿದ್ದಾರೆ. ಮೆಡಿಕಲ್ ಅಂಗಡಿಯ ಮಾಲೀಕರಾದ ವಿಷ್ಣುದತ್ತು ಮಾನವೀಯತೆ ಮತ್ತು ಸಾಧುಗಳ ಮೇಲಿನ ಭಕ್ತಿಯಿಂದ ತಕ್ಷಣವೇ ಫ್ರಿಡ್ಜ್‌ನಿಂದ ತಣ್ಣನೆಯ ನೀರನ್ನು ತಂದುಕೊಟ್ಟು ಸತ್ಕರಿಸಿದ್ದಾರೆ. ನೀರು ಕುಡಿದ ಸಾಧು, ಮಾಲೀಕರ ಭಕ್ತಿಗೆ ಮೆಚ್ಚುಗೆ ಸೂಚಿಸುವಂತೆ ನಟಿಸಿದ್ದಾನೆ. ನಿನಗೆ ಮತ್ತು ನಿನ್ನ ಮಕ್ಕಳಿಗೆ ಒಳಿತಾಗಲಿದೆ. ನಿಮ್ಮ ಸಂಕಷ್ಟಗಳೆಲ್ಲವೂ ದೂರಾಗಲಿವೆ ಎಂದು ಹರಸುತ್ತಾ ತನ್ನ ಕೈಯಲ್ಲಿದ್ದ ಎರಡು ಹೂವುಗಳನ್ನು ವಿಷ್ಣುದತ್ತು ಅವರ ಕೈಗೆ ನೀಡಿದ್ದಾನೆ.
ಸಾಧು ನೀಡಿದ ಆ ಎರಡು ಹೂವುಗಳ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ಮಾಲೀಕ ಪ್ರಜ್ಞೆ ತಪ್ಪಿದವರಂತೆ, ಮಂಕು ಬಡಿದ ಸ್ಥಿತಿಗೆ ತಲುಪಿದ್ದಾರೆ. ತಮಗೆ ಅರಿವಿಲ್ಲದಂತೆಯೇ ಸಮ್ಮೋಹನಕ್ಕೆ ಒಳಗಾದ ಮಾಲೀಕರು, ಖುದ್ದು ತಾವೇ ತಮ್ಮ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ ಮತ್ತು ಕೈಯಲ್ಲಿದ್ದ ಬೆಲೆಬಾಳುವ ಬಂಗಾರದ ಉಂಗುರವನ್ನು ಬಿಚ್ಚಿ ಆ ಖದೀಮ ಸಾಧುವಿನ ಕೈಗೆ ಕೊಟ್ಟಿದ್ದಾರೆ. ಹಣ ಮತ್ತು ಚಿನ್ನವನ್ನು ಲೂಟಿ ಮಾಡಿದ ಆ ಸಾಧು, ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾನೆ. ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರು ಸಂಪೂರ್ಣ ಪ್ರಜ್ಞಾವಸ್ಥೆಗೆ ಬಂದಾಗ ತಮಗೆ ವಂಚನೆಯಾಗಿರುವುದು ಅರಿವಾಗಿದೆ.
ಈ ವಿಚಿತ್ರ ಲೂಟಿ ಪ್ರಕರಣದ ಕುರಿತು ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಸಾಯಿ ಮೆಡಿಕಲ್ಸ್ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಸಾಧುಗಳ ಸೋಗಿನಲ್ಲಿರುವ ಖದೀಮರ ಇಡೀ ತಂಡ ನಗರದಾದ್ಯಂತ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ