ರಾಯಚೂರಿನಲ್ಲಿ ನಿಲ್ಲದ ಬಿವಿ ನಾಯಕ್ ಬಂಡಾಯ! ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದರ ವಿರುದ್ಧ ಸುಳ್ಳು ಜಾತಿ ಆರೋಪ
ಲೋಕಸಭಾ ಟಿಕೆಟ್ ಕೈತಪ್ಪಿರೊ ಹಿನ್ನೆಲೆ ಗಡಿ ಜಿಲ್ಲೆ ರಾಯಚೂರಿನಲ್ಲಿ ಬಂಡಾಯದ ಬಿಸಿ ಮತ್ತೆ ಮುನ್ನಲೆಗೆ ಬಂದಿದೆ. ಬಂಡಾಯ ಮಿರಿ ಮೀರಿರೋದರ ಮಧ್ಯೆ ಈಗ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕ್ ವಿರುದ್ಧ ಸುಳ್ಳು ಜಾತಿ ಆರೋಪ ಕೇಳಿಬಂದಿದೆ. ಈ ಮಧ್ಯೆ ಮತ್ತೆ ಗೋಬ್ಯಾಕ್ ಅಮರೇಶ್ವರ ನಾಯಕ್ ಪ್ರತಿಭಟನೆ ನಡೆದಿದೆ.
ರಾಯಚೂರು, ಏ.07: ಲೋಕಸಭಾ ಟಿಕೆಟ್ ಕೈತಪ್ಪಿದ ಹಿನ್ನೆಲೆ ಜಿಲ್ಲೆಯಲ್ಲಿ ಬಂಡಾಯ ಭುಗಿಲೆದ್ದಿದೆ. ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸಂಸದ ಬಿವಿ ನಾಯಕ್ರ(B.V. Nayak) ಬಂಡಾಯ ತಣ್ಣಗಾಗಿರಲಿಲ್ಲ. ಮೊನ್ನೆಯಷ್ಟೆ ಅವರ ಅಭಿಮಾನಿಗಳು ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.ಇದಾದ ಬಳಿಕ ಈಗ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್(Raja Amareshwara Nayak) ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪ ಕೇಳಿಬಂದಿದೆ.
ಜಿಲ್ಲೆಯ ನಾಯಕ ಸಮುದಾಯದ ಪ್ರಮುಖರು ಈ ಬಗ್ಗೆ ಲಂಗಸುಗೂರು ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ಈ ಮೂಲಕ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಈಗ ಬಿಜೆಪಿ ಅಭ್ಯರ್ಥಿ ವಿರುದ್ಧ ಸುಳ್ಳು ಜಾತಿ ಅಸ್ತ್ರ ಪ್ರಯೋಗಿಸಲಾಗಿದೆ. ಹೌದು, ರಾಯಚೂರು ಲೋಕಸಭಾ ಕ್ಷೇತ್ರ ಎಸ್ಟಿ ಮೀಸಲು ಕ್ಚೇತ್ರವಾಗಿದೆ. ಆದ್ರೆ, ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ಒಂದೊಂದು ರೀತಿಯ ಜಾತಿ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ರಾಜಾ ಅಮರೇಶ್ವರ್ ನಾಯಕ್ ಎಸ್ಟಿ ಸಮುದಾಯಕ್ಕೆ ಸೇರಿದವರಲ್ಲ ಎಂದು ರಾಯಚೂರಿನ ವಾಲ್ಮೀಕಿ ಸಮುದಾಯದ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ರಾಯಚೂರು ಬಿಜೆಪಿ ಸಂಸದರ ವಿರುದ್ಧ ನಾಲಿಗೆ ಹರಿಬಿಟ್ಟ ಸ್ವಪಕ್ಷದ ಕಾರ್ಯಕರ್ತ: ಚಪ್ಪಲಿಲಿ ಹೊಡಿತೀವಿ ಎಂದು ಆಕ್ರೋಶ
ಸಂಸದರ ಶಾಲಾ ದಾಖಲಾತಿಗಳಲ್ಲಿ ಹಿಂದೂ ಕ್ಷತ್ರೀಯ, ಹಿಂದೂ, ಹಿಂದು ವಾಲ್ಮೀಕಿ ಎಂದು ವಿವಿಧ ಹಂತಗಳಲ್ಲಿ ಉಲ್ಲೇಖಿಸಲಾಗಿದೆಯಂತೆ. ಪ್ರಾಥಮಿಕ ಶಾಲಾ ಅವಧಿಯಲ್ಲಿ ರಾಜಾ ಕ್ಷತ್ರೀಯ ಎಂದು ಉಲ್ಲೇಖ, ಪದವಿಪೂರ್ವ ಕಾಲೇಜಿನಲ್ಲಿ ಹಿಂದೂ ಹಾಗೂ ಕಾಲೇಜಿನಲ್ಲಿ ಹಿಂದೂ ವಾಲ್ಮೀಕಿ ಎಂದು ಉಲ್ಲೇಖಿಸಿರುವ ದಾಖಲೆಗಳನ್ನ ನಾಯಕ ಸಮುದಾಯದ ಮುಖಂಡರು ಬಿಡುಗಡೆ ಮಾಡಿದ್ದಾರೆ. ಕೂಡಲೇ ಸಂಸದ ರಾಜಾ ಅಮರೇಶ್ವರ ನಾಯಕ್ಗೆ ನೀಡಿರುವ ಎಸ್ಟಿ ಸಮುದಾಯದ ಪ್ರಮಾಣ ಪತ್ರ ಹಿಂಪಡೆಯುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಇದರ ಜೊತೆ ಈಗಾಗಲೇ ಬಿಜೆಪಿ ಅಮರೇಶ್ವರ ನಾಯಕ್ ಅವ್ಗರಿಗೆ ಟಿಕೆಟ್ ನೀಡಿದೆ. ಆದ್ರೆ, ಈಗ ಹಾಲಿ ಸಂಸದರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪವಿದ್ದು, ಕೂಡಲೇ ಬಿಜೆಪಿ ನಾಯಕ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಲಿ ಎಂದು ಆಗ್ರಹಿಸಿದ್ದಾರೆ.
ಇದಷ್ಟೇ ಅಲ್ಲ, ಇಂದು ರಾಯಚೂರು ನಗರದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಮತ್ತೆ ಹಾಲಿ ಸಂಸದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಗೋಬ್ಯಾಕ್ ಅಮರೇಶ್ವರ ನಾಯಕ್ ಎನ್ನುವ ಸ್ಲೋಗನ್ ಅಡಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಟಿಕೆಟ್ ಫೈಟ್ ಮುಂದುವರೆಸಿದ್ದಾರೆ. ತಮ್ಮ ವಿರುದ್ಧದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪದ ಬಗ್ಗೆ ಹಾಲಿ ಸಂಸದರು ಏನು ಪ್ರತಿಕ್ರಿಯೇ ನೀಡುತ್ತಾರೆ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ