ರಾಯಚೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಘೋರ ದುರಂತ: ಇಬ್ಬರು ಬಾಲಕರು ಸಾವು

ರಾಯಚೂರು ನಗರದ ಜಹಿರಾಬಾದ್ ಬಡಾವಣೆಯ ಗಣೇಶ ವಿಸರ್ಜನೆ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ರಾಯಚೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಯಚೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಘೋರ ದುರಂತ: ಇಬ್ಬರು ಬಾಲಕರು ಸಾವು
ಗಣೇಶ ವಿಸರ್ಜನೆ ವೇಳೆ ಅವಘಡ
Image Credit source: tv9 kannada
Edited By:

Updated on: Sep 19, 2026 | 5:12 PM

ರಾಯಚೂರು, ಸೆಪ್ಟೆಂಬರ್​ 19: ಗಣೇಶ ವಿಸರ್ಜನೆಯ ಮೆರವಣಿಗೆ ಸಂಭ್ರಮದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಗಣೇಶ ಮೂರ್ತಿಯನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್‌ನಿಂದ ಕೆಳಕ್ಕೆ ಬಿದ್ದು ವಾಹನದಡಿ ಸಿಲುಕಿ ಒಂದೇ ಬಡಾವಣೆಯ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ರಾಯಚೂರು ನಗರದ ಜಹಿರಾಬಾದ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಐದನೇ ದಿನದಂದು ಅದ್ದೂರಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮುನ್ನಾ ಎಂಬಾತ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದು, ಚಾಲಕನ ಬಳಿಯ ಇಂಜಿನ್ ಮೇಲೆ ಸುಜಿತ್ ಕುಮಾರ್ (16), ಚರಣ್ (14) ಹಾಗೂ ವಿಜಯ್ ಕುಮಾರ್ (32) ಕುಳಿತಿದ್ದರು. ಮೆರವಣಿಗೆ ಸಾಗುತ್ತಿದ್ದ ಮಾರ್ಗಮಧ್ಯೆ ಚಾಲಕ ಮುನ್ನಾ ರಸ್ತೆ ಹಂಪ್ಸ್ ಬಳಿ ವೇಗವಾಗಿ ಟ್ರ್ಯಾಕ್ಟರ್ ಎಗರಿಸಿದ ಪರಿಣಾಮ, ಇಂಜಿನ್ ಮೇಲೆ ಕುಳಿತಿದ್ದ ಮೂವರೂ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲೇ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದಿದೆ.

ಆಸ್ಪತ್ರೆಯಲ್ಲಿ ಇಬ್ಬರು ಬಾಲಕರು ಸಾವು: ಮುಗಿಲು ಮುಟ್ಟಿದ ಆಕ್ರಂದನ

ಇನ್ನು ಘಟನೆಯಿಂದ ತೀವ್ರವಾಗಿ ಗಾಯಗೊಂಡದ್ದ ಮೂವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ದುರದೃಷ್ಟವಶಾತ್ ಸುಜಿತ್ ಕುಮಾರ್ ಹಾಗೂ ಚರಣ್ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾರೆ. ವಿಜಯ್ ಕುಮಾರ್​ಗೆ ಗಂಭೀರಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ವಿದ್ಯುತ್ ಅವಘಡ: ಕಾಲುವೆಗೆ ಉರುಳಿದ ಟ್ರ್ಯಾಕ್ಟರ್; ಕೂದಲೆಳೆ ಅಂತರದಲ್ಲಿ ಇಬ್ಬರು ಪಾರು

ಇತ್ತ ಗಣೇಶ ವಿಸರ್ಜನೆಯ ಸಂಭ್ರಮದಲ್ಲಿದ್ದ ಏರಿಯಾದ ಜನರು ದುರಂತದಿಂದ ಕಣ್ಣೀರಿಟ್ಟಿದ್ದಾರೆ. ಟ್ರ್ಯಾಕ್ಟರ್​ಚಾಲಕನ ಸಣ್ಣ ಎಡವಟ್ಟಿನಿಂದ ಬಾಳಿ ಬದುಕಬೇಕಿದ್ದ ಎರಡು ಜೀವಗಳು ಬಲಿಯಾಗಿವೆ. ಮಕ್ಕಳನ್ನ ನೆನೆದು ಕುಟುಂಬಸ್ಥರು ಅಕ್ಷರಶಃ ಬಿಕ್ಕಿಬಿಕ್ಕಿ ಕಣ್ಣೀರಿಡುತ್ತಿದ್ದಾರೆ.

ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲು

ಇನ್ನು ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಚಾಲಕ ಮುನ್ನಾ ವಿರುದ್ಧ ನಿರ್ಲಕ್ಷ್ಯತನದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us