ಹೊಸ ಪಕ್ಷ ಕಟ್ಟಲು ಮುಂದಾದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶಿವಸೇನಾ ಶಿಂಧೆ ಬಣ ಗಾಳ
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶಿವಸೇನಾ ಶಿಂಧೆ ಬಣ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿದೆ. ರಾಯಚೂರಿನಲ್ಲಿ ಮಾತನಾಡಿದ ಶಿವಸೇನಾ ಶಿಂಧೆ ಬಣದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಯತ್ನಾಳ್ ಹಿಂದುತ್ವದ ಕಾರ್ಯಕ್ಕೆ ಬರುವುದಾದರೆ ಸ್ವಾಗತ. ಕರ್ನಾಟಕದಲ್ಲಿ ಹಿಂದುತ್ವದ ಸರ್ಕಾರ ತರುವುದು ಮತ್ತು ಕಾಂಗ್ರೆಸ್ ಸರ್ಕಾರ ಕೆಳಗಿಳಿಸುವುದು ನಮ್ಮ ಉದ್ದೇಶ ಎಂದರು.

ರಾಯಚೂರು, ಅಕ್ಟೋಬರ್ 14: ಹಿಂದುತ್ವದ ಹೊಸ ಪಕ್ಷ ಕಟ್ಟಲು ಮುಂದಾಗಿರುವ ಬಿಜೆಪಿ (BJP) ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಶಿವ ಸೇನಾ ಶಿಂಧೆ ಬಣದಿಂದ (Shiv Sena Shinde faction) ದೊಡ್ಡ ಆಹ್ವಾನ ಬಂದಿದೆ. ಯತ್ನಾಳ್ ಅವರನ್ನು ರಾಜ್ಯ ಶಿವಸೇನಾ ಪಕ್ಷಕ್ಕೆ ಕರೆತರಲು ಪಕ್ಷದ ಮುಖಂಡರು ತೀವ್ರ ಆಸಕ್ತಿ ತೋರಿದ್ದಾರೆ. ರಾಯಚೂರಿನಲ್ಲಿ ‘ಟಿವಿ9’ ಜೊತೆ ಮಾತನಾಡಿದ ಶಿವಸೇನಾ ಶಿಂಧೆ ಬಣದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಯತ್ನಾಳ್ ಶಿವಸೇನಾ ಪಕ್ಷಕ್ಕೆ ಸೇರುತ್ತೇನೆ ಎಂದರೆ, ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸುತ್ತೇವೆ. ಅವರು ಹಿಂದುತ್ವದ ಕೆಲಸಕ್ಕೆ ಬರುವುದಾದರೆ, ನಾವು ಕೈಜೋಡಿಸಲು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅಫಜಲಪುರದ ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಜೊತೆ ಒಂದೇ ವೇದಿಕೆ ಹಂಚಿಕೊಂಡಿದ್ದೇನೆ ಎಂದು ಹೇಳಿದ ಸಿದ್ದಲಿಂಗ ಸ್ವಾಮೀಜಿ, ಆ ಸಂದರ್ಭದಲ್ಲಿ ಚುನಾವಣಾ ಚರ್ಚೆ ಆಗಲಿಲ್ಲ, ಆದರೆ ಮುಂದಿನ ದಿನಗಳಲ್ಲಿ ಮಾತುಕತೆಗೆ ಅವಕಾಶ ಇದೆ. ಹಿಂದುತ್ವದ ಸರ್ಕಾರ ತರಬೇಕೆಂಬುದು ನಮ್ಮ ಉದ್ದೇಶ ಎಂದರು.
ಇನ್ನೂ ಎರಡು ವರ್ಷ ಕಾಲಾವಕಾಶ ಇರುವುದರಿಂದ, ರಾಜಕೀಯ ಹೊಂದಾಣಿಕೆ ಬಗ್ಗೆ ಮಾತುಕತೆ ಮಾಡಲು ಸಮಯವಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಲ್ಲಿ ಶಿವಸೇನಾ ಎನ್‌ಡಿಎ ಮೈತ್ರಿಕೂಟದಲ್ಲಿರುವಂತೆಯೇ, ಕರ್ನಾಟಕದಲ್ಲಿಯೂ ಹೈಕಮಾಂಡ್ ಸೂಚನೆ ಮೇರೆಗೆ ಕಾರ್ಯನಿರ್ವಹಿಸಲಾಗುವುದು ಎಂದರು.
ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಿದೆ. ಈ ಸರ್ಕಾರ ಕೆಳಗಿಸಲು ಬೇಕಾದ ಎಲ್ಲ ಕ್ರಮ ಕೈಗೊಳ್ಳುತ್ತೇವೆ. ಹಿಂದೂ ಮತಗಳು ವಿಭಜನೆಯಾಗದಂತೆ ಒಗ್ಗೂಡಿಸಲು ನಾವು ಬದ್ಧ ಎಂದೂ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಇದರೊಂದಿಗೆ, ಕರ್ನಾಟಕ ರಾಜಕೀಯದಲ್ಲಿ ಹಿಂದುತ್ವದ ಹೊಸ ಮೈತ್ರಿ ಸಾಧ್ಯತೆಗಳು ಮೂಡಿಬಂದಿವೆ.
ಇದನ್ನೂ ಓದಿ: ರಾಜ್ಯದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲಿದೆಯಾ ಸರ್ಕಾರ?: ಪ್ರಸ್ತಾವನೆಯಲ್ಲಿ ಏನಿದೆ?
ಬಿಜೆಪಿಯಿಂದ ಉಚ್ಛಾಟನೆಯಾದ ನಂತರವಂತೂ ಯತ್ನಾಳ್ ಮತ್ತಷ್ಟು ಸಕ್ರಿಯರಾಗಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ಮಂಡ್ಯದ ಮದ್ದೂರಿನಿಂದ ತೊಡಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸಂಚಾರ ಮಾಡಿ ಹಿಂದೂ ಕಾರ್ಯಕರ್ತರನ್ನು ಒಂದೆಡೆ ಸೇರಿಸುವ ಯತ್ನವನ್ನು ಯತ್ನಾಳ್ ಮಾಡಿದ್ದರು. ಯತ್ನಾಳ್ ಹೋದಲ್ಲೆಲ್ಲ ಹಿಂದೂ ಕಾರ್ಯಕರ್ತರ ಪಡೆ ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಿದ್ದುದು ಗಮನ ಸೆಳೆದಿತ್ತು. ಸದ್ಯ ಯತ್ನಾಳ್‌ಗೆ ಪಕ್ಷ ಸೇರ್ಪಡೆಯ ಆಫರ್ ನೀಡಲು ಶಿವಸೇನಾ ಮುಂದಾಗಿರುವುದು ಕುತೂಹಲ ಮೂಡಿಸಿದೆ. ಆ ಮೂಲಕ ಕರ್ನಾಟಕದಲ್ಲಿ ವ್ಯಾಪ್ತಿ ವಿಸ್ತರಣೆಗೆ ಶಿವಸೇನಾ ಮುಂದಾಗಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.



