Karnataka Rain: ರಾಜ್ಯದ ವಿವಿಧೆಡೆ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ, ಹಾಸನದಲ್ಲಿ ಶಾಲೆಗಳಿಗೆ ರಜೆ
ಪೂರ್ವ ಮುಂಗಾರಿನ ಪರಿಣಾಮಗಳು ಮತ್ತು ಸರ್ಕಾರ ಸಿದ್ಧತೆ ಮಾಡಿಕೊಳ್ಳದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಬೆಂಗಳೂರು: ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರ ರಾತ್ರಿ ಭಾರೀ ಮಳೆಯಾಗಿದೆ (Karnataka Rain). ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದರೆ, ರಸ್ತೆಗಳ ಮೇಲೆ ನೀರು ನಿಲ್ಲುವುದು ಸಾಮಾನ್ಯ ಎನಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪೂರ್ವ ಮುಂಗಾರಿನ ಪರಿಣಾಮಗಳು ಮತ್ತು ಸರ್ಕಾರ ಸಿದ್ಧತೆ ಮಾಡಿಕೊಳ್ಳದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಅಂಡರ್ಪಾಸ್ ಜಲಾವೃತ
ಯಲಹಂಕ: ರಾತ್ರಿ ಸುರಿದ ಭಾರಿ ಮಳೆಗೆ ಯಲಹಂಕದ ಏರ್ಪೋರ್ಟ್ ರಸ್ತೆಯಲ್ಲಿರುವ ಅಂಡರ್ ಪಾಸ್ಗಳು ಜಲಾವೃತಗೊಂಡಿವೆ. ಅಂಡರ್ಪಾಸ್ನಲ್ಲಿ ಸಿಲುಕಿ ಕೆಟ್ಟುನಿಂತಿರುವ ಶಾಲಾ ವಾಹನವನ್ನು ಮೇಲೆ ತರಲು ಹರಸಾಹಸ ಮಾಡಲಾಗುತ್ತಿದೆ. ರಾಷ್ತ್ರೀಯ ಹೆದ್ದಾರಿ 7ರ ಐವಿಸಿ ರಸ್ತೆಯ ರೈಲ್ವೆ ಅಂಡರ್ಪಾಸ್ ಮಳೆ ನೀರಿನಿಂದ ಭರ್ತಿಯಾಗಿದೆ. ಮಳೆ ನೀರು ಎಷ್ಟು ಎತ್ತರ ಇರಬಹುದು ಎಂಬುದನ್ನು ಅಂದಾಜಿಸದ ಚಾಲಕ ಅಂಡರ್ಪಾಸ್ ದಾಟಲು ಯತ್ನಿಸಿದಾಗ ವಾಹನ ನೀರಿನಲ್ಲಿ ಸಿಲುಕಿ, ಎಂಜಿನ್ ಕೆಟ್ಟು ಹೋಯಿತು. ಮತ್ತೊಂದು ಬಸ್ಗೆ ಹಗ್ಗ ಕಟ್ಟಿ, ಶಾಲಾ ಬಸ್ ಮೇಲೆ ಎಳೆಯಲು ಯತ್ನಿಸಲಾಯಿತು. ಅವೈಜ್ಞಾನಿಕ ಅಂಡರ್ಪಾಸ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆಯಿಂದ ಅಂಡರ್ ಪಾಸ್ಗಳಲ್ಲಿ ಹಲವು ವಾಹನಗಳು ಕೆಟ್ಟು ನಿಂತಿವೆ. ದೊಡ್ಡಬಳ್ಳಾಪುರ ಮೂಲಕ ಹಿಂದೂಪುರ ಕಡೆಯಿಂದ ಏರ್ಪೋರ್ಟ್ಗೆ ಬರುವ ಪ್ರಮುಖ ರಸ್ತೆ ಇದಾಗಿದ್ದು, ಜಲಾವೃತಗೊಂಡಿರುವ ಕಾರಣ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹತ್ತಾರು ಕಿಲೋಮೀಟರ್ ಸುತ್ತಾಡಿಕೊಂಡು ಸಂಚರಿಸಬೇಕಿದೆ.
ಹರಿಯುತ್ತಿದೆ ಉತ್ತರ ಪಿನಾಕಿನಿ
ಚಿಕ್ಕಬಳ್ಳಾಫುರ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಮಂಚೇನಹಳ್ಳಿ ಹಾಗೂ ವಿಧುರಾಶ್ವತ್ಥ ಬಳಿ ನದಿ ಹರಿಯುವುದನ್ನು ನೋಡಲು ಜನ ಸೇರುತ್ತಿದ್ದಾರೆ.
ಕುಮಟಾದಲ್ಲಿ ಮರ ಬಿದ್ದು ಹಾನಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಮುಂಡಗೋಡ, ಕುಮಟಾದಲ್ಲಿ ಮರಗಳು ಬಿದ್ದು 12 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲೆಯಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರೀ ಮಳೆ ಸಾಧ್ಯತೆ ಹಿನ್ನೆಲೆ, ಸಮುದ್ರದ ದಡಕ್ಕೆ ಪ್ರವಾಸಿಗರು, ಸಾರ್ವಜನಿಕರು ಹೋಗದಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕರಾವಳಿ ಪ್ರದೇಶದಲ್ಲಿ ರೆಡ್ ಅಲಟ್೯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ 19ರವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆಯಿದೆ.
ಜಮಖಂಡಿ ಸುತ್ತಲೂ ಧಾರಾಕಾರ ಮಳೆ
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಸುತ್ತಮುತ್ತಲೂ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ಗೂಡಂಗಡಿಗಳು ಉರುಳಿ ಬಿದ್ದಿವೆ. ಜಮಖಂಡಿ ನಗರದ ಹೊರವಲಯದ ಕಟ್ಟೆಕೆರೆ ಬಳಿ ರಸ್ತೆ ಬದಿಯಲ್ಲಿನ ಪಾನಿಪುರಿ ಗೂಡಂಗಡಿಗಳು ಹಾರಿಹೋಗಿವೆ. ನಗರದ ಪಿ.ಬಿ.ಹೈಸ್ಕೂಲ್ ಮುಂದೆ ನೀರು ನಿಂತಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಹಾಸನ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ
ಹಾಸನ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾದಿಕಾರಿ ಸೂಚನೆಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ ಆದೇಶ ಹೊರಡಿಸಿದ್ದಾರೆ. ಬೇಸಿಗೆ ರಜೆ ಮುಗಿದು ಎರಡು ದಿನಗಳ ಹಿಂದಷ್ಟೇ ಶಾಲೆಗಳು ಆರಂಭವಾಗಿದ್ದವು. ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಮಳೆಯಿಂದ ಮಕ್ಕಳು ಶಾಲೆಗಳಿಗೆ ಬರಲು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹುಣಸೂರಿನಲ್ಲಿ ಮಳೆ ಆರ್ಭಟ
ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ಮಳೆ ಆರ್ಭಟಕ್ಕೆ ವಾರ್ಡ್ 22, 23ರಲ್ಲಿ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ರಸ್ತೆಯಲ್ಲಿ ಓಡಾಡಲೂ ಆಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬರಬೇಕೆಂದು ಜನರು ಆಗ್ರಹಿಸಿದ್ದಾರೆ.
ಬಂಗಾರಪೇಟೆ: ಕೋಡಿ ಹರಿದ ಕೆರೆಗಳು
ಬಂಗಾರಪೇಟೆ: ತಾಲ್ಲೂಕಿನಲ್ಲಿ ಕಳೆದ ರಾತ್ರಿ ಸುರಿದ ಮಳೆ ಹಿನ್ನೆಲೆಯಲ್ಲಿ ಹಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಅತ್ತಿಗಿರಿಕಪ್ಪ, ಕಾಮಸಮುದ್ರ, ಕರೆಗಳು ತುಂಬಿವೆ. ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದೆ. ರೈತರ ಮುಖದಲ್ಲಿ ಸಂತಸ ಮೂಡಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ