ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮಾರವಾರ ರಾತ್ರಿ ಭಾರೀ ಮಳೆಯಾಗಿದ್ದು, ಗಡಿಭಾಗಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಹಲವು ಮನೆಗಳು ಜಲಾವೃತಗೊಂಡಿದ್ದು, ಇನ್ನು ಕೆಲವು ಮನೆಗಳು ಕುಸಿದುಬಿದ್ದಿವೆ. ಕಲ್ಲುಗುಂಡಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಅಂಗಡಿಗಳು ಜಲಾವೃತಗೊಂಡಿದ್ದು, 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿವೆ.
ಪವಾಡಸದೃಷ್ಯ ರೀತಿಯಲ್ಲಿ ಮಹಿಳೆ-ಮಕ್ಕಳು ಪಾರು
ಮನೆಯೊಂದರಲ್ಲಿ ಪವಾಡಸದೃಷ್ಯ ರೀತಿಯಲ್ಲಿ ಮಹಿಳೆ ಮತ್ತು ಮಕ್ಕಳು ಪಾರಾದ ಘಟನೆಯೊಂದು ಕಲ್ಲುಗುಂಡಿಯಲ್ಲಿ ನಡೆದಿದೆ. ನೀರಿನ ಒತ್ತಡಕ್ಕೆ ಕರುಣಾಕರ ಎಂಬವರ ಮನೆ ಬಾಗಿಲುಗಳು ಮುಚ್ಚಿಹೋಗಿದ್ದು, ಸೆರೆಗಳ ಮೂಲಕ ಮನೆಯೊಳಗೆ ನೀರು ನುಗ್ಗಿದೆ. ಈ ವೇಳೆ ಮನೆಯೊಳಗಿದ್ದ ಮಹಿಳೆಯ ಕುತ್ತಿಗೆ ಭಾಗದವರೆಗೆ ನೀರು ತುಂಬಿದ್ದು, ಇನ್ನೇನು ಜೀವ ಉಳಿಯಲು ಸಾಧ್ಯವಿಲ್ಲ ಎನ್ನುವಷ್ಟರಲ್ಲಿ ಬಾಗಿಲು ಒಡೆದಿದೆ. ನಿರಂತರ ನಾಲ್ಕು ಗಂಟೆಗಳ ಕಾಲ ಕಿಟಕಿಯಲ್ಲಿ ನಿಂತುಕೊಂಡ ಮಹಿಳೆ ಮತ್ತು ಮಕ್ಕಳು ಅದೃಷ್ಟವಾಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಘಟನೆಯಲ್ಲಿ ಕರುಣಾಕರ ಅವರ ಪ್ರೀತಿಯ ನಾಯಿ ಸಾವನ್ನಪ್ಪಿದೆ.
ಕಲ್ಲುಗುಂಡಿಯಲ್ಲಿ ಭಯಾನಕ ಪರಿಸ್ಥಿತಿ
ಕಲ್ಲುಗುಂಡಿಯಲ್ಲಿ ರಣಾರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಮಧ್ಯರಾತ್ರಿಯಿಂದ ಸುರಿಯಲು ಆರಂಭವಾದ ಭಾರೀ ಮಳೆ ಹಾಗೂ ನದಿಯ ಆರ್ಭಟಕ್ಕೆ ಗ್ರಾಮವೇ ಜಲಾವೃತಗೊಂಡಿದೆ. ಪರಿಣಾಮವಾಗಿ ಮನೆಗಳ ಒಳಗೆ ನೀರು ನುಗ್ಗಿ ಎಲ್ಲವನ್ನೂ ಹಾನಿಗೊಳಿಸಿದೆ. ಇದರಿಂದಾಗಿ ಜನರಿಗೆ ಉಡಲು ಬಟ್ಟೆಯೂ ಇಲ್ಲ, ಒಂದು ತೊಟ್ಟು ಕುಡಿಯುವ ನೀರು ಇಲ್ಲದಂತಾಗಿದೆ. ಕಳೆದ ರಾತ್ರಿ 12.30 ರಿಂದ ಬೆಳಗ್ಗಿನ ಜಾವ 5 ಗಂಟೆಯವರೆಗೂ ಗ್ರಾಮದ ಜನರು ಭಯಾನಕ ಪರಿಸ್ಥಿತಿಯನ್ನು ಎದುರಿಸಿದರು.