ಭಟ್ಕಳ: ಮುಟ್ಟಳ್ಳಿಯಲ್ಲಿ ನಾಲ್ವರಿದ್ದ ಮನೆ ಮೇಲೆ ಕುಸಿದ ಗುಡ್ಡ, ಮಳೆಯಿಂದ ಕಾರವಾರ-ಭಟ್ಕಳ ಸಂಪರ್ಕ ಕಡಿತ
ಮನೆಯ ಮೇಲೆ ಕುಸಿದಿರುವ ಮಣ್ಣು ತೆರವುಗೊಳಿಸಿ, ಒಳಗೆ ಸಿಲುಕಿರುವವರನ್ನು ಕಾಪಾಡಲು ಅಕ್ಕಪಕ್ಕದ ಜನರೂ ಶ್ರಮಿಸುತ್ತಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದಿದೆ. ಮನೆಯಲ್ಲಿದ್ದ ನಾಲ್ವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆಯಾದರೂ, ಈವರೆಗೆ ಅವರ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಕ ಮತ್ತು ತುರ್ತುಸೇವೆಗಳು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದೆ. ಆದರೆ ಮಳೆನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ದುರಂತ ಸ್ಥಳ ತಲುಪಲು ಈವರೆಗೆ ಸಾಧ್ಯವಾಗಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಯು ಸ್ಥಳಕ್ಕೆ ಜೆಸಿಬಿ ಕಳಿಸಲು ಯತ್ನಿಸುತ್ತಿದೆ. ಆದರೆ ರಸ್ತೆ ಹಾಳಾಗಿರುವುದರಿಂದ ಅದೂ ಸಾಧ್ಯವಾಗಿಲ್ಲ. ಮನೆಯ ಮೇಲೆ ಕುಸಿದಿರುವ ಮಣ್ಣು ತೆರವುಗೊಳಿಸಿ, ಸಿಲುಕಿರುವವರನ್ನು ಕಾಪಾಡಲು ಅಕ್ಕಪಕ್ಕದ ಜನರೂ ಶ್ರಮಿಸುತ್ತಿದ್ದಾರೆ.
ಮನೆಯ ಮೇಲೆ ಗುಡ್ಡ ಕುಸಿದಾಗ ಯಜಮಾನಿ ಲಕ್ಷ್ಮೀ ನಾರಾಯಣ ನಾಯ್ಕ (60), ಮಗಳು ಲಕ್ಷ್ಮೀ ನಾರಾಯಣ ನಾಯ್ಕ (45), ಮಗ ಅನಂತ ನಾರಾಯಣ ನಾಯ್ಕ (38), ಹಾಡುವಳ್ಳಿ ಬಡಬಾಗಿಲಿನ ತಂಗಿಮಗ ಪ್ರವೀಣ್ ರಾಮಕೃಷ್ಣ ನಾಯ್ಕ (16) ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಗುಡ್ಡ ಕುಸಿದು ನಾಲ್ವರು ಮೃತಪಟ್ಟಿರುವ ಸಾಧ್ಯತೆ ಇದೆ. ಅಧಿಕೃತವಾಗಿ ಇನ್ನೂ ನಮಗೆ ಮಾಹಿತಿ ಸಿಕ್ಕಿಲ್ಲ. ಜಿಲ್ಲೆಯ ವಿವಿಧೆಡೆ ಸಂತ್ರಸ್ತರನ್ನು ಕಾಪಾಡುವ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು. ಉಪವಿಭಾಗಾಧಿಕಾರಿ ಮಮತಾ ದೇವಿ ಮಾತನಾಡಿ, ‘ಮಳೆ ಪ್ರಮಾಣ ಬೆಳಿಗ್ಗೆಗೆ ಹೋಲಿಸಿದರೆ ಕಡಿಮೆಯಾಗಿದೆ. ರಸ್ತೆಗಳು ಮುಳುಗಿರುವುದರಿಂದ ಮುಟ್ಟಳ್ಳಿ ತಲುಪಲು ರಕ್ಷಣಾ ತಂಡಗಳಿಗೆ ಈವರೆಗೆ ಸಾಧ್ಯವಾಗಿಲ್ಲ. ಬದಲಿ ಮಾರ್ಗದಿಂದ ಸ್ಥಳ ತಲುಪಲು ಇದೀದ ಪ್ರಯತ್ನ ಆರಂಭಿಸಲಾಗಿದೆ. ಕುಂದಾಪುರದಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದಾರೆ’ ಎಂದು ವಿವರಿಸಿದರು.
‘ಮನೆಯ ಮೇಲೆ ಗುಡ್ಡದ ಮಣ್ಣು ಬಿದ್ದಿದೆ. ಒಳಗೆ ಇದ್ದವರ ಪರಿಸ್ಥಿತಿ ಬಗ್ಗೆ ಮಾಹಿತಿ ಇನ್ನೂ ತಿಳಿದುಬಂದಿಲ್ಲ’ ಎಂದು ಭಟ್ಕಳ ತಹಶೀಲ್ದಾರ್ ಸುಮಂತ್ ಹೇಳಿದರು. ‘ರಾತ್ರಿ ಮನೆಯೊಳಗೆ ಮಲಗಿದ್ದಾಗ ಏಕಾಏಕಿ ಗುಡ್ಡ ಕುಸಿದಿದೆ. ಮನೆ ಕುಸಿದಿಲ್ಲ, ಆದರೆ ಮನೆಯ ಮೇಲೆ ಮಣ್ಣು ಬಿದ್ದಿದೆ. ಪ್ರವಾಹ ಸಂತ್ರಸ್ತರರನ್ನು ದೋಣಿಗಳಲ್ಲಿ ದಡಕ್ಕೆ ಕರೆದುಕೊಂಡು ಬರುತ್ತಿದ್ದೇವೆ. ಗಂಜಿಕೇಂದ್ರಗಳನ್ನು ಆರಂಭಿಸಿ, ಊಟ-ತಿಂಡಿಗೆ ವ್ಯವಸ್ಥೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 4 ಕಾಳಜಿ ಕೇಂದ್ರಗಳು ಕೆಲಸ ಮಾಡುತ್ತಿದ್ದು, 180 ಮಂದಿ ಆಶ್ರಯ ಪಡೆದಿದ್ದಾರೆ’ ಎಂದು ಅವರು ವಿವರಿಸಿದರು.
ಮುಟ್ಟಳ್ಳಿ ಭೂಕುಸಿತ: ಶವಗಳು ಪತ್ತೆ
ಮುಟ್ಟಳ್ಳಿ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದಿದ್ದರಿಂದ ಮಣ್ಣಿನಲ್ಲಿ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಅನಂತ ನಾರಾಯಣ ನಾಯ್ಕ, ಲಕ್ಷ್ಮೀ ಮೃತದೇಹ ಪತ್ತೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನಲ್ಲಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ಶಿರಾಲಿ ಮತ್ತು ರಂಗಿನಕಟ್ಟೆ ಗ್ರಾಮಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಬೈಂದೂರು ರಸ್ತೆ ಸಂಪೂರ್ಣ ಬಂದ್ ಆಗಿರುವುದರಿಂದ ಜನರು ಪರದಾಡುತ್ತಿದ್ದಾರೆ. ಕಾರವಾರ-ಭಟ್ಕಳ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡು ಕಿಲೊಮೀಟರ್ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ.
Published On - 10:53 am, Tue, 2 August 22