“26 ಕಾಂಗ್ರೆಸ್ ಶಾಸಕರಿದ್ದರೂ ಸೋತಿದ್ದೇಕೆ?”: ವಿಧಾನ ಪರಿಷತ್ ಚುನಾವಣಾ ಫಲಿತಾಂಶಕ್ಕೆ ಶಾಸಕ ಕೆ.ಎನ್. ರಾಜಣ್ಣ ಬಹಿರಂಗ ಅಸಮಾಧಾನ
ನಾಲ್ಕು ಎಂಎಲ್ಸಿ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ ಮೂಡಿಸಿವೆ ಎಂದು ರಾಜಣ್ಣ ತಿಳಿಸಿದ್ದಾರೆ. 35 ವಿಧಾನಸಭಾ ಕ್ಷೇತ್ರಗಳ ಪೈಕಿ 26ರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸೋಲು ಅನುಭವಿಸಿರುವುದು ವಿಪರ್ಯಾಸ. ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲವೇ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಇಂದಿನ ರಾಜಕೀಯ ವೇಗವಾಗಿ ಬದಲಾಗುತ್ತಿದೆ ಎಂದರು.
ತುಮಕೂರು, ಅ.28: ಎಂಎಲ್ಸಿ ಚುನಾವಣಾ ಫಲಿತಾಂಶಗಳು ನಮ್ಮಲ್ಲಿ ನಿರಾಸೆ ಮೂಡಿಸಿವೆ ಎಂದು ಕಾಂಗ್ರೆಸ್ ಶಾಸಕ ರಾಜಣ್ಣ ಕಳವಳ ವ್ಯಕ್ತಪಡಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ 35 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇಷ್ಟಾದರೂ ಪಕ್ಷ ಸೋಲು ಅನುಭವಿಸಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟರು. ಪಕ್ಷದ ಶಾಸಕರು ಆಯಾ ತಾಲೂಕುಗಳಲ್ಲಿ ಸರಿಯಾಗಿ ಕೆಲಸ ಮಾಡಿಲ್ಲವೇನೋ ಎಂಬ ಅನುಮಾನ ವ್ಯಕ್ತಪಡಿಸಿದರು. ಮತದಾರರ ಪಟ್ಟಿಯಲ್ಲಿ ಮೊಬೈಲ್ ನಂಬರ್‌ಗಳು ಲಭ್ಯವಿದ್ದು, ಮತದಾರರನ್ನು ಸಂಪರ್ಕಿಸಲು ಸುಲಭವಿತ್ತು. ಹಾಗಿದ್ದರೂ ಸೋಲು ಅನುಭವಿಸಿರುವುದು ಆಶ್ಚರ್ಯಕರ. ಮೊದಲ ಪ್ರಾಶಸ್ತ್ಯದ ಮತದಲ್ಲಿ ಗೆಲ್ಲಲು ಶೇ. 51ರಷ್ಟು ಮಾನ್ಯ ಮತಗಳು ಬರಬೇಕು. ಈ ಫಲಿತಾಂಶಗಳು ಪ್ರಸ್ತುತ ರಾಜಕೀಯದ ವೇಗದ ಬದಲಾವಣೆಯನ್ನು ಸೂಚಿಸುತ್ತವೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಾಗಿದ್ದಾರೆ ಎಂದು ರಾಜಣ್ಣ ಬಣ್ಣಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

