ಭೂಗಳ್ಳರ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಲು ಮುಂದಾದ ರಾಮನಗರ ಜಿಲ್ಲಾಡಳಿತ; ಈ ಕಾರ್ಯಕ್ಕೆ ರೈತರಿಂದ ಪ್ರಶಂಸೆ
ಕೆರೆಗಳ ಒತ್ತುವರಿ ಬಗ್ಗೆ ಪರಿಸರ ಪ್ರೇಮಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಸಾಕಷ್ಟು ಹೋರಾಟ ಸಹ ಮಾಡುತ್ತಿದ್ದರು. ಹೀಗಾಗಿ ರಾಮನಗರ ಜಿಲ್ಲಾಡಳಿತ, ಸರ್ವೆ ಇಲಾಖೆ ಮೂಲಕ 330 ಕೆರೆಗಳನ್ನು ಸರ್ವೆ ಮಾಡಿಸಿದ್ದು, ಇದುವರೆಗೂ 234 ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಿದೆ.
ರಾಮನಗರ: ಸರ್ಕಾರಿ ಜಮೀನು ಹಾಗೂ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವ ಕಾನೂನುಬಾಹಿರ ಕಾರ್ಯಗಳು ಇತ್ತೀಚೆಗೆ ಹಲವು ಕಡೆಗಳಲ್ಲಿ ನಡೆಯುತ್ತಲೇ ಇದೆ. ಇಂತಹದ್ದೇ ಪ್ರಕರಣಗಳು ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೂದಲಳತೆ ದೂರದಲ್ಲಿರುವ ಜಿಲ್ಲೆ ರಾಮನಗರದಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣ ರಾಮನಗರದ ಭೂಮಿಯ ಇಂಚಿಂಚಿಗೂ ಬಂಗಾರದ ಬೆಲೆ ಇರುವುದೇ ಆಗಿದೆ. ಆದರೆ ಸದ್ಯ ಜಿಲ್ಲಾಡಳಿತ ಈ ಅಕ್ರಮದ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಸರ್ಕಾರಿ ಜಮೀನು ಹಾಗೂ ಕೆರೆಗಳನ್ನು ಒತ್ತುವರಿ ಮಾಡಿಕೊಂಡ ಭೂಗಳ್ಳರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಜ್ಜಾಗಿದೆ.
ರಾಮನಗರ ಜಿಲ್ಲೆಯಲ್ಲಿ ಕೆರೆ ಒತ್ತುವರಿ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ. ಅಶ್ವತ್ ನಾರಾಯಣ್ ಸೂಚನೆ ನೀಡಿದ್ದು, ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಭೂಗಳ್ಳರ ಕಣ್ಣು ಬಹಳ ಪ್ರಮುಖವಾಗಿ ಸರ್ಕಾರಿ ಭೂಮಿ ಹಾಗೂ ಕೆರೆಗಳ ಮೇಲೆ ಬಿದ್ದಿದೆ. ಹೀಗಾಗಿ ಜಿಲ್ಲೆಯಲ್ಲಿ ನೂರಾರು ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದನ್ನು ಮನಗಂಡ ಜಿಲ್ಲಾಡಳಿತ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳಲು ರಾಮನಗರದ ಕೆರೆಗಳನ್ನು ಸರ್ವೆ ಮಾಡಲು ಮುಂದಾಗಿದೆ.
ರಾಮನಗರ ಜಿಲ್ಲೆಯಲ್ಲಿ 2,500 ಕೆರೆಗಳು ಇವೆ. ಇವುಗಳಲ್ಲಿ ಭೂಗಳ್ಳರು ಹಲವು ಕೆರೆಗಳ ನೂರಾರು ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಪರಿಸರ ಪ್ರೇಮಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಸಾಕಷ್ಟು ಹೋರಾಟ ಸಹ ಮಾಡುತ್ತಿದ್ದರು. ಹೀಗಾಗಿ ರಾಮನಗರ ಜಿಲ್ಲಾಡಳಿತ, ಸರ್ವೆ ಇಲಾಖೆ ಮೂಲಕ 330 ಕೆರೆಗಳನ್ನು ಸರ್ವೆ ಮಾಡಿಸಿದ್ದು, ಇದುವರೆಗೂ 234 ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಉಳಿದ ಕೆರೆಗಳ ಸರ್ವೆ ನಡೆದರೇ ಮತ್ತುಷ್ಟು ಕೆರೆಗಳು ಒತ್ತುವರಿಯಾಗಿರುವುದು ಸಹಾ ಬೆಳಕಿಗೆ ಬರಲಿದೆ.
ಜಿಲ್ಲಾಡಳಿತ ಹಾಗೂ ಡಿಸಿಎಂ ಅವರ ಈ ಕ್ರಮವನ್ನು ರೈತರು ಕೂಡ ಸ್ವಾಗತಿಸಿದ್ದು, ಕೂಡಲೇ ಒತ್ತುವರಿಯಾಗಿರುವ ಕೆರೆಗಳನ್ನ ತೆರೆವು ಮಾಡಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ರಾಮನಗರ ಜಿಲ್ಲಾಡಳಿತ ಭೂಗಳ್ಳರ ವಿರುದ್ಧ ಸಮರ ಸಾರಿದ್ದು, ಇದೀಗ ಭೂಗಳ್ಳರಿಗೆ ನಡುಕ ಉಂಟಾಗಿದೆ. ಇದು ಹೇಳಿಕೆಗೆ ಮಾತ್ರ ಸೀಮಿತವಾಗದೇ ಕೆರೆಗಳನ್ನು ಉಳಿಸುವ ಕೆಲಸ ರಾಮನಗರ ಜಿಲ್ಲಾಡಳಿತದಿಂದ ಆಗಬೇಕಿದೆ.
ಇದನ್ನೂ ಓದಿ:
ಲಾಕ್ಡೌನ್ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ; ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ
ರಾಮನಗರದಲ್ಲಿ ಮ್ಯಾನ್‌ಹೋಲ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಅಶ್ವತ್ಥ್ ನಾರಾಯಣ