ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಬಿಜೆಪಿ ಪ್ಲಾನ್; ಹಿಂದೂ ಫೈರ್ ಬ್ಯ್ರಾಂಡ್ ಕರೆಸಲು ಚಿಂತನೆ
ರಾಮನಗರ ಹಳೇ ಮೈಸೂರಿನ ಹೆಬ್ಬಾಗಿಲು. ಜೆಡಿಎಸ್ನ ಭದ್ರಕೋಟೆ. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ಬಲಿಷ್ಠವಾಗಿದೆ. ಇಂತಹ ಕ್ಷೇತ್ರವನ್ನ ಕಬ್ಜ ಮಾಡಲು ಕೇಸರಿ ಪಡೆ ಮುಂದಾಗಿದ್ದು, ರಾಮಮಂದಿರ ಅಸ್ತ್ರವನ್ನ ಪ್ರಯೋಗಿಸುವ ಮೂಲಕ ಕೈ ಹಾಗೂ ದಳವನ್ನ ಕಟ್ಟಿಹಾಕಲು ಪ್ಲಾನ್ ಮಾಡಿದೆ.
ರಾಮನಗರ: ಹಳೇ ಮೈಸೂರಿನ ಹೆಬ್ಬಾಗಿಲು ಜೆಡಿಎಸ್ನ ಭದ್ರಕೋಟೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಕೂಡ ಕ್ಷೇತ್ರದಲ್ಲಿ ಬಲಿಷ್ಟವಾಗಿದೆ. ಇಂತಹ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅನ್ನ ಕಟ್ಟಿ ಹಾಕಿ, ರಾಮನಗರವನ್ನ ಕಬ್ಜ ಮಾಡಲು ಕೇಸರಿ ಪಡೆ ರಣತಂತ್ರ ರೂಪಿಸಿದೆ. ಅಂದಹಾಗೆ ರಾಮನಗರದಲ್ಲಿ ಕಮಲ ಅರಳಿಸಲು ಹಿಂದೂ ಮತಗಳನ್ನ ಸೆಳೆಯಲು ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲಾನ್ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಜೆಟ್ನಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರವೇ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ.
ಅಂದಹಾಗೆ ರಾಮಮಂದಿರ ನಿರ್ಮಾಣ ಶಂಕುಸ್ಥಾಪನೆಗೂ ಮೊದಲು ಡಿಪಿಆರ್ ತಯಾರಾಗಬೇಕು. ಈಗಾಗಲೇ ಡಿಪಿಆರ್ ತಯಾರು ಮಾಡುವ ಕೆಲಸ ತುರ್ತಾಗಿ ನಡೆಯುತ್ತಿದೆ. ಸ್ವತಃ ಸಿಎಂ ಬೊಮ್ಮಾಯಿ ಅವರೇ ವೈಯಕ್ತಿಕವಾಗಿ ತೆಗೆದುಕೊಂಡಿದ್ದು, ಶೀಘ್ರವೇ ಡಿಪಿಆರ್ ತಯಾರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನೇನೂ ಕೆಲವೇ ದಿನಗಳಲ್ಲಿ ಚುನಾವಣೆ ಇದೆ. ನೀತಿ ಸಂಹಿತೆ ಜಾರಿಯಾಗುವ ಮೊದಲೇ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಬಿಜೆಪಿ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನು ಶಂಕುಸ್ಥಾಪನೆಗೆ ಹಿಂದೂ ಫೈರ್ ಬ್ಯ್ರಾಂಡ್ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಅವರನ್ನ ಕರೆಸಲು ಚಿಂತನೆ ನಡೆಸಿದೆ.
ಇದನ್ನೂ ಓದಿ:ಫ್ಲೆಕ್ಸ್ ವಿಚಾರಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ
ಇನ್ನು ಈ ಬಗ್ಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ್ಗೆ ಸೂಚಿಸಿರುವ ಸಿಎಂ, ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಮೊದಲ ಹೆಜ್ಜೆಯಾಗಿ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸೋಣಾ. ತ್ವರಿತವಾಗಿ ಸಿದ್ದಪಡಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ರಾಮನಗರ ಕಬ್ಜ ಹಾಗೂ ಹಳೇ ಮೈಸೂರು ಭಾಗದಲ್ಲಿ ಹಿಂದೂ ಮತಗಳನ್ನ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಒಟ್ಟಾರೆ ರಾಮನಗರದಲ್ಲಿ ದಳಪತಿ ಹಾಗೂ ಕನಕಪುರ ಬಂಡೆಯನ್ನು ಕಟ್ಟಿಹಾಕಲು ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ, ರಾಮಮಂದಿರಕ್ಕೆ ಶಂಕುಸ್ಥಾಪನೆ ಮಾಡಿ ಹಿಂದೂ ಮತಗಳನ್ನ ಸೆಳೆದು ರಾಮನಗರದಲ್ಲಿ ಕಮಲ ಅರಳಿಸಲು ಮುಂದಾಗಿದೆ.
ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Sat, 18 March 23