ರಾಮನಗರ, ಅ.04: ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಗೊತ್ತೇ ಇದೆ. ಅದೆಷ್ಟೋ ಸಿನಿಮಾಗಳಲ್ಲಿ ನಟರು ತಮ್ಮ ಪ್ರೀತಿಯನ್ನು ಬಚ್ಚಿಟ್ಟು ತಾನು ಪ್ರೀತಿಸುವ ಹುಡುಗಿಯನ್ನು ತನ್ನ ಸ್ನೇಹಿತನ ಜೊತೆ ಮದುವೆ ಮಾಡಿಸಿ ತ್ಯಾಗಮಹಿ ಅನಿಸಿಕೊಂಡು ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಭಾವನೆಗಳಲ್ಲಿ ಕೊಂಚ ಭಿನ್ನವಾಗಿ ರಾಮನಗರದಲ್ಲಿ ಇದೇ ಮಾದರಿಯ ಘಟನೆ ನಡೆದಿದೆ. ತಾನು ಇಷ್ಟಪಟ್ಟ ಯುವತಿಯನ್ನು ತನ್ನ ಸ್ನೇಹಿತ ಕೇಳಿದನೆಂದು ಯುವತಿಗೂ ವಿಷಯ ತಿಳಿಸದೇ ಈಗಾಗಲೇ ಮದುವೆ ಆಗಿದ್ದ ಸ್ನೇಹಿತನಿಗೆ ಯುವತಿಯನ್ನು ಬಿಟ್ಟುಕೊಟ್ಟು ಮತ್ತೊಮ್ಮೆ ಮದುವೆ ಆಗಲು ಸಹಾಯ ಮಾಡಿದ್ದಾನೆ. ಸದ್ಯ ಕಿಡ್ನಾಪ್ ಕೇಸ್ನಲ್ಲಿ ಇಬ್ಬರು ಯುವಕರನ್ನು ಐಜೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಜು(21), ರವಿ (33) ಬಂಧಿತ ಆರೋಪಿಗಳು.
ರಾಮನಗರ ಪಟ್ಟಣದ ಐಜೂರಿನ ನ್ಯೂ ಎಕ್ಸಪರ್ಟ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯ ಜೊತೆಗೆ ಮಂಜು ಸಲುಗೆ ಬೆಳೆಸಿದ್ದ. ಇವರಿಬ್ಬರು ಭೇಟಿ ಮಾಡಿದಾಗ ಕೆಲವು ಫೋಟೋಗಳನ್ನು ತೆಗೆಸಿಕೊಂಡಿದ್ದರು. ಅಲ್ಲದೆ ಮಂಜು ತನ್ನ ಸ್ನೇಹಿತ ರವಿ ಬಳಿ ಹೋಗಿ ತಾನೊಬ್ಬ ಯುವತಿ ಪಟಾಯಿಸಿದ್ದಾಗಿ ಹೇಳಿಕೊಂಡಿದ್ದ. ಮಂಜು ಹಾಗೂ ರವಿ ಇಬ್ಬರೂ ಒಂದೇ ಗ್ರಾಮದವರು. ಮಂಜು ತಾನು ಮಾಡುತ್ತಿದ್ದ ಎಲ್ಲಾ ವಿಚಾರಗಳನ್ನು ರವಿ ಬಳಿ ಹೇಳಿಕೊಳ್ಳುತ್ತಿದ್ದ. ಮಂಜು ಹಾಗೂ ಯುವತಿಯ ಓಡಾಟ ನೋಡಿದ ರವಿ ತನ್ನ ಸ್ನೇಹಿತ ಮಂಜು ಬಳಿ ಹೋಗಿ ಆತನ ಗರ್ಲ್ ಫ್ರಂಡ್ ತನಗೆ ಕೊಡುವಂತೆ ಕೇಳಿದ್ದಾನೆ.
ನಾನು ಆಕೆಯನ್ನು ಮದುವೆ ಮಾಡಿಕೊಳ್ಳಬೇಕು ನಿನ್ನ ಗರ್ಲ್ ಫ್ರೆಂಡ್ ನನಗೆ ಕೊಡು. ನಿನೇನು ನೋಡಲು ಚೆನ್ನಾಗಿದ್ದೀಯಾ ಎಷ್ಟು ಬೇಕಾದ್ರೂ ಹುಡುಗಿಯರನ್ನು ಪಟಾಯಿಸಬಹುದು. ನನಗೆ ನಿನ್ನ ಗರ್ಲ್ ಫ್ರೆಂಡ್ ಕೊಟ್ಟರೆ ಮದುವೆ ಆಗ್ತೀನಿ ಎಂದು ಮಂಜುಗೆ ಡಿಮ್ಯಾಂಡ್ ಮಾಡಿದ್ದ. ರವಿ ಮಾತಿಗೆ ಮರಳಾದ ಮಂಜು ತಗೋ ಮದುವೆ ಮಾಡಿಕೋ ಎಂದು ಯುವತಿಯನ್ನು ರವಿಯ ಜೊತೆ ಕಳಿಸಲು ಪ್ಲ್ಯಾನ್ ಮಾಡಿದ್ದಾನೆ. ಯುವತಿಯನ್ನು ಆಟದ ಗೊಂಬೆಯಂತೆ ತನ್ನ ಕೈಯಿಂದ ತನ್ನ ಸ್ನೇಹಿತನ ಕೈಗೆ ರವಾನಿಸುವಷ್ಟು ಸುಲಭವಾಗಿ ಯುವತಿಯನ್ನು ರವಿಯ ಜೊತೆ ಕಳಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಬಾಲ ಬಿಚ್ಚಿದ ರೌಡಿಗಳು; ಉದ್ಯಮಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ, ಬೆದರಿಕೆ ಆಡಿಯೋ ಇಲ್ಲಿದೆ
ಆರೋಪಿ ರವಿಗೆ ನಾಲ್ಕು ವರ್ಷದ ಹಿಂದೆಯೇ ಮದುವೆ ಆಗಿತ್ತು. ಆದರೂ ಯುವತಿಯ ಜೊತೆ ಮತ್ತೊಂದು ಮದುವೆ ಆಗಲು ತನ್ನ ಸ್ನೇಹಿತ ಮಂಜುಗೆ ನೈಸ್ ಮಾಡಿದ್ದ. ಇದಕ್ಕೆ ಒಪ್ಪಿದ ಮಂಜು ಸೆ.19ನೇ ತಾರೀಖಿನಂದು ಭೇಟಿಯಾಗಲು ಯುವತಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ಬಿ.ಕಾಂ ಕೊನೆಯ ಎಕ್ಸಾಂ ಅರ್ಧಕ್ಕೆ ಬಿಟ್ಟು ಯುವತಿ ಮಂಜುಗಾಗಿ ಓಡೋಡಿ ಬಂದಿದ್ದಳು. ಈ ವೇಳೆ ವಿನಾಯಕ ನಗರದ ಆಂಜಿನೇಯ ದ್ವಾರದ ಬಳಿ ರವಿ ಕಾದು ನಿಂತಿದ್ದ. ಈ ವೇಳೆ ರವಿ ಜೊತೆ ತೆರಳಲು ಯುವತಿಗೆ ಮಂಜು ಕರೆ ಮಾಡಿ ತಿಳಿಸಿದ್ದಾನೆ. ಇದಕ್ಕೆ ಯುವತಿ ಒಪ್ಪಿಕೊಂಡಿಲ್ಲ. ಆಗಲ್ಲ ಎಂದಿದ್ದಾಳೆ. ಆಗ ಮಂಜು ತನ್ನ ಬಳಿ ಇರುವ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಬ್ಲ್ಯಾಕ್ ಮೇಲ್ಗೆ ಹೆದರಿದ ಯುವತಿ ರವಿ ಜೊತೆ ತೆರಳಿದ್ದಾಳೆ. ಬಳಿಕ ರವಿ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದುಕೊಂಡು ಹೋಗಿ ತಾಯತದ ದಾರ ಕಟ್ಟಿ ಅದೇ ತಾಳಿ ನಾನು ನಿನ್ನ ಜೊತೆ ಮದುವೆ ಆಗಿದ್ದೀನಿ. ನಾನೇ ನಿನ್ನ ಗಂಡ ಎಂದು ಹೇಳಿದ್ದಾನೆ. ತನ್ನ ಊರಲ್ಲಿ ಇದ್ದರೆ ಯುವತಿ ಮನೆಯವರು ಬಂದು ಹಲ್ಲೆ ಮಾಡುತ್ತಾರೆಂದು ಸಂಜೆ ವೇಳೆ ಚಾಮರಾಜನಗರ ನಗರಕ್ಕೆ ತೆರಳಿದ್ದಾರೆ. ತನ್ನ ಸಂಬಂಧಿಕ ಮನೆಗೆ ತೆರಳಿ ಉಳಿದುಕೊಳ್ಳಲು ಜಾಗ ಕೇಳಿದ್ದಾರೆ. ಯುವತಿ ಪರಿಸ್ಥಿತಿ ಕಂಡು ಸಂಬಂಧಿಕರು ಅವಕಾಶ ಮಾಡಿ ಕೊಟಿಲ್ಲ. ಇವತ್ತು ಬೇಡ, ಬೆಳಿಗ್ಗೆ ಬಾ ಎಂದು ಕಳಿಸಿದ್ದಾರೆ. ಮತ್ತೆ ರಾತ್ರಿ ಚಾಮರಾಜನಗರ ನಗರದಿಂದ ತುಮಕೂರಿಗೆ ತೆರಳಿದ್ದ ರವಿ, ಯುವತಿಯನ್ನು ಬಲವಂತವಾಗಿ ಕೂಡಿ ಹಾಕಿ, ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲೀಕನ ಬಳಿ ಹೋಗಿ ಬಹಳ ವರ್ಷದಿಂದ ಯುವತಿ ಲವ್ ಮಾಡುತ್ತಿದ್ದೆ, ಮದುವೆ ಆಗಿದ್ದೀನಿ ಎಂದು ಕಥೆ ಕಟ್ಟಿದ್ದಾನೆ. ಇದೇ ವೇಳೆ ವಿಷಯ ಗೊತ್ತಾಗಿ ರವಿ ಟ್ರ್ಯಾಕ್ ಮಾಡುತ್ತಿದ್ದ ಐಜೂರು ಪೊಲೀಸರು ಮಂಜುನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.
ಆಗ ಯುವತಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ಮಂಜು ಬಾಯ್ಬಿಟ್ಟಿದ್ದಾನೆ. ನಂತರ ರವಿಯನ್ನು ಪತ್ತೆ ಹಚ್ಚಿ ಯುವತಿಯನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:44 am, Wed, 4 October 23