JDS: ಜನತಾ ಜಲಧಾರೆ -ಜಲ ಸಂಗ್ರಹಕ್ಕೆ ಹೊರಟ 15 ಗಂಗಾ ರಥಗಳನ್ನು ಬೀಳ್ಕೊಟ್ಟ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
HD Deve Gowda: ರಾಜ್ಯದ ನೀರಾವರಿ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ ಕಾರಣಕ್ಕೆ ತಮಗಾದ ನೋವನ್ನು ಮಾಜಿ ಪ್ರಧಾನಮಂತ್ರಿ ದೇವೇಗೌಡರು ಸಮಾವೇಶದಲ್ಲಿ ತೋಡಿಕೊಂಡರು. ರಾಜ್ಯ ಅನೇಕ ನೀರಾವರಿ ಕಷ್ಟಗಳನ್ನು ಅನುಭವಿಸುತ್ತಿದೆ. ಲೋಕಸಭೆಯಲ್ಲಿ ನನಗಾದ ಅವಮಾನ ಅಷ್ಟಿಷ್ಟಲ್ಲ. ಆದರೆ, ಎಲ್ಲ ನೀರಾವರಿ ಯೋಜನೆಗಳ ಜಾರಿಗೆ ನನ್ನ ಕೊನೆ ಉಸಿರು ಇರುವ ತನಕ ಹೋರಾಟ ಮಾಡುವೆ ಎಂದು ಆಕ್ರೋಶದಿಂದ ಹೇಳಿದರು.
ರಾಮನಗರ: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕೃಷಿ ಮತ್ತು ಕುಡಿಯಲು ಸಮೃದ್ಧ ನೀರು ಒದಗಿಸುವ ಮಹಾ ಸಂಕಲ್ಪದೊಂದಿಗೆ ಜೆಡಿಎಸ್ ಪಕ್ಷವೂ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಲ ಸಂಗ್ರಹಕ್ಕೆ ಹೊರಟ 15 ಗಂಗಾ ರಥಗಳಿಗೆ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಚಾಲನೆ ನೀಡಿದರು. ರಾಮನಗರದಲ್ಲಿ ಇಂದು ಗ್ರಾಮದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದ ನಂತರ, ರಾಜ್ಯದ 15 ಸ್ಥಳಗಳಲ್ಲಿ ಇದೇ ಏಪ್ರಿಲ್ ತಿಂಗಳ 16 ರಂದು ಜಲ ಸಂಗ್ರಹಕ್ಕೆ ಹೊರಟ ಗಂಗಾ ರಥಗಳನ್ನು ಮಾಜಿ ಪ್ರಧಾನಿ ಬೀಳ್ಕೊಟ್ಟರು. ಈ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪಕ್ಷದ ಎಲ್ಲ ಶಾಸಕರು, ಮುಖಂಡರು, ಜಿಲ್ಲಾ ನಾಯಕರು ಹಾಜರಿದ್ದರು. ಬಳಿಕ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಿತು. ವೇದಿಕೆಯಲ್ಲಿ ವಿಧಾನ ಸಭೆ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಅನಿತಾ ಕುಮಾರಸ್ವಾಮಿ, ಸುರೇಶ್ ಗೌಡ, ಅನ್ನದಾನಿ, ಡಾ. ಶ್ರೀನಿವಾಸಮೂರ್ತಿ, ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಮುಖಂಡರಾದ ಶರವಣ, ಅಪ್ಪಾಜಿಗೌಡ ಮುಂತಾದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಇದೇ ವೇಳೆ, ದೇವೇಗೌಡರಿಂದ ಪಕ್ಷದ ಬಾವುಟವನ್ನು ಸ್ವೀಕರಿಸುವ ಮೂಲಕ ಮಾಗಡಿ ಶಾಸಕ ಎ. ಮಂಜುನಾಥ್ ಅವರು ರಾಮನಗರ ಜಿಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಎಲ್ಲರ ಗಮನ ಸೆಳೆದ ಜಲಧಾರೆ ಗೀತೆ: ವೇದಿಕೆಯ ಕಾರ್ಯಕ್ರಮದಲ್ಲಿ ನುಡಿಸಿದ ಜಲಧಾರೆ ಗೀತೆ ಎಲ್ಲರ ಗಮನ ಸೆಳೆಯಿತು. ‘ನಮ್ಮೂರಿನ ನದಿ ನಮಗೆ ತೀರ್ಥವು, ಕಾಪಾಡಲು ಕಂಕಣವ ತೊಟ್ಟೆವು…’ ಎಂಬ ಸಾಲುಗಳಿಂದ ಆರಂಭವಾಗುವ ಜಲಧಾರೆ ವಿಡಿಯೋ ಗೀತೆಯನ್ನು ಸಮಾವೇಶದಲ್ಲಿ ಪ್ರಸಾರ ಮಾಡಲಾಯಿತು. ಜಲಧಾರೆಯ ರಥಗಳಲ್ಲಿ ಈ ಹಾಡು ಮೊಳಗಲಿದೆ.
ಇದರೊಂದಿಗೆ ರಾಜ್ಯದ ಜಲ ಸಮಸ್ಯೆಗಳು, ಯೋಜನೆಯ ವಿವರ, ಕಾಮಗಾರಿಗಳ ವಿವರ, ನೀರಾವರಿ ವಿಚಾರಗಳು, ರಾಷ್ಟ್ರೀಯ ಪಕ್ಷಗಳ ನೀರಾವರಿ ದ್ರೋಹ.. ಇತ್ಯಾದಿ ವಿಷಯಗಳ ಕುರಿತಾದ ಸಾಕ್ಷ್ಯ ಚಿತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಇದನ್ನು ಕೂಡ ರಥಯಾತ್ರೆಯಲ್ಲಿ ಪ್ರದರ್ಶನ ಮಾಡಲಾಗುವುದು.
ಸಂಸತ್ತಿನಲ್ಲಿ ಅಪಮಾನ: ಮಣ್ಣಿನ ಮಗನ ನೋವು ರಾಜ್ಯದ ನೀರಾವರಿ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ ಕಾರಣಕ್ಕೆ ತಮಗಾದ ನೋವನ್ನು ಮಾಜಿ ಪ್ರಧಾನಮಂತ್ರಿ ದೇವೇಗೌಡರು ಸಮಾವೇಶದಲ್ಲಿ ತೋಡಿಕೊಂಡರು. ರಾಜ್ಯ ಅನೇಕ ನೀರಾವರಿ ಕಷ್ಟಗಳನ್ನು ಅನುಭವಿಸುತ್ತಿದೆ. ಲೋಕಸಭೆಯಲ್ಲಿ ನನಗಾದ ಅವಮಾನ ಅಷ್ಟಿಷ್ಟಲ್ಲ. ಆದರೆ, ಎಲ್ಲ ನೀರಾವರಿ ಯೋಜನೆಗಳ ಜಾರಿಗೆ ನನ್ನ ಕೊನೆ ಉಸಿರು ಇರುವ ತನಕ ಹೋರಾಟ ಮಾಡುವೆ ಎಂದು ಆಕ್ರೋಶದಿಂದ ಹೇಳಿದರು. ನಾನಿನ್ನು ಬದುಕಿದ್ದೆನೆ. ನನ್ನ ಕೊನೆ ಉಸಿರಿರುವರೆಗೂ ನನ್ನ ರಾಜ್ಯದ ನೀರು ಉಳಿಸಲು ಹೋರಾಟ ಮಾಡುತ್ತೆನೆ. ನನಗೆ ಮಂಡಿ ನೋವು ಇರಬಹುದು. ಆದರೆ ಈ ತಲೆಯಲ್ಲಿನ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ರಾಜ್ಯದ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ತಾವು ಕೊಟ್ಟ ಕಾಣಿಕೆಯನ್ನು ಕ್ಲುಪ್ತವಾಗಿ ವಿವರಿಸಿದ ಅವರು, ಕೊಟ್ಟ ಮಾತನ್ನು ಈ ದೇವೇಗೌಡ ಯಾವತ್ತೂ ಮರೆತಿಲ್ಲ. ಎಲ್ಲವನ್ನೂ ನಡೆಸಿಕೊಂಡಿದ್ದೇನೆ. ನಾನು ಹೋರಾಟವನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಈ ಪಕ್ಷವನ್ನು ಮುಗಿಸುತ್ತೇವೆ. ಅದು ಯಾರಿಂದಲೂ ಸಾಧ್ಯ ಇಲ್ಲ ಎಂಬುದನ್ನು ನಮ್ಮ ಜನ, ಕಾರ್ಯಕರ್ತರು ನಿರೂಪಿಸಿದ್ದಾರೆ ಎಂದು ಅವರು ಹೇಳಿದರು.
ನಾನು ಇದೇ ರಾಮನಗರದಿಂದ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಆಗಿದ್ದೆ. ಇಲ್ಲಿನ ಜನ ನನ್ನನ್ನು ತಲೆ ಮೇಲೆ ಹೊತ್ತು ಗೆಲ್ಲಿಸಿದರು. ಅವರ ಋಣ ದೊಡ್ಡದು. ಈ ಪುಣ್ಯ ನೆಲದಿಂದ ಜಲಧಾರೆ ವಾಹನಗಳನ್ನು ರಾಜ್ಯದ ಎಲ್ಲಾ ಕಡೆಗಳಿಗೆ ಕಲಿಸಿಕೊಟ್ಟಿದ್ದೇನೆ. ಇದು ನನ್ನ ಪುಣ್ಯ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಇದೇ ವೇಳೆ ಭಾವಪರವಶರಾದರು.
ಜಲಧಾರೆ ಚುನಾವಣೆ ಗಿಮಿಕ್ ಅಲ್ಲ: ಜಲಧಾರೆ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್ ಅಲ್ಲ ಎಂದು ಇದೇ ವೇಳೆ ಮಾಜಿ ಪ್ರಧಾನಿ ಭಾವುಕವಾಗಿ ಹೇಳಿದರು. ನಾವು ಈಗ ನೀರಿನ ಸಂಕಷ್ಟದಲ್ಲಿ ಇದ್ದೇವೆ. ಹನಿ ನೀರಿಗಾಗಿಯೂ ಹೋರಾಟ ಮಾಡುತ್ತಿದ್ದೆವೆ. ಎಂದಿಗೂ ನಮ್ಮ ರೈತನನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ನೀರಾವರಿ ವಿಚಾರಕ್ಕೆ ಯಾವ ಪಕ್ಷ ಬೇಕಿದ್ದರೂ, ಆಹ್ವಾನ ನೀಡಿದರೆ, ನಾನು ಕೂಡ ಹೋರಾಟಕ್ಕೆ ಹೋಗುತ್ತೆನೆ ಎಂದು ಅವರು ಘೋಷಣೆ ಮಾಡಿದರು.
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಈ ರಾಮನಗರದಿಂದ ಕುಮಾರ ಪರ್ವ ಆರಂಭವಾಗಲಿದ್ದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಖಚಿತ ಎಂದರು. ಜೆಡಿಎಸ್ ಪಕ್ಷಕ್ಕೆ ಬರಲು ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಜೂನ್ ತಿಂಗಳು ಬರಲಿ, ಎಲ್ಲವೂ ನಡೆಯುತ್ತದೆ. ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಅವರು ಹೇಳಿದರು.