
ರಾಮನಗರ, (ಮಾರ್ಚ್ 04): ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸುತ್ತಲಿನ ಜಿಲ್ಲೆಗಳ ಉಪನಗರಗಳಿಗೂ ಈಗ ಬಿಎಂಟಿಸಿ (BMTC Bus) ಸೇವೆ ಆರಂಭಿಸಲಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಿಗಾಗಿ ಕಾದು ಸುಸ್ತಾಗಿದ್ದವರು ಬಿಎಂಟಿಸಿ ಮೂಲಕ ಸುಲಭವಾಗಿ ಬೆಂಗಳೂರಿಗೆ ಪ್ರಯಾಣಿಸಬಹುದು. ಈವರೆಗೂ ಕೇವಲ 40 ಕಿ.ಮೀ ದೂರದವರೆಗೂ ಸೇವೆ ಒದಗಿಸುತ್ತಿದ್ದ ಬಿಎಂಟಿಸಿ ಬಸ್‌ಗಳ ಸಂಚಾರ ವ್ಯಾಪ್ತಿಯನ್ನು ಈಗ 80ಕಿಮೀ.ಗೆ ವಿಸ್ತರಿಸಲಾಗಿದೆ. ಹೀಗಾಗಿ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೂ ಬಿಎಂಟಿಸಿ ಸೇವೆ ಲಭ್ಯವಾಗಲಿದ್ದು, ಮೊದಲ ಹಂತದಲ್ಲಿ ರಾಜಧಾನಿಯಿಂದ ಕನಕಪುರ (Kanakapura), ರಾಮನಗರಕ್ಕೆ (Ramanagara) ಎಸಿ ಬಸ್ ಸೇವೆ ಆರಂಭಿಸಲಾಗಿದೆ. ಇದರಿಂದ ರಾಮನಗರ ಜನರ ಬಹುದಿನಗಳ ಕನಸು ನನಸಾಗಿದೆ. ಹಾಗಾದ್ರೆ, ಈ ಬಸ್‌ಗಳ ಮಾರ್ಗ? ಟಿಕೆಟ್, ಪಾಸ್ ದರ ಎಷ್ಟು? ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ.
ರಾಮನಗರ ಟು ಬೆಂಗಳೂರು ಹವಾನಿಯಂತ್ರಿತ ವಜ್ರ ವಿಸ್ತಾರ ಬಸ್‌ಗಳಿಗೆ ಚಾಲನೆ ಸಿಕ್ಕಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಆರು ಹವಾನಿಯಂತ್ರಿತ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು. ಈ ಬಸ್ಗಳು ಪ್ರತಿನಿತ್ಯ ರಾಮನಗರದಿಂದ ಬೆಂಗಳೂರಿಗೆ ನಾನ್‌ಸ್ಟಾಪ್ ಸಂಚರಿಸಲಿದ್ದು, ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ಸಂಚರಿಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಇದರಿಂದ ಬೆಂಗಳೂರು ಸಂಪರ್ಕಕ್ಕಾಗಿ ಬಿಎಂಟಿಸಿ ಬಸ್ (BMTC Bus) ಬೇಡಿಕೆ ಇಟ್ಟಿದ್ದ ಸಾರ್ವಜನಿಕರ ಆಸೆಗೆ ಫಲ ಸಿಕ್ಕಿದ್ದು, ಫುಲ್ ಖುಷ್ ಆಗಿದ್ದಾರೆ.
ರಾಮನಗರದಿಂದ ಬೆಂಗಳೂರಿಗೆ, ಬನಶಂಕರಿಯಿಂದ ಕನಕಪುರದವರೆಗೆ ಈ ಸೇವೆ ಲಭ್ಯವಾಗಲಿದೆ. ವರ್ಷಗಳ ಕಾಲ ಬಿಎಂಟಿಸಿ ಬಸ್ ಸೇವೆಗಾಗಿ ಒತ್ತಾಯಿಸಿದ್ದ ಸಾರ್ವಜನಿಕರ ಬೇಡಿಕೆ ಇದೀಗ ಈಡೇರಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ವ್ಯಕ್ತವಾಗಿದೆ. ಇನ್ನೂ ಈ ಒಂದು ಸೇವೆಯನ್ನ ಚನ್ನಪಟ್ಟಣವರೆಗೂ ವಿಸ್ತರಣೆ ಮಾಡಲು ಚಿಂತನೆ ನಡೆದಿದೆ ಎಂದು ತಿಳಿದಬಂದಿದೆ.
ಕೆಬಿಎಸ್ (ಮೆಜೆಸ್ಟಿಕ್) ಟು ರಾಮನಗರ ನಡುವೆ ನಿತ್ಯ 6 ಬಸ್ಗಳು ಸಂಚರಿಸಲಿದ್ದು, ಒಂದು ಕಡೆ ಟಿಕೆಟ್ ದರ 95 ರೂಪಾಯಿ. ಇನ್ನು ಬನಶಂಕರಿ ಟು ಕನಕಪುರಕ್ಕೆ 90.ರೂ ಟಿಕೆಟ್. ಇನ್ನು ದೈನಿಕ ಪಾಸ್-180 ರೂ., ಸಾಪ್ತಾಹಿಕ ಪಾಸ್-1000 ರೂ. ಹಾಗೂ ಮಾಸಿಕ ಪಾಸಿಗೆ 2700 ರೂ. ನಿಗದಿಪಡಿಸಲಾಗಿದೆ.
ಬೆಂಗಳೂರಿನಿಂದ ಬಿಡದಿಯವರೆಗೂ ಬಿಎಂಟಿಸಿ ಸೇವೆ ನೀಡುತ್ತಿತ್ತು. ಅಲ್ಲಿಂದ 12 ಕಿ.ಮೀ ದೂರದಲ್ಲಿರುವ ರಾಮನಗರದವರೆಗೂ ಬಿಎಂಟಿಸಿ ಸೇವೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ, 40 ಕಿ.ಮೀ ವ್ಯಾಪ್ತಿಗಷ್ಟೇ ಸೀಮಿತಗೊಂಡಿದ್ದ ಬಿಎಂಟಿಸಿ ಸೇವೆಯಿಂದಾಗಿ ಈ ಸೌಲಭ್ಯ ದೊರೆತಿರಲಿಲ್ಲ. ಇದೇ ರೀತಿ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಂದ ನಿತ್ಯ ಸಾವಿರಾರು ಮಂದಿ ಕಾಲೇಜು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಓಡಾಡುತ್ತಿದ್ದಾರೆ. ಇವರೆಲ್ಲರ ಪರವಾಗಿ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸುವ ಬಗ್ಗೆ ಅನೇಕ ಬೇಡಿಕೆಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಬಿಎಂಟಿಸಿ ಸಮ್ಮತಿಸಿದ್ದು, ಮೊದಲ ಹಂತವಾಗಿ ಬೆಂಗಳೂರು ಟು ರಾಮನಗರಕ್ಕೆ ನಾನ್ ಸ್ಟಾಪ್ ವಜ್ರ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೆಂಗಳೂರು ದಕ್ಷಿಣ ಹಿಂದಿನ ರಾಮನಗರ ಜನರ ಬಹುದಿನಗಳ ಕನಸು ಅಂತೂ ನನಸಾಗಿದೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಹಲವರ ವಿರೋಧದ ನಡುವೆಯೂ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದು, ತುಮಕೂರಿನಂತೆ ಈಗ ರಾಮನಗರಕ್ಕೂ ಮೆಟ್ರೋ ವಿಸ್ತರಣೆಗೆ ಕಸರತ್ತು ನಡೆಸಿದ್ದಾರೆ.
ಒಟ್ಟಿನಲ್ಲಿ ಬಿಎಂಟಿಸಿ ಬಸ್ ಸೇವೆ ಆರಂಭವಾಗುವುದರಿಂದ ರಾಮನಗರ–ಬೆಂಗಳೂರು ನಡುವಿನ ಸಂಚಾರ ಇನ್ನಷ್ಟು ಸುಗಮವಾಗಲಿದ್ದು, ಬಹಳಷ್ಟು ಜನರಿಗೆ ಅನುಕೂಲವಾಗಲಿದೆ.
Published On - 5:23 pm, Wed, 4 March 26