ಟೌನ್​​ಶಿಪ್ ವಿವಾದ: ಕುಮಾರಸ್ವಾಮಿ ಹಣ ಕೊಟ್ಟ ಹೊರಗಿನವರನ್ನ ಕರೆಸಿದ್ರಾ? ಭುಗಿಲೆದ್ದ ಆಕ್ರೋಶ

ಬಿಡದಿ ಟೌನ್​​ಶಿಪ್ ಯೋಜನೆ ಪರ, ವಿರುದ್ಧ ರೈತರು ರಣಕಹಳೆ ಮೊಳಗಿಸಿದ್ದಾರೆ. ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಅದರಲ್ಲೂ ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್​​ ಮಧ್ಯೆ ಜಟಾಪಟಿ ಜೋರಾಗಿದೆ. ರೈತರ ಜೊತೆ ಚರ್ಚಿಸೋಣ ಎಂದು ಸವಾಲು ಹಾಕಿದ್ದ ಕುಮಾರಸ್ವಾಮಿ ಇಂದು ಬೈರಮಂಗಲಕ್ಕೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಯೋಜನೆ ಪರ ಪ್ರತಿಭಟನಾನಿರತ ರೈತರಿಂದ ಹೈಡ್ರಾಮವೇ ನಡೆದಿದೆ.

ಟೌನ್​​ಶಿಪ್ ವಿವಾದ: ಕುಮಾರಸ್ವಾಮಿ ಹಣ ಕೊಟ್ಟ ಹೊರಗಿನವರನ್ನ ಕರೆಸಿದ್ರಾ? ಭುಗಿಲೆದ್ದ ಆಕ್ರೋಶ
ಬಿಡದಿ ಟೌನ್​ಶಿಪ್ ವಿವಾದ
Image Credit source: tv9 kannada
Edited By:

Updated on: Jun 27, 2026 | 3:39 PM

ಮುಖ್ಯಾಂಶಗಳು

  • ಬಿಡದಿ ಟೌನ್​​ಶಿಪ್ ಯೋಜನೆ ಪರ, ವಿರುದ್ಧ ರೈತರ ರಣಕಹಳೆ
  • ಬೈರಮಂಗಲಕ್ಕೆ ಹೆಚ್​ಡಿ ಕುಮಾರಸ್ವಾಮಿ ಭೇಟಿ
  • ಹೆಚ್​ಡಿ ಕುಮಾರಸ್ವಾಮಿ ಭೇಟಿ ವೇಳೆ ರೈತರ ಹೈಡ್ರಾಮಾ

ರಾಮನಗರ, ಜೂನ್​​ 27: ಬಿಡದಿ ಟೌನ್‌ಶಿಪ್‌ ಯೋಜನೆ (Bidadi Township Project) ಜಟಾಪಟಿ ಜೋರಾಗಿದೆ. ಅದರಲ್ಲೂ ಸಿಎಂ ಡಿಕೆ ಶಿವಕುಮಾರ್​​ ಮತ್ತು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಮಧ್ಯೆ ವಾಗ್ವಾದ ತಾರಕಕ್ಕೇರಿದೆ. ರೈತರ ಸಮ್ಮುಖದಲ್ಲೇ ಚರ್ಚೆ ಮಾಡೋಣ ಬೈರಮಂಗಲಕ್ಕೆ ಬನ್ನಿ ಅಂತಾ ಹೆಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್​ಗೆ ಸವಾಲು ಹಾಕಿದ್ದರು. ಅದರಂತೆ ಇಂದು ಬೈರಮಂಗಲಕ್ಕೆ ಎಂಟ್ರಿ ಕೊಟ್ಟ ಕುಮಾರಸ್ವಾಮಿ ವಿರುದ್ಧ ಬಿಡದಿ ಟೌನ್​ಶಿಪ್ ಪರ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಹಣ ಕೊಟ್ಟು ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿಎಂ ಡಿಕೆ ಶಿವಕುಮಾರ್​ಗಾಗಿ ಖಾಲಿ ಚೇರ್ ಮೀಸಲು

ಬಿಡದಿಗೆ ಬನ್ನಿ ರೈತರ ಜೊತೆ ಚರ್ಚಿಸೋಣ ಅಂತಾ ತೊಡೆ ತಟ್ಟಿದ್ದ ಹೆಚ್‌.ಡಿ ಕುಮಾರಸ್ವಾಮಿ ಇಂದು ಬೈರಮಂಗಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಟೌನ್​ಶಿಪ್ ವಿರುದ್ಧ ರೈತರ ಪ್ರತಿಭಟನೆಯಲ್ಲಿ ಭಾಗಿಯಾದರು. ಎಂಟ್ರಿ ಕೊಡುತ್ತಲೇ ವೇದಿಕೆ ಮೇಲೆ ಸಿಎಂ ಡಿಕೆ ಶಿವಕುಮಾರ್​ಗೆ ಆಸನ ಕಾಯ್ದಿರಿಸಿ ಮತ್ತೆ ಸವಾಲ್ ಎಸೆದರು. ರೈತರನ್ನ ಬಿಟ್ಟು ಚರ್ಚೆ ಮಾಡುವುದಕ್ಕೆ ನಾನು ಸಿದ್ಧ ಇಲ್ಲ ಅಂತಾ ಕಿಡಿಕಾರಿದರು.

ಹೆಚ್​ಡಿಕೆ ಹಣ ಕೊಟ್ಟು ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ: ರೈತರು ಆಕ್ರೋಶ

ಇನ್ನು ಹೆಚ್​ಡಿ ಕುಮಾರಸ್ವಾಮಿ ಭೇಟೆ ಹಿನ್ನೆಲೆ ಟೌನ್​ಶಿಪ್ ಪರ ಪ್ರತಿಭಟನಾನಿರತ ರೈತರಿಂದ ಹೈಡ್ರಾಮ ಕೂಡ ನಡೆದಿದೆ. ಹೆಚ್​ಡಿ ಕುಮಾರಸ್ವಾಮಿ ಹಣ ಕೊಟ್ಟು ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ. ಆ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ. ನಮ್ಮ ಬಳಿ ಆರ್​ಟಿಸಿ ಇದೆ, ಪಹಣಿ ಇದೆ, ನೀವ್ಯಾಕೆ ಬಂದಿದ್ದೀರಿ ಎಂದು ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಂಡು ಬಂದವರಿಗೆ ಟೌನ್​ಶಿಪ್ ಪರ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದವರನ್ನು ರೈತರು ತಡೆದು ಕಳುಹಿಸಿದ್ದಾರೆ.

ಇದನ್ನೂ ಓದಿ: Bidadi Township Project Row: ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!

ಕುಮಾರಸ್ವಾಮಿ ಬಳಿ ಹೋಗಲು ಅವಕಾಶ ಕೊಡಿ ಎಂದು ಟೌನ್​ಶಿಪ್ ಪರ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು. ಅವರ ಬಳಿ ತೆರಳಲು ಮುಂದಾದ ರೈತರನ್ನು ಪೊಲೀಸರು ತಡೆದರು. ಜೆಡಿಎಸ್​ನವರು ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಮಂಜುನಾಥ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧೈರ್ಯವಿದ್ದರೆ ಇಲ್ಲಿಗೆ ಬಂದು ಮಾತನಾಡಿ. ಅವರನ್ನು ಆಚೆ ಕಳಿಸಿ ಅಥವಾ ನಮ್ಮನ್ನು ಅಲ್ಲಿಗೆ ಹೋಗಲು ಬಿಡಿ ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.

ಕುಮಾರಸ್ವಾಮಿ ಇಲ್ಲಿಗೆ ಬರಲು ಒಪ್ಪದಿದ್ದರೆ ಮುತ್ತಿಗೆ ಹಾಕುತ್ತೇವೆ ಎಂದು ರೈತರು

ಇನ್ನು ಪ್ರತಿಭಟನಾ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕರೆತರಲು ಟೌನ್​ಶಿಪ್ ಯೋಜನೆಯ ಪರ ಇರುವ ರೈತರು ಮನವಿ ಮಾಡಿದರು. ಅವರನ್ನು ನಮ್ಮ ಬಳಿ ಕರೆದುಕೊಂಡು ಬನ್ನಿ. ನಾವು ಶಾಂತಿಯಿಂದ 10 ಮುಖಂಡರು ಮಾತನಾಡುತ್ತೇವೆ ಎಂದರು. ಈ ವೇಳೆ ಹೆಚ್​ಡಿ ಕುಮಾರಸ್ವಾಮಿಯನ್ನ ಕೇಳಿಕೊಂಡು ಬರುತ್ತೇವೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ಬರುವವರೆಗೆ ಶಾಂತಿಯಿಂದ ಇರ್ತೀವಿ. ಒಂದು ವೇಳೆ ಅವರು ಇಲ್ಲಿಗೆ ಬರಲು ಒಪ್ಪದಿದ್ದರೆ ಮುತ್ತಿಗೆ ಹಾಕುತ್ತೇವೆ. ಪೊಲೀಸರು ಗೋಲಿಬಾರ್ ಮಾಡಲಿ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us