ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಗೋವಾದಿಂದ ಬರಿಗೈಲಿ ಹಿಂದಿರುಗಿದ ಎಸ್ಐಟಿ ತಂಡ?
ಪೊಲೀಸರ ತನಿಖೆಯ ಪ್ರತಿ ಹಂತದ ಮಾಹಿತಿಯೂ ಆ ಯುವತಿಗೆ ಸೋರಿಕೆಯಾಗುತ್ತಿರಬಹುದು ಅಥವಾ ಈ ತನಿಖಾ ತಂಡದಲ್ಲಿರುವವರೇ ಉದ್ದೇಶಪೂರ್ವಕವಾಗಿ ಆಕೆಗೆ ಮಾಹಿತಿ ನೀಡಿರಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದ ಸತ್ಯಾಸತ್ಯತೆ ಪರಿಶೋಧಿಸಲು ನೇಮಕಗೊಂಡಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಸಂತ್ರಸ್ತೆ ಎನ್ನಲಾದ ಯುವತಿಯ ಬಂಧನಕ್ಕಾಗಿ ಗೋವಾವರೆಗೆ ತೆರಳಿ ಬರಿಗೈಲಿ ನಗರಕ್ಕೆ ಹಿಂದಿರುಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯು ಗೋವಾದಲ್ಲಿ ತನ್ನ ಗೆಳತಿಯೊಂದಿಗೆ ಇರುವ ಬಗ್ಗೆ ಎಸ್ಐಟಿಗೆ ಮಾಹಿತಿ ಸಿಕ್ಕಿತ್ತು. ಇದೇ ಮಾಹಿತಿ ಆಧರಿಸಿ ತನಿಖಾ ತಂಡವು ಗೋವಾಕ್ಕೆ ದೌಡಾಯಿಸಿತ್ತು. ಆದರೆ ಸಂತ್ರಸ್ತೆ ಪೊಲೀಸರ ಕೈಗೆ ಸಿಕ್ಕಿಲ್ಲ. ಆಕೆಯ ಗೆಳತಿಯನ್ನು ಮಾತ್ರ ಪೊಲೀಸರು ಭೇಟಿಯಾಗಲು ಸಾಧ್ಯವಾಯಿತು ಎಂದು ಮೂಲಗಳು ಹೇಳಿವೆ. ಈ ವಿಚಾರವನ್ನು ತುಂಬಾ ಸೂಕ್ಷ್ಮ ಎಂದು ಪರಿಗಣಿಸಿರುವ ಪೊಲೀಸ್ ತಂಡ ಈ ಕುರಿತು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡುತ್ತಿಲ್ಲ.
ತನಿಖಾ ತಂಡದಿಂದ ಯುವತಿ ತಪ್ಪಿಸಲು ಎರಡು ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯ ಪ್ರತಿ ಹಂತದ ಮಾಹಿತಿಯೂ ಆ ಯುವತಿಗೆ ಸೋರಿಕೆಯಾಗುತ್ತಿರಬಹುದು ಅಥವಾ ಈ ತನಿಖಾ ತಂಡದಲ್ಲಿರುವವರೇ ಉದ್ದೇಶಪೂರ್ವಕವಾಗಿ ಆಕೆಗೆ ಮಾಹಿತಿ ನೀಡಿರಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.
ಪೊಲೀಸರೇ ಮಾಹಿತಿ ಸೋರಿಕೆ ಮಾಡಿರಬಹುದು ಎಂಬ ವಿಶ್ಲೇಷಣೆಗೆ ಹಲವು ತರ್ಕಗಳಿವೆ. ಒಂದೊಮ್ಮೆ ತನಿಖಾ ತಂಡವು ಸಂತ್ರಸ್ತ ಯುವತಿಯನ್ನು ಬೆಂಗಳೂರಿಗೆ ಕರೆತಂದರೆ, ಇಲ್ಲಿ ಆಕೆ ಹೇಳಿಕೆ ನೀಡುತ್ತಾಳೆ. ಆ ಹೇಳಿಕೆ ಆಧರಿಸಿ ಆಗುವ ಎಫ್ಐಆರ್ನಿಂದ ರಮೇಶ್ ಜಾರಕಿಹೊಳಿಗೆ ಬಂಧನಕ ಕಂಟಕ ಉಂಟಾಗಬಹುದು. ರಮೇಶ್ ಜಾರಕಿಹೊಳಿಯನ್ನು ಈ ಮುಜುಗರದಿಂದ ತಪ್ಪಿಸಲೆಂದೇ ಪೊಲೀಸರು ಈ ತಂತ್ರ ಹೂಡಿರಬಹುದು ಎನ್ನಲಾಗುತ್ತಿದೆ.
ತನಿಖೆಯನ್ನು ಮತ್ತೊಂದು ಆಯಾಮದಿಂದ ತೀವ್ರಗೊಳಿಸಿರುವ ಪೊಲೀಸರು ಈ ಸಿಡಿ ಹಗರಣದ ಮುಖ್ಯ ರೂವಾರಿ ಮತ್ತು ಅವರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಸಾಕಷ್ಟು ಒಗ್ಗೂಡಿಸಿಕೊಂಡ ನಂತರವೇ ಸಂತ್ರಸ್ತೆಯನ್ನು ಕರೆತರಲು ಮುಂದಾಗಬಹುದು ಎನ್ನಲಾಗುತ್ತಿದೆ. ಒಂದೊಮ್ಮೆ ಆಗಲೂ ಆಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರೂ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳ ಸಹಾಯದಿಂದ ರಮೇಶ್ ಜಾರಕಿಹೊಳಿ ಅವರಿಗೆ ಅನುಕೂಲವಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ, ಶ್ರೀರಾಮುಲು ಭವಿಷ್ಯದ ಮೇಲೆ ಸಿಡಿ ರಾಜಕಾರಣದ ನೆರಳು
ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಪ್ರಕರಣ: ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ SIT ನೋಟಿಸ್
Published On - 10:42 pm, Mon, 15 March 21