ರನ್ಯಾ ರಾವ್ ಪ್ರಕರಣ: ಏರ್​ಪೋರ್ಟ್ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳ ಮೇಲೂ ಶಂಕೆ

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಜಂಟಿ ತನಿಖೆ ಶುರುವಾಗಿದೆ. ಡಿಆರ್​ಐ ಹಾಗೂ ಸಿಬಿಐ ತನಿಖಾ ತಂಡಗಳು ಅಕ್ರಮ ಗೋಲ್ಡ್ ಸ್ಮಗ್ಲಿಂಗ್ ಜಾಲ ಪತ್ತೆಗೆ ಇಳಿದಿದ್ದು, ಏರ್ಪೋರ್ಟ್​​ಗಳಲ್ಲಿ ಬೀಡು ಬಿಟ್ಟಿದ್ದಾರೆ. ಜತೆಗೆ, ರನ್ಯಾ ವಿಚಾರಣೆಯೂ ತೀವ್ರಗೊಂಡಿದೆ. ಇದೇ ಹೊತ್ತಲ್ಲಿ ಮತ್ತೆ ಮೂರು ಪ್ರಕರಣಗಳೂ ಬೆಳಕಿಗೆ ಬಂದಿವೆ.

ರನ್ಯಾ ರಾವ್ ಪ್ರಕರಣ: ಏರ್​ಪೋರ್ಟ್ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳ ಮೇಲೂ ಶಂಕೆ
ರನ್ಯಾ ಪ್ರಕರಣ: ಏರ್​ಪೋರ್ಟ್ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳ ಮೇಲೂ ಶಂಕೆ
Updated By: Ganapathi Sharma

Updated on: Mar 10, 2025 | 12:58 PM

ಬೆಂಗಳೂರು, ಮಾರ್ಚ್ 10: ದುಬೈನಿಂದ ಅಕ್ರಮವಾಗಿ ಚಿನ್ನ ತಂದ ನಟಿ ರನ್ಯಾ ರಾವ್​ (Ranya Rao) ಕೇಸ್​ನ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ. ಚಿನ್ನ ಸಾಗಾಟದ (Gold Smuggling) ಹಿಂದೆ ದೊಡ್ಡ ಜಾಲವೇ ಇರುವ ಅನುಮಾನವಿದೆ. ಈಗಾಗಲೇ ಸಿಬಿಐ (CBI) ಮತ್ತು ಡಿಆರ್​ಐ (DRI) ಅಧಿಕಾರಿಗಳು ಫೀಲ್ಡಿಗಿಳಿದಿದ್ದು, ಬೆಂಗಳೂರು, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಠಿಕಾಣಿ ಹೂಡಿದ್ದಾರೆ. ಏರ್ಪೋರ್ಟ್ ಸಿಬ್ಬಂದಿ, ಟ್ರಾವೆಲ್ ಏಜೆನ್ಸಿ, ಕಸ್ಟಮ್ಸ್ ಅಧಿಕಾರಿಗಳು, ಸ್ಥಳೀಯ ಪೊಲೀಸರ ಮೇಲೂ ಡಿಆರ್​ಐ ಮತ್ತು ಸಿಬಿಐಗೆ ಅನುಮಾನ ಉಂಟಾಗಿದೆ. ಹೀಗಾಗಿ, ಕೆಲವರನ್ನು ವಿಚಾರಣೆ ನಡೆಸಿದ್ದಾರೆ. ಚಿನ್ನ ಪಡೆದುಕೊಳ್ಳುತ್ತಿದ್ದ ಗ್ಯಾಂಗ್ ಪತ್ತೆಗೆ ತನಿಖಾ ಸಂಸ್ಥೆಗಳು ಮುಂದಾಗಿವೆ. ನಟಿ ರನ್ಯಾ ಯಾವೆಲ್ಲಾ ಚಿನ್ನದ ಮಳಿಗೆಗಳಿಗೆ ಹೋಗಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಟಿ ರನ್ಯಾ ಹಿಂದೆ ದೆಹಲಿ ಲಿಂಕ್ ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಒಂದೇ ವಾರದಲ್ಲಿ 3 ಕಡೆ ಗೋಲ್ಡ್ ಸ್ಮಗ್ಲಿಂಗ್ ಬೆಳಕಿಗೆ

ಒಂದೇ ವಾರದಲ್ಲಿ ಮೂರು ಕಡೆ ಚಿನ್ನ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ. ಮಾರ್ಚ್ 2ರಂದು ದೆಹಲಿ, ಮಾರ್ಚ್ 3ರಂದು ಬೆಂಗಳೂರು ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪತ್ತೆಯಾಗಿದೆ. ಮೂರು ಪ್ರಕರಣಗಳ ಸಂಬಂಧ ಕೆಜಿಗಟ್ಟಲೆ ಚಿನ್ನ ಜಪ್ತಿ ಮಾಡಿದ ಡಿಆರ್​ಐ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರನ್ಯಾ ಕಂಪನಿಗೆ 12 ಎಕರೆ ಭೂಮಿ

ಇನ್ನು ತುಮಕೂರಿನ ಶಿರಾ ಬಳಿ ನಟಿ ರನ್ಯಾ ರಾವ್​ಳ ಕ್ಸಿರೋದಾ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ ಕಂಪನಿ ಇದೆ. ಈ ಕಂಪನಿಗೆ 2023 ರ ಫೆಬ್ರವರಿ 22 ರಂದು, ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಐಎಡಿಬಿಯಿಂದ 12 ಎಕರೆ ಜಮೀನು ಮಂಜೂರಾಗಿದೆ. ಜಮೀನು ಮಂಜೂರು‌ ಬಗ್ಗೆ ದಾಖಲೆಯೂ ‘ಟಿವಿ9’ಗೆ ಲಭ್ಯವಾಗಿದೆ.

ಇದನ್ನೂ ಓದಿ
ನಟಿ ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಪ್ರಭಾವಿ ರಾಜಕಾರಣಿ
ರನ್ಯಾ ಹಿಂದಿದೆ ಸ್ಲಗ್ಲಿಂಗ್ ಸಿಂಡಿಕೇಟ್: ಬಗೆದಷ್ಟು ಹೊರಬರುತ್ತಿವೆ ರಹಸ್ಯ
ರನ್ಯಾ ಚಿನ್ನ ಕಳ್ಳಸಾಗಣೆ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಪ್ರೊಟೊಕಾಲ್ ಬಿಗಿ
ಹೇಗಿದ್ದ ರನ್ಯಾ ಹೇಗಾದ್ರು ನೋಡಿ: ಜೈಲು ಸೇರಿದ ಎರಡೇ ದಿನಕ್ಕೆ ಮಂಕಾದ ನಟಿ

138 ಕೋಟಿ ಬಂಡವಾಳದೊಂದಿಗೆ ಕಂಪನಿ ಆರಂಭಿಸಿದ್ದು, 160 ಮಂದಿಗೆ ಉದ್ಯೋಗ ಕೊಟ್ಟಿದ್ದಾಗಿ ರನ್ಯಾ ಹೇಳಿಕೊಂಡಿದ್ದರು. ಇದೇ ಕಂಪನಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 12 ಎಕರೆ ಜಮೀನು ಪಡೆದಿದ್ದರು. ಹೀಗಾಗಿ ಸದ್ಯ ರನ್ಯಾ ಒಡೆತನದ ಕಂಪನಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.. ರಾಜಕೀಯವಾಗಿಯೂ ರನ್ಯಾ ನೆಟ್ವರ್ಕ್​ ಹೊಂದಿರುವುದು ಬಟಾಬಯಲಾಗಿದೆ.

ಮುರುಗೇಶ್ ನಿರಾಣಿ ಸ್ಪಷ್ಟನೆ

ರನ್ಯಾ ಕಂಪನಿಗೆ 12 ಎಕರೆ ಭೂಮಿ ನೀಡಿದ್ದ ವಿಚಾರವಾಗಿ ಬೃಹತ್ ಕೈಗಾರಿಕೆ ಇಲಾಖೆಯ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ. ರನ್ಯಾರಾವ್ ಎಂಬ ಉದ್ಯಮಿ 2022 ರಲ್ಲಿ 12 ಎಕರೆ ಭೂಮಿ ಬೇಕು ಎಂದು ಮನವಿ ಕೊಟ್ಟಿರುತ್ತಾರೆ. 2023 ರ ಜನವರಿಯಲ್ಲಿ ಅದು ಕ್ಲಿಯರ್ ಆಗಿರುತ್ತದೆ. ಆ ಸಂದರ್ಭದಲ್ಲಿ ಕೈಗಾರಿಕಾ ಸಚಿವನಾಗಿ ನಾನು ಚೇರ್ ಪರ್ಸನ್ ಆಗಿದ್ದೆ. ಆಗಿನ ಲ್ಯಾಂಡ್ ಅಡಿಟರ್ ಕಮಿಟಿಯ ಎಸ್​​​ಎಸ್​ಒ ಮತ್ತು ಇಂಡಸ್ಟ್ರಿಯಲ್ ಸೆಕ್ರೆಟರಿ ಒಳಗೊಂಡಂತ ಸಮಿತಿ ಅದನ್ನು ಅನುಮೋದನೆ ನೀಡಿ ಸಿಂಗಲ್ ವಿಂಡೋಗೆ ತಂದಿತ್ತು. ಅಲ್ಲಿ 30 ಜನ ಹಿರಿಯ ಅಧಿಕಾರಿಗಳನ್ನೊಳಗೊಂಡಂತ ತಂಡ, ಆ ಪ್ರೊಜೆಕ್ಟ್ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಭೂಮಿ ಹಂಚಿಕೆ ಮಾಡಿರುತ್ತಾರೆ. ಇದರಲ್ಲಿ ಕೈಗಾರಿಕಾ ಸಚಿವರದ್ದಾಗಲೀ, ಮ್ಮ ಹಿರಿಯ ಅಧಿಕಾರಿಗಳದ್ದಾಗಲೀ ಯಾವುದೇ ರೀತಿಯ ಕಾನೂನು ಲೋಪದೋಷಗಳಾಗಿರುವುದಿಲ್ಲ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಇದನ್ನೂ ಓದಿ: ನಟಿ ರನ್ಯಾ ಹಿಂದಿದೆ ಗೋಲ್ಡ್ ಸ್ಲಗ್ಲಿಂಗ್ ಸಿಂಡಿಕೇಟ್: ಬಗೆದಷ್ಟು ಹೊರಬರುತ್ತಿವೆ ರಹಸ್ಯ

ಭೂಮಿ ಹಂಚಿಕೆ ವೇಳೆ ಯಾವುದೇ ರೀತಿ ಪರವಹಿಸುವಿಕೆ ಮಾಡಿಲ್ಲ ಹಾಗೂ ಲೋಪ ಎಸಗಿಲ್ಲ ಎಂದು ಸ್ಪಷ್ಟೀಕರಣ ಕೊಡುತ್ತಿದ್ದೇನೆ. ಏನೇ ಅನುಮಾನಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು ಎಂದು ನಿರಾಣಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 am, Mon, 10 March 25