ರನ್ಯಾ ಚಿನ್ನ ಕಳ್ಳಸಾಗಣೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರೊಟೊಕಾಲ್ ಬಿಗಿ, ಅಧಿಕಾರಿಗಳ ಸಂಬಂಧಿಕರಿಗಿಲ್ಲ ವಿಶೇಷ ವಿನಾಯಿತಿ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರೊಟೊಕಾಲ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಪ್ರಭಾವಿ ವ್ಯಕ್ತಿಗಳಿಗೆ ಕಠಿಣ ಭದ್ರತಾ ಶಿಷ್ಟಾಚಾರ ಜಾರಿಗೆ ತರಲಾಗಿದೆ. ರನ್ಯಾ ರಾವ್ ದುಬೈನಿಂದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.

ಬೆಂಗಳೂರು, ಮಾರ್ಚ್ 8: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Gold Smuggling) ಕನ್ನಡ ನಟಿ ರನ್ಯಾ ರಾವ್ (Ranya Rao) ಬಂಧನದ ಬಳಿಕ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪ್ರೊಟೊಕಾಲ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ವಿಶೇಷವಾಗಿ, ಪ್ರಭಾವಿ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಕಠಿಣ ಭದ್ರತಾ ಶಿಷ್ಟಾಚಾರಗಳನ್ನು ಪರಿಚಯಿಸಲಾಗಿದೆ. ಇನ್ನುಮುಂದೆ ಶಿಷ್ಟಾಚಾರ ಸವಲತ್ತುಗಳನ್ನು ಹಿರಿಯ ಅಧಿಕಾರಿಗಳಿಗೆ ಮಾತ್ರ ನೀಡಲಾಗುವುದು. ಅವರ ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರಿಗೆ ನೀಡಲಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದೆ ಎಂದು ವರದಿಯಾಗಿದೆ.
ನಿಯೋಜಿತ ಅಧಿಕಾರಿ ಐಪಿಎಸ್ ಆಗಿರಲಿ ಅಥವಾ ಐಎಎಸ್ ಆಗಿರಲಿ, ಅವರನ್ನು ಬಿಟ್ಟು ಅವರ ಕುಟುಂಬದವರಾಗಲೀ, ಇತರ ಯಾರಿಗೇ ಆಗಲಿ ಭದ್ರತಾ ಶಿಷ್ಟಾಚಾರವನ್ನು ಒದಗಿಸಲು ಅವಕಾಶವಿಲ್ಲ. ಅಧಿಕಾರಿಗೆ ನೇರ ಬೆದರಿಕೆ ಇದ್ದಾಗ ಮಾತ್ರ ಹೆಚ್ಚುವರಿ ಭದ್ರತೆಯನ್ನು ಪರಿಗಣಿಸಲಾಗುತ್ತದೆ. ಅಂಥ ಸಂದರ್ಭದಲ್ಲೂ ಅವರ ಅತೀ ಹತ್ತಿರದ ಸಂಬಂಧಿಗಷ್ಟೇ ಒದಗಿಸಲಾಗುತ್ತದೆ ಎದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ಆರ್ ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೊಟೊಕಾಲ್ ಬಗ್ಗೆ ಭಾರಿ ಚರ್ಚೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ ಆರೋಪದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ, ಪ್ರೊಟೊಕಾಲ್ ಬಗ್ಗೆ ಭಾರಿ ಚರ್ಚೆಯಾಯಿರತು. ಸರ್ಕಾರ ಕೂಡ ಆ ಬಗ್ಗೆ ತೀವ್ರ ಪರಿಶೀಲನೆ ನಡೆಸಿದೆ.
ಮೂಲಗಳ ಪ್ರಕಾರ, ನಟಿಯನ್ನು ಬರಮಾಡಿಕೊಳ್ಳಲು ನಿಯೋಜಿಸಲಾದ ಶಿಷ್ಟಾಚಾರ ಸಿಬ್ಬಂದಿಯನ್ನು ಸಹ ಆರಂಭದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ನಂತರ, ಅವರು ಪೊಲೀಸ್ ಮಹಾನಿರ್ದೇಶಕರ (DGP) ಮಗಳ ಬೆಂಗಾವಲು ಆದೇಶಗಳನ್ನು ಅನುಸರಿಸುತ್ತಿದ್ದಾರಷ್ಟೆ. ಇದು ಹೊರತುಪಡಿಸಿ ಅವರ ಲಗೇಜ್‌ನಲ್ಲಿರುವ ವಸ್ತುಗಳ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂಬ ಸಾಕ್ಷ್ಯ ದೊರೆತ ಕಾರಣ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಉಲ್ಲೇಖಿಸಿದೆ.
ಏತನ್ಮಧ್ಯೆ, 17 ಚಿನ್ನದ ಗಟ್ಟಿಗಳನ್ನು ತಂದಿದ್ದಾಗಿ ರನ್ಯಾ ರಾವ್ ಒಪ್ಪಿಕೊಂಡಿದ್ದಾರೆ ಎಂದು ಡಿಆರ್‌ಐ ಮೂಲಗಳು ಬಹಿರಂಗಪಡಿಸಿವೆ.
ಇದನ್ನೂ ಓದಿ: ನಟಿ ರನ್ಯಾ ಮಲತಂದೆ ರಾಮಚಂದ್ರ ರಾವ್ ಹಿನ್ನೆಲೆಯೇನು? ಚಿನ್ನ ಸ್ಮಗ್ಲಿಂಗ್ನಲ್ಲಿ ಡಿಜಿಪಿ ಕೈವಾಡವೂ ಇತ್ತೇ?
ದುಬೈನಿಂದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ರನ್ಯಾ ಸಿಕ್ಕಿಬಿದ್ದಿದ್ದರು. ನಂತರ ಆರ್ಥಿಕ ಅಪರಾಧಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಲಯವು ರನ್ಯಾರನ್ನು ಮೂರು ದಿನಗಳ ಕಾಲ ಡಿಆರ್‌ಐ ಅಧಿಕಾರಿಗಳ ಕಸ್ಟಡಿಗೆ ಒಪ್ಪಿಸಿದೆ.
ಕಳೆದ ಆರು ತಿಂಗಳಲ್ಲಿ ರನ್ಯಾ ರಾವ್ 27 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದು, ಅವರ ನಿಯಮಿತ ದುಬೈ ಪ್ರವಾಸದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.