ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್ 3 ದಿನ ಡಿಆರ್ಐ ಕಸ್ಟಡಿಗೆ
ನ್ಯಾಯಾಂಗ ಬಂಧನದಲ್ಲಿ ಇದ್ದ ನಟಿ ರನ್ಯಾ ರಾವ್ ಅವರನ್ನು ಈಗ ಡಿಆರ್ಐ ಕಸ್ಟಡಿಗೆ ಒಪ್ಪಿಸಲಾಗಿದೆ. ಮೂರು ದಿನಗಳ ಕಾಲ ಅವರನ್ನು ಡಿಆರ್ಐ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ತೀವ್ರಗೊಳ್ಳಲಿದೆ. ದುಬೈನಿಂದ 14 ಕೆಜಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುವಾಗ ರನ್ಯಾ ರಾವ್ ಸಿಕ್ಕಿಬಿದ್ದಿದ್ದು, ಇದರಲ್ಲಿ ಹಲವರು ಭಾಗಿ ಆಗಿರುವ ಶಂಕೆ ಇದೆ.

ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾ ರಾವ್ (Ranya Rao) ಅವರಿಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಅವರನ್ನು ಮೂರು ದಿನಗಳ ಕಾಲ ಡಿಆರ್ಐ ಅಧಿಕಾರಿಗಳ ಕಸ್ಟಡಿಗೆ ನೀಡಲಾಗಿದೆ. ಇತ್ತೀಚೆಗೆ ರನ್ಯಾ ರಾವ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಅವರನ್ನು ಡಿಆರ್ಐ ಕಸ್ಟಡಿಗೆ ನೀಡಲಾಗಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯ ಈ ಆದೇಶ ನೀಡಿದೆ. ಚಿನ್ನ ಕಳ್ಳ ಸಾಗಾಣಿಕೆ ಕೇಸ್ನಲ್ಲಿ ರನ್ಯಾ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಡಿಆರ್ಐ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ.
ಬರೋಬ್ಬರಿ 14 ಕೆಜಿ ಚಿನ್ನ ಕಳ್ಳ ಸಾಗಾಣಿಕೆ ಮಾಡುವಾಗ ರನ್ಯಾ ರಾವ್ ಅವರು ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಯಿತು. ಕೇಸ್ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇರುವುದರಿಂದ ರನ್ಯಾ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಡಿಆರ್ಐ ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದ್ದರು. ನಟಿಗೆ ಜಾಮೀನು ನೀಡಬಾರದು ಎಂದು ಕೂಡ ಅಧಿಕಾರಿಗಳ ಪರ ವಕೀಲರು ವಾದ ಮಾಡಿದ್ದರು.
ನಟಿ ರನ್ಯಾ ಅವರದ್ದು ಹೈ ಪ್ರೊಫೈಲ್ ಕುಟುಂಬ. ಅವರ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್. ರನ್ಯಾ ಅವರಿಗೆ ಹಲವು ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕ ಇರುವ ಸಾಧ್ಯತೆ ಇದೆ. ಹಾಗಾಗಿಯೇ ಅವರು ಚಿನ್ನ ಕಳ್ಳ ಸಾಗಾಣಿಕೆ ವೇಳೆ ಹಲವು ಬಾರಿ ಭದ್ರತಾ ತಪಾಸಣೆಯಿಂದ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಇನ್ನೂ ಯಾರೆಲ್ಲ ಶಾಮೀಲು ಆಗಿದ್ದಾರೆ ಎಂಬುದನ್ನು ತಿಳಿಯಲು ಡಿಆರ್ಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ರನ್ಯಾ ಅವರು ಪ್ರಭಾವಿ ಮಹಿಳೆ ಆದ್ದರಿಂದ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿದ್ದರು. ಅಂಥ ಮಹಿಳೆಯನ್ನು ಜೈಲಾಧಿಕಾರಿಗಳ ಮುಂದೆ ಹೇಗೆ ವಿಚಾರಣೆ ಮಾಡಲು ಸಾಧ್ಯ? ರನ್ಯಾ ರಾವ್ ಸುತ್ತ ದೊಡ್ಡ ಸಿಂಡಿಕೇಟ್ ಇದೆ. ಸಿಂಡಿಕೇಟ್ ಬ್ರೇಕ್ ಮಾಡಲು ನಟಿಯನ್ನು ಕಸ್ಟಡಿಗೆ ನೀಡಬೇಕು. ದುಬೈಗೆ ಎಷ್ಟು ಬಾರಿ ಹೋಗಿದ್ದಾರೆ ಮತ್ತು ಯಾಕೆ ಹೋಗಿದ್ದಾರೆ ಎಂದು ಅವರೇ ಉತ್ತರಿಸಬೇಕು. ಹಾಗಾಗಿ ಅವರನ್ನು ಡಿಆರ್ಐ ಅಧಿಕಾರಿಗಳ ಕಸ್ಟಡಿಗೆ ನೀಡಬೇಕೆಂದು ಅಧಿಕಾರಿಗಳ ಪರ ವಕೀಲರು ವಾದ ಮಾಡಿದ್ದರು.
ಇದನ್ನೂ ಓದಿ: ಹೇಗಿದ್ದ ರನ್ಯಾ ರಾವ್ ಹೇಗಾದ್ರು ನೋಡಿ: ಜೈಲು ಸೇರಿದ ಎರಡೇ ದಿನಕ್ಕೆ ಮಂಕಾದ ನಟಿ
ತನಿಖೆ ತೀವ್ರಗೊಂಡಂತೆಲ್ಲ ಈ ಕೇಸ್ಗೆ ಸಂಬಂಧಿಸಿಂತೆ ಹಲವು ಶಾಕಿಂಗ್ ಸಂಗತಿಗಳು ಹೊರಬರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಡಿಆರ್ಐ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.