ನಟನೆ ಮೂಲಕ ತಮಿಳು, ತೆಲುಗಿನಲ್ಲಿ ಹವಾ ಎಬ್ಬಿಸಿರುವ ಬಾಲಿವುಡ್ ನಿರ್ದೇಶಕ ಈಗ ಕನ್ನಡಕ್ಕೆ ಎಂಟ್ರಿ
Anurag Kashyap: ‘ಗ್ಯಾಂಗ್ಸ್ ಆಫ್ ವಸೇಪುರ್’ ಸೇರಿದಂತೆ ಹಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅನುರಾಗ್ ಕಶ್ಯಪ್ ಇತ್ತೀಚೆಗೆ ನಟನಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮಿಳಿನ ‘ಮಹಾರಾಜ’ ಸಿನಿಮಾದ ಬಳಿಕ ಅವರಿಗೆ ಹಲವು ಅದ್ಭುತ ಅವಕಾಶಗಳು ಬರುತ್ತಿವೆ. ಇತ್ತೀಚೆಗೆ ಹೊಸ ತೆಲುಗು ಸಿನಿಮಾವನ್ನು ಸಹ ಅವರು ಒಪ್ಪಿಕೊಂಡಿದ್ದಾರೆ. ಇದೀಗ ಕನ್ನಡಕ್ಕೂ ಎಂಟ್ರಿ ಕೊಡುತ್ತಿದ್ದಾರೆ ಕಶ್ಯಪ್, ಸಿನಿಮಾ ಯಾವುದು?

ಬಾಲಿವುಡ್ನ (Bollywood) ಕೆಲವೇ ಪ್ರತಿಭಾವಂತ, ಫ್ಯಾಷನೇಟ್ ಸಿನಿಮಾ ನಿರ್ದೇಶಕರಲ್ಲಿ ಅನುರಾಗ್ ಕಶ್ಯಪ್ ಸಹ ಒಬ್ಬರು. ಆದರೆ ಬಾಲಿವುಡ್ನ ರಾಜಕೀಯದ ಬಗ್ಗೆ, ಅಲ್ಲಿನ ಸಿನಿಮಾ ಸಂಸ್ಕೃತಿಯ ಬಗ್ಗೆ ಜಿಗುಪ್ಸೆಗೆ ಒಳಗಾಗಿರುವ ಅನುರಾಗ್ ಕಶ್ಯಪ್, ತಾವು ದಕ್ಷಿಣ ಭಾರತ ಚಿತ್ರರಂಗಕ್ಕೆ ವಲಸೆ ಬರುವುದಾಗಿ ಹೇಳಿಕೊಂಡಿದ್ದರು. ಅದರ ಬೆನ್ನಲ್ಲೆ ಅವರು ತಮಿಳಿನ ‘ಮಹಾರಾಜ’ ಹೆಸರಿನ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಈಗ ಅನುರಾಗ್ ಕಶ್ಯಪ್ಗೆ ದಕ್ಷಿಣ ಭಾರತ ಚಿತ್ರರಂಗದಿಂದ ಅವಕಾಶಗಳ ಮೇಲೆ ಅವಕಾಶಗಳು ಅರಸಿ ಬರುತ್ತಿವೆ. ಇತ್ತೀಚೆಗೆ ತೆಲುಗಿನ ಸಿನಿಮಾದಲ್ಲಿಯೂ ಅನುರಾಗ್ ಕಶ್ಯಪ್ ನಟಿಸುತ್ತಿರುವ ಸುದ್ದಿ ಹೊರಬಿದ್ದಿತ್ತು. ಇದೀಗ ಅನುರಾಗ್ ಕಶ್ಯಪ್ (Anurag Kashyap) ಕನ್ನಡ ಚಿತ್ರರಂಗಕ್ಕೂ ಕೊಡುತ್ತಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ‘ಬೆಲ್ ಬಾಟಮ್’ ಸಿನಿಮಾದಲ್ಲಿ ಸೆಗಣಿ ಪಿಂಟೋ ಪಾತ್ರದಲ್ಲಿ ನಟಿಸಿದ್ದ ಸುಜಯ್ ಶಾಸ್ತ್ರಿ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ‘8’ ನಲ್ಲಿ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅನುರಾಗ್ ಕಶ್ಯಪ್ ಪಾಲಿಗೆ ಇದು ಅವರ ಮೊದಲ ಕನ್ನಡ ಸಿನಿಮಾ. ‘8’ ಸಿನಿಮಾದ ಪೋಸ್ಟರ್ ಗಮನಿಸಿದರೆ ಇದೊಂದು ಸ್ಪೋರ್ಟ್ಸ್ ಡ್ರಾಮಾ ಸಿನಿಮಾದಂತೆ ತೋರುತ್ತಿದ್ದು, ಅನುರಾಗ್ ಕಶ್ಯಪ್, ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಅಂದಹಾಗೆ ಅನುರಾಗ್ ಕಶ್ಯಪ್ಗೆ ಕನ್ನಡದ ನಂಟು ಹೊಸದೇನೂ ಅಲ್ಲ. ಅವರು ಉಪೇಂದ್ರ ಅವರ ಸಿನಿಮಾಗಳ ಅಭಿಮಾನಿ. ಅನುರಾಗ್ ಮೊದಲು ನೋಡಿದ ದಕ್ಷಿಣದ ಸಿನಿಮಾ ‘ಎ’ ಮತ್ತು ‘ಓಂ’ ಅಂತೆ. ಅಲ್ಲದೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿಯವರ ಅಭಿಮಾನಿಯೂ ಸಹ ಹೌದು. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಿಡುಗಡೆ ಆದಾಗ ಅದನ್ನು ಬಹುವಾಗಿ ಮೆಚ್ಚಿ ಬರೆದಿದ್ದರು ಅನುರಾಗ್ ಕಶ್ಯಪ್. ಈಗ ತಮ್ಮ ಹೊಸ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯವರಿಗೆ ಒಂದು ಪಾತ್ರ ಸಹ ನೀಡಿದ್ದಾರೆ. ಕನ್ನಡದ ‘ಪೆದ್ರೊ’ ಸಿನಿಮಾ ನಿರ್ದೇಶಕ ನಟೇಶ ಸಹ ಅನುರಾಗ್ ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಒಂದೇ ಸಿನಿಮಾದಿಂದ ನೂರು ಕೋಟಿ ರೂಪಾಯಿ ಕಳೆದಿದ್ದ ಅನುರಾಗ್ ಕಶ್ಯಪ್
ಇನ್ನು ಅನುರಾಗ್ ಕಶ್ಯಪ್ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಮಹಾರಾಜ’ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರಿಗೆ ಹಲವು ಅವಕಾಶಗಳು ತೆರೆದುಕೊಂಡಿವೆ. ತಮಿಳಿನ ಹೊಸದೊಂದು ಸಿನಿಮಾದಲ್ಲಿ ಅನುರಾಗ್ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಲೋಕೇಶ್ ಕನಗರಾಜ್ ನಿರ್ದೇಶಕ. ಅದಾದ ಬಳಿಕ ತೆಲುಗಿನ ‘ಡಕೋಯಿಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಡವಿ ಶೇಷ್ ನಾಯಕ, ಮೃಣಾಲ್ ಠಾಕೂರ್ ನಾಯಕಿ. ಇದರ ಜೊತೆಗೆ ಅನುರಾಗ್ ಕಶ್ಯಪ್, ಆಸ್ಕರ್ ವಿಜೇತ ನಿರ್ದೇಶಕ ಅಲೆಕ್ಸಾಂಡ್ರಿಯೊ ಗಾಂಜಾಲ್ವೆಸ್ ಹಿನ್ಯಾರಿತೊ ಅವರ ಹೊಸ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ನಟಿಸಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ