‘ನನ್ನ ಹಾಗೂ ರನ್ಯಾ ಮಧ್ಯೆ ಅಂತರ ಬೆಳೆದಿದೆ’; ಮಗಳ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಾತು
ರನ್ಯಾ ರಾವ್ ಅವರನ್ನು ದುಬೈನಿಂದ 14 ಕೆಜಿ ಚಿನ್ನವನ್ನು ಅಕ್ರಮವಾಗಿ ತರುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದು ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳಾಗಿರುವುದರಿಂದ ಈ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ರಾಮಚಂದ್ರ ರಾವ್ ಅವರು ಈ ಬಗ್ಗೆ ತಮ್ಮ ಹೃದಯವೇದನೆಯನ್ನು ವ್ಯಕ್ತಪಡಿಸುವ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ನಟಿ ರನ್ಯಾ ರಾವ್ ಪ್ರಕರಣ ಸಂಚಲನ ಸೃಷ್ಟಿಸಿದೆ. ದುಬೈನಿಂದ 14 ಕೆಜಿ ಚಿನ್ನವನ್ನು ಅಕ್ರಮವಾಗಿ ತರುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಸಿಕ್ಕಿಬಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ರನ್ಯಾ ರಾವ್ ಅವರ ಮಲತಂದೆ ರಾಮಚಂದ್ರ ರಾವ್ ಅವರು ಡಿಜಿಪಿ. ಈ ಪ್ರಕರಣಕ್ಕೂ ಅವರಿಗೂ ಸಂಬಂಧ ಇದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ರಾಮಚಂದ್ರ ರಾವ್ (Ramachandra Rao) ಅಲ್ಲಗಳೆದಿದ್ದಾರೆ.
ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರ ರಾವ್ ಅವರಿಗೆ ರನ್ಯಾ ಮಲ ಮಗಳು. ರಾಮಚಂದ್ರ ರಾವ್ 2ನೇ ಮದುವೆ ಆಗಿದ್ದಾರೆ. ಆ ಮಹಿಳೆಗೂ ಇದು ಎರಡನೇ ಮದುವೆ. ರಾಮಚಂದ್ರ ರಾವ್ ಪತ್ನಿಯ ಮೊದಲ ಪತಿಯಿಂದ ಹುಟ್ಟಿದವರೇ ರನ್ಯಾ. ಇಷ್ಟು ಅನಾಯಾಸವಾಗಿ ರನ್ಯಾ ಚಿನ್ನ ತರುತ್ತಿದ್ದದು ಹೇಗೆ ಎಂಬ ವಿಚಾರ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬೆನ್ನಲ್ಲೇ ರಾಮಚಂದ್ರ ರಾವ್ ಪತ್ರ ಒಂದನ್ನು ಬರೆದಿದ್ದಾರೆ.
‘ಈ ಘಟನೆಯಿಂದ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ. ನನಗೆ ಆಗಿರುವ ಅಘಾತವನ್ನು ಹೇಳಲು ಪದಗಳೇ ಇಲ್ಲ. ಇತ್ತಿಚಿನ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತುಂಬಾ ಕಷ್ಟದ ಸಮಯ. ಇದನ್ನ ಎದುರಿಸಲು ನಾವು ಕಷ್ಟ ಪಡುತ್ತಿದ್ದೇವೆ. ರನ್ಯಾ ಹಾಗೂ ಜತಿನ್ ಹುಕ್ಕೇರಿ 2024ರಲ್ಲಿ ಮದುವೆ ಆದರು. ಮದುವೆ ಆದ ನಂತರ ಅವರು ತಮ್ಮ ಖಾಸಗಿತನ ಮತ್ತು ಸ್ವಾತ್ರಂತ್ರ್ಯವನ್ನ ಕಾಪಾಡಿಕೊಂಡಿದ್ದಾರೆ. ನಮ್ಮ ಮನೆಗೆ ಬರುವುದನ್ನು ಆಕೆ ನಿಲ್ಲಿಸಿದ್ದಾಳೆ. ನಾವು ಭೇಟಿಯಾಗಲು ಅವಕಾಶ ನೀಡಿಲ್ಲ’ ಎಂದು ಪತ್ರ ಆರಂಭಿಸಿದ್ದಾರೆ.
ಇದನ್ನೂ ಓದಿ: ನಟಿ ರನ್ಯಾ ಮಲತಂದೆ ರಾಮಚಂದ್ರ ರಾವ್ ಹಿನ್ನೆಲೆಯೇನು? ಚಿನ್ನ ಸ್ಮಗ್ಲಿಂಗ್ನಲ್ಲಿ ಡಿಜಿಪಿ ಕೈವಾಡವೂ ಇತ್ತೇ?
‘ನಮ್ಮ ಹಾಗೂ ಅವರ ನಡುವೆ ಅಂತರ ಬೆಳೆಯಿತು. ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿದ್ದೇನೆ. ನನ್ನದೆ ಆದ ಶಿಸ್ತಿನ ಜೀವನ ನಡೆಸಿದ್ದೇನೆ. ನಮ್ಮ ಕುಟುಂಬದ ಭವಿಷ್ಯಕ್ಕೆ ಕಳಂಕ ಬಂದಿದೆ. ನಾನು ದುಃಖಿತ ತಂದೆ ಆಗಿದ್ದೇನೆ. ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆ ನಡೆಯುತ್ತೆ ಎಂದುಕೊಂಡಿರಲಿಲ್ಲ. ರನ್ಯಾ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಿ’ ಎಂದು ಅವರು ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:36 am, Fri, 7 March 25