ಈ ವಾರ ಸಿನಿಮಾಗಳ ಸುರಿಮಳೆ; ಯಾವುದು ನೋಡೋದು? ಯಾವುದು ಬಿಡೋದು?
ಕನ್ನಡದಲ್ಲಿ ಬರೋಬ್ಬರಿ 8 ಸಿನಿಮಾಗಳು ಈ ವಾರ (ಮಾರ್ಚ್ 7) ರಿಲೀಸ್ ಆಗುತ್ತಿವೆ. ಇವುಗಳ ಜೊತೆ ಪರಭಾಷೆ ಸಿನಿಮಾಗಳ ಪೈಪೋಟಿ ಕೂಡ ಇದೆ. ಒಂದೇ ದಿನ ಈ ಪರಿ ಸಿನಿಮಾಗಳು ಬಿಡುಗಡೆಯಾದರೆ ಪ್ರೇಕ್ಷಕರಿಗೆ ಗೊಂದಲ ಸಹಜ. ಅಂತಿಮವಾಗಿ, ಪ್ರೇಕ್ಷಕರ ಮನ ಗೆಲ್ಲುವ ಸಿನಿಮಾ ಮಾತ್ರ ಉಳಿದುಕೊಳ್ಳಲಿದೆ.

ಸಿನಿಪ್ರಿಯರಿಗೆ ಶುಕ್ರವಾರ ಎಂದರೆ ಹಬ್ಬ. ಹೊಸ ಸಿನಿಮಾ (New Kannada Movie) ನೋಡಿ ಎಂಜಾಯ್ ಮಾಡಬಹುದು. ಆದರೆ ಒಂದೇ ದಿನ ಹಲವಾರು ಸಿನಿಮಾಗಳು ರಿಲೀಸ್ ಆದರೆ ಖಂಡಿತಾ ಬೇಸರ ಆಗುತ್ತದೆ. ಈ ವಾರ (ಮಾರ್ಚ್ 7) ಕೂಡ ಪ್ರೇಕ್ಷಕರ ಪರಿಸ್ಥಿತಿ ಹಾಗೆಯೇ ಇದೆ. ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗಿರುವ ಹಲವು ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ. ಇವುಗಳ ಪೈಕಿ ಯಾವ ಸಿನಿಮಾವನ್ನು ನೋಡುವುದು, ಯಾವ ಸಿನಿಮಾವನ್ನು ಬಿಡೋದು ಎಂಬ ಗೊಂದಲ ಪ್ರೇಕ್ಷಕರಿಗೆ ಉಂಟಾಗಿದೆ. ಹಾಗಾದ್ರೆ ಈ ವಾರ ಯಾವೆಲ್ಲ ಸಿನಿಮಾಗಳು ತೆರೆಕಾಣುತ್ತಿವೆ? ಇಲ್ಲಿದೆ ಮಾಹಿತಿ..
ರಾಕ್ಷಸ, ಇಂಟರ್ವಲ್, ಸೂರಿ ಲವ್ಸ್ ಸಂಧ್ಯಾ, ಕಪಟಿ, ಮಿಥ್ಯ, ಕನಸೊಂದು ಶುರುವಾಗಿದೆ, ಆಪಲ್ ಕಟ್, ತರ್ಕ ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ. ದೊಡ್ಡ ಸ್ಟಾರ್ ಸಿನಿಮಾಗಳ ಪೈಪೋಟಿ ಇಲ್ಲ. ಹಾಗಾಗಿ ಈ ಗ್ಯಾಪ್ನಲ್ಲಿ ಹಲವು ಸಿನಿಮಾಗಳು ಚಿತ್ರಮಂದಿರದ ಬಾಗಿಲು ಬಡಿಯುತ್ತಿವೆ. ಇವುಗಳ ಪೈಕಿ ಯಾವ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತದೆ ಎಂಬುದು ಶುಕ್ರವಾರ ಮೊದಲ ಶೋ ಮುಗಿದ ನಂತರ ತಿಳಿಯುತ್ತದೆ.
ಪ್ರಜ್ವಲ್ ದೇವರಾಜ್ ಅವರು ‘ರಾಕ್ಷಸ’ ಸಿನಿಮಾದಲ್ಲಿ ನಟಿಸಿದ್ದಾರೆ. ಟೈಮ್ ಲೂಪ್ ಹಾರರ್ ಕಹಾನಿ ಈ ಸಿನಿಮಾದಲ್ಲಿದೆ. ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಲೋಹಿತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ‘ಇಂಟರ್ವಲ್’ ಸಿನಿಮಾ ಕೂಡ ಟ್ರೇಲರ್ ಮೂಲಕ ಕೌತುಕ ಮೂಡಿಸಿದೆ. ಈ ಚಿತ್ರದಲ್ಲಿ ಕಾಲೇಜು ಹುಡುಗರ ಕಾಮಿಡಿ ಕಥೆ ಇದೆ. ಹೊಸ ಕಲಾವಿದರು ನಟಿಸಿದ್ದಾರೆ.
ಕಾಶಿನಾಥ್ ಅವರ ಮಗ ಅಭಿಮನ್ಯ ಕಾಶಿನಾಥ್ ಅವರು ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಅಪೂರ್ವಾ ಜೋಡಿ ಆಗಿದ್ದಾರೆ. ಯಾದವ್ ರಾಜ್ ನಿರ್ದೇಶನ ಮಾಡಿದ ಈ ಚಿತ್ರವನ್ನು ಉಪೇಂದ್ರ ಅವರು ಈಗಾಗಲೇ ಹಾಡಿ ಹೊಗಳಿದ್ದಾರೆ. ಎಮೋಷನಲ್ ಆದ ಲವ್ ಸ್ಟೋರಿ ಈ ಸಿನಿಮಾದಲ್ಲಿ ಇದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.
‘ಮ್ಯಾಕ್ಸ್’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿ ಸುಕೃತಾ ವಾಗ್ಳೆ ಅವರು ‘ಕಪಟಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಕೂಡ ಮಾರ್ಚ್ 7ರಂದು ತೆರೆಕಾಣುತ್ತಿದೆ. ರವಿಕಿರಣ್ ಡಿ. ಮತ್ತು ಚೇತನ್ ಎಸ್.ಪಿ. ನಿರ್ದೇಶನ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಈ ಸಿನಿಮಾದಲ್ಲಿದೆ. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಸಿನಿಮಾ ಎಂಬ ಕಾರಣಕ್ಕೆ ‘ಮಿಥ್ಯ’ ಚಿತ್ರ ಗಮನ ಸೆಳೆದಿದೆ. ಈ ಸಿನಿಮಾಗೆ ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ನೋಡಿ ಜನರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಯೋಗರಾಜ್ ಭಟ್ ಜೊತೆ ರಮ್ಯಾ ಹೊಸ ಸಿನಿಮಾ; ಕಡೆಗೂ ಸಿಕ್ತು ಗುಡ್ ನ್ಯೂಸ್
ಈ ಸಿನಿಮಾಗಳ ಜೊತೆ ‘ಕನಸೊಂದು ಶುರುವಾಗಿದೆ’, ‘ತರ್ಕ’, ‘ಆ್ಯಪಲ್ ಕಟ್’ ಚಿತ್ರಗಳು ಸಹ ಬಿಡುಗಡೆ ಆಗುತ್ತಿವೆ. ಇವುಗಳ ಜೊತೆ ಈಗಾಗಲೇ ಬಿಡುಗಡೆ ಆಗಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಪರಭಾಷೆಯ ‘ಡ್ಯ್ರಾಗನ್’, ‘ಛಾವ’ ಮುಂತಾದ ಸಿನಿಮಾಗಳು ಕೂಡ ಪೈಪೋಟಿ ನೀಡುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.