AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ. 1ರಿಂದ ರಾಷ್ಟ್ರೋತ್ಥಾನ ಸಾಹಿತ್ಯದ ಸಾಹಿತ್ಯ-ಸಂಸ್ಕೃತಿ ಉತ್ಸವ: ಕನ್ನಡ ಪುಸ್ತಕ ಹಬ್ಬ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ 37 ದಿನಗಳ ಕಾಲ ನಡೆಯಲಿರುವ ಕನ್ನಡ ಪುಸ್ತಕ ಹಬ್ಬಕ್ಕೆ ನವೆಂಬರ್​ 1ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಎನ್.ಆರ್‌. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

ನ. 1ರಿಂದ ರಾಷ್ಟ್ರೋತ್ಥಾನ ಸಾಹಿತ್ಯದ ಸಾಹಿತ್ಯ-ಸಂಸ್ಕೃತಿ ಉತ್ಸವ: ಕನ್ನಡ ಪುಸ್ತಕ ಹಬ್ಬ
ರಾಷ್ಟ್ರೋತ್ಥಾನ ಸಾಹಿತ್ಯದ ಪತ್ರಿಕಾ ಗೋಷ್ಠಿ
ಪ್ರಸನ್ನ ಹೆಗಡೆ
|

Updated on:Oct 27, 2025 | 7:13 PM

Share

ಬೆಂಗಳೂರು, ಅಕ್ಟೋಬರ್​ 27: ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ‘ಕನ್ನಡ ಪುಸ್ತಕ ಹಬ್ಬ’ದ 5ನೇ ಆವೃತ್ತಿ ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ‘ಕೇಶವಶಿಲ್ಪ’ ಸಭಾಂಗಣದಲ್ಲಿ ನಡೆಯಲಿದೆ. ನವೆಂಬರ್‌ 1 ಬೆಳಿಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥ, ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬ ಉದ್ಘಾಟಿಸಲಿದ್ದಾರೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥರಾದ ಕೆ.ಎಸ್. ನಾರಾಯಣ್ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವಸಂಪನ್ಮೂಲ ಸದಸ್ಯ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಲಿದ್ದಾರೆ. ರಾಷ್ಟೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಪುಸ್ತಕ ಹಬ್ಬ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ಎನ್.ಆರ್‌. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಭರ್ಜರಿ ಮೊತ್ತದ ಕೊಡುಗೆ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್

ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್ ಮಾತನಾಡಿ, ಕನ್ನಡ ಪುಸ್ತಕ ಹಬ್ಬದಲ್ಲಿ ಬೇರೆ ಬೇರೆ ಪ್ರಕಾಶನದ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಸಾಹಿತ್ಯದ ಜೊತೆಗೆ ಪುರಾಣ, ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳೂ ಮಾರಾಟಕ್ಕಿರುತ್ತವೆ. ಹಿಂದಿನ  ಪುಸ್ತಕ ಹಬ್ಬಗಳಲ್ಲಿ ಕುವೆಂಪು, ತೇಜಸ್ವಿ, ಕೆ.ಎನ್‌. ಗಣೇಶಯ್ಯ ಮುಂತಾದವರ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂದು ತಿಳಿಸಿದ್ದಾರೆ.

ಪುಸ್ತಕ ಹಬ್ಬದ ವೈಶಿಷ್ಟ್ಯ

ಈ ಬಾರಿಯ 37 ದಿನಗಳ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಪ್ರತಿದಿನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯುವ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೆ, ಇತರ ಪ್ರಕಾಶಕರ ಪುಸ್ತಕಗಳು ಶೇ. 10-50ರ ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ. ಪ್ರತಿದಿನ ಸಾಯಂಕಾಲ ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಛೇರಿಗಳು ನಡೆಯಲಿವೆ. ಇದರೊಂದಿಗೆ ಈ ಬಾರಿ ಸುಮಾರು 10 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ

ಕನ್ನಡ ಪುಸ್ತಕ ಹಬ್ಬದ ನಿಮಿತ್ತ ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆ ಇರಲಿವೆ. ಮಕ್ಕಳಿಗಾಗಿ ಮಂಕುತಿಮ್ಮನ ಕಗ್ಗ ಹೇಳುವುದು, ಕನ್ನಡ ಗದ್ಯ ಮತ್ತು ಪದ್ಯಭಾಗಗಳನ್ನು ತಪ್ಪಿಲ್ಲದೆ ಓದುವುದು ಹಾಗೂ ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ. ಇವುಗಳ ಪ್ರವೇಶ ಉಚಿತವಾಗಿರುತ್ತದೆ.

ಅನಕೃ ಪ್ರಶಸ್ತಿ ಪ್ರದಾನ

ಪುಸ್ತಕ ಹಬ್ಬದಲ್ಲಿ ಅನಕೃ ಪ್ರತಿಷ್ಠಾನದ ವತಿಯಿಂದ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಇರಲಿದೆ. 2024ರ ಸಾಲಿನ ಅನಕೃ ಪ್ರಶಸ್ತಿಗೆ ಎಲ್‌.ವಿ. ಶಾಂತಕುಮಾರಿ ಭಾಜನರಾದರೆ, 2025ರ ಸಾಲಿನ ಪ್ರಶಸ್ತಿಯನ್ನು ಶತಾವಧಾನಿ ಆರ್.‌ಗಣೇಶ್‌ ಸ್ವೀಕರಿಸಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:06 pm, Mon, 27 October 25