ಓಡಾಡಲು ಬಸ್​ ಇಲ್ಲ.. ಕೆಲಸಗಳು ಆಗ್ತಿಲ್ಲ: ಗ್ರಾಮೀಣ ಪ್ರದೇಶದವರ ಗೋಳು ಕೇಳೋರು ಯಾರು?

ಕೊರೊನಾ ಕಾರ್ಮೋಡ ನಿಧಾನವಾಗಿ ಸರಿಯುತ್ತಿದ್ದರೂ ಗ್ರಾಮೀಣ ಪ್ರದೇಶಕ್ಕೆ ಇನ್ನೂ ಸಂಪೂರ್ಣವಾಗಿ ಬಸ್‍ ಸಂಚಾರ ಆರಂಭವಾಗಿಲ್ಲ.

ಓಡಾಡಲು ಬಸ್​ ಇಲ್ಲ.. ಕೆಲಸಗಳು ಆಗ್ತಿಲ್ಲ: ಗ್ರಾಮೀಣ ಪ್ರದೇಶದವರ ಗೋಳು ಕೇಳೋರು ಯಾರು?
ಗ್ರಾಮೀಣ ಭಾಗದಲ್ಲಿ ಬಸ್ ಸಮಸ್ಯೆ
Follow us
TV9 Web
| Updated By: ganapathi bhat

Updated on:Apr 06, 2022 | 8:57 PM

ತುಮಕೂರು: ಕೊರೊನಾ ಕಾರ್ಮೋಡ ನಿಧಾನವಾಗಿ ಸರಿಯುತ್ತಿದ್ದರೂ ಗ್ರಾಮೀಣ ಪ್ರದೇಶಕ್ಕೆ ಇನ್ನೂ ಸಂಪೂರ್ಣವಾಗಿ ಬಸ್‍ ಸಂಚಾರ ಆರಂಭವಾಗಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರು ಜಿಲ್ಲಾ ಹಾಗೂ ತಾಲೂಕು ಕೇಂದ್ರಕ್ಕೆ ಪ್ರಯಾಣಿಸಲು ಪರದಾಡುವಂತಾಗಿದೆ. ಕೊರೊನಾ ಲಾಕ್‍ಡೌನ್ ತೆರವುಗೊಂಡಿದ್ದು ಅಂತರ್​ ರಾಜ್ಯಕ್ಕೂ ಬಸ್‍ಗಳು ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರಿಲ್ಲ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶಕ್ಕೆ ಬಸ್‍ಗಳ ಸಂಚಾರವನ್ನು ಆರಂಭಿಸಲು ಸಾರಿಗೆ ಇಲಾಖೆ ಮೀನಮೇಷ ಎಣಿಸುತ್ತಿದೆ.

ಜಿಲ್ಲೆಯಲ್ಲಿ ಲಾಕ್​ಡೌನ್​ಗಿಂತ ಮೊದಲು ಗ್ರಾಮೀಣ ಹಾಗೂ ನಗರ ಸಂಚಾರ ಸೇರಿ ಒಟ್ಟು 620 ಬಸ್‍ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಈಗ 441 ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಅದರಲ್ಲಿ, ಗ್ರಾಮೀಣ ಪ್ರದೇಶಗಳಿಗೆ ಲಾಕ್​ಡೌನ್​ಗಿಂತ ಮೊದಲು 243 ಬಸ್‍ಗಳ ಸಂಚಾರವಿತ್ತು. ಆದರೆ, ಪ್ರಸ್ತುತ 149 ಬಸ್‍ಗಳು ಮಾತ್ರ ಸಂಚರಿಸುತ್ತಿವೆ.

ಬಸ್‍ಗಳನ್ನೇ ಅವಲಂಬಿಸಿರುವವರಿಗೆ ಎದುರಾಗಿದೆ ಸಂಕಷ್ಟ ಇಷ್ಟು ದಿನ ಕೊರೊನಾ ಭಯದಿಂದ ಮನೆಯಲ್ಲೇ ಇದ್ದವರು ಇದೀಗ ವ್ಯಾಪಾರ-ವಹಿವಾಟು ಅಂತಾ ಹೊರ ಬರುತ್ತಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಜಮೀನು, ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಲು ಹಾಗೂ ಸರ್ಕಾರಿ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಮುಂದಾಗಿದ್ದಾರೆ. ಆದರೆ, ಅವರೆಲ್ಲರೂ ಈಗ ಸಮರ್ಪಕ ಬಸ್ ಸೇವೆ ಇಲ್ಲದೆ ಪರದಾಡುವಂತಾಗಿದೆ.

ಸ್ವಂತ ಬೈಕ್, ಕಾರು ಇದ್ದವರಿಗೆ ಈ ಸಮಸ್ಯೆ ಇಲ್ಲವಾದರೂ ಬಸ್‍ಗಳನ್ನೇ ಅವಲಂಬಿಸಿರುವವರು ಪಟ್ಟಣಕ್ಕೆ ಬರಲು ತೊಂದರೆ ಅನುಭವಿಸುವಂತಾಗಿದೆ. ಆರೋಗ್ಯ ಸಮಸ್ಯೆ ಇರುವವರು, ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ಬಾಡಿಗೆ ವಾಹನವನ್ನು ಅವಲಂಬಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಬಸ್​ಗಳ ಸಂಖ್ಯೆಯೂ ವಿರಳವಾಗಿದ್ದು, ಇಡೀ ದಿನ ಬಸ್​ಗಾಗಿ ಕಾಯುವ ಸ್ಥಿತಿ ಎದುರಾಗಿದೆ.

ವಿದ್ಯಾರ್ಥಿಗಳಿಗೂ ಬಸ್ಸಿಲ್ಲ.. ಕಲಿಕೆಗೆ ತೆರಳಲು ಮನವಿಲ್ಲ! ಕೊರೊನಾ ಕರಿಛಾಯೆ ನಡುವೆಯೂ ಕಾಲೇಜುಗಳು ಆರಂಭವಾಗಿದೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್‍ ಇಲ್ಲದೆ ಕಾಲೇಜಿಗೆ ತೆರಳಲು ಕಷ್ಟ ಅನುಭವಿಸುವಂತಾಗಿದೆ. ಬಸ್​ಗಾಗಿ ಕಾಯುವುದಕ್ಕೆ ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವ ಉತ್ಸಾಹವನ್ನು ಕಳೆದುಕೊಳ್ಳುವಂತಾಗಿದೆ.

ಇತ್ತ, ಪ್ರಯಾಣಿಕರು ಬಸ್‍ಗಳನ್ನು ಬಳಸುತ್ತಿಲ್ಲ. ಬಹುತೇಕ ಎಲ್ಲರೂ ಬೈಕ್​ಗಳನ್ನು ಹೊಂದಿದ್ದಾರೆ. ಪ್ರಯಾಣಿಕರಿಲ್ಲದೆ ಬಸ್‍ಗಳ ಸಂಚಾರ ಆರಂಭಿಸುವುದು ಕಷ್ಟ ಎನ್ನುವುದು ಸಾರಿಗೆ ಇಲಾಖೆಯ ಅಭಿಪ್ರಾಯ. -ಮಹೇಶ್​

Published On - 7:39 pm, Fri, 27 November 20