ವಿವರಗಳೇ ಇಲ್ಲದ 23,262 ಖಾತೆಗಳಿಗೆ 46.52 ಕೋಟಿ ರೂ. ಪಾವತಿ: ಸಿಎಜಿ ವರದಿ ತೆರೆದಿಟ್ಟ ಪ್ರಲ್ಹಾದ ಜೋಶಿ

Pralhad Joshi: ಕರ್ನಾಟಕದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಭಾರೀ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರಿಗೆ ಹಣ ಸಂದಾಯ, ಖಾತೆಯೇ ಇಲ್ಲದವರಿಗೆ ಕೋಟಿಗಟ್ಟಲೆ ಜಮೆ, ಮತ್ತು ಪುನರಾವರ್ತಿತ ಪಾವತಿಗಳಂತಹ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಸಿಎಜಿ ವರದಿ ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ವಿವರಗಳೇ ಇಲ್ಲದ 23,262 ಖಾತೆಗಳಿಗೆ 46.52 ಕೋಟಿ ರೂ. ಪಾವತಿ: ಸಿಎಜಿ ವರದಿ ತೆರೆದಿಟ್ಟ ಪ್ರಲ್ಹಾದ ಜೋಶಿ
Pralhad Joshi

Updated on: Jun 23, 2026 | 10:32 PM

ನವದೆಹಲಿ, (ಜೂನ್ 23):: ರಾಜ್ಯ ಕಾಂಗ್ರೆಸ್ ಸರ್ಕಾರದ (Karnataka Congress Governmnet)  ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕಳ್ಳಾಟವನ್ನು ಸಿಎಜಿ ವರದಿಯೇ ಬಿಚ್ಚಿಟ್ಟಿದೆ. ಜನರ ಹಣವನ್ನು ಹೇಗೆ ರಾಜಾರೋಷವಾಗಿ ಲೂಟಿ ಮಾಡುತ್ತಿದೆ ಎಂಬುದಕ್ಕಿದು ಸ್ಪಷ್ಟ ನಿದರ್ಶನ. ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಆ ಯೋಜನೆಗಳನ್ನು ಜನಹಿತಕ್ಕಿಂತ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೆ, ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆಯನ್ನೇ ಹಾಳುಗೆಡವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಮುಖ್ಯಾಂಶಗಳು

  • ಗೃಹಲಕ್ಷ್ಮಿ ಯೋಜನೆ ಕಳ್ಳಾಟವನ್ನು ಸಿಎಜಿ ವರದಿಯೇ ಬಿಚ್ಚಿಟ್ಟಿದೆ
  •  ರಾಜಾರೋಷವಾಗಿ ಗೃಹಲಕ್ಷ್ಮೀ ಹಣ ಲೂಟಿ
  •  ಜನಹಿತಕ್ಕಿಂತ ಭ್ರಷ್ಟಾಚಾರಕ್ಕೇ’ ಬಳಕೆ
  • ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

ವಿವರಗಳೇ ಇಲ್ಲದ 23,262 ಖಾತೆಗಳಿಗೆ 46.52 ಕೋಟಿ ರೂ. ಪಾವತಿ

ಗೃಹಲಕ್ಷ್ಮಿ ಯೋಜನೆಯಲ್ಲಿ 19,020 ಫಲಾನುಭವಿಗಳಿಗೆ ಕೇವಲ ಒಂದೇ ಒಂದು ಬ್ಯಾಂಕ್ ಖಾತೆ ಜೋಡಿಸಿ, ಜಂಟಿಯಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿ. ಬ್ಯಾಂಕ್ ಖಾತೆಯ ಕನಿಷ್ಠ ವಿವರಗಳೇ ಇಲ್ಲದ 23,262 ಖಾತೆಗಳಿಗೆ ಬರೋಬ್ಬರಿ 46.52 ಕೋಟಿ ರೂಪಾಯಿ ಪಾವತಿಸಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಸಮರ್ಪಕ ಪರಿಶೀಲನೆ ನಡೆಸದೆ, ಕಟ್ಟುನಿಟ್ಟಿನ ನಿಯಮಗಳನ್ನೂ ಪಾಲಿಸದೆ ಹಣ ಜಮೆ ಮಾಡಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.

ಇದನ್ನೂ ಓದಿ: 25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ, ಎಚ್ಚರಿಕೆ ಕೊಟ್ಟ ಆರ್ಥಿಕ ತಜ್ಞರು!

ಅವೈಜ್ಞಾನಿಕವಾಗಿ ಗ್ಯಾರಂಟಿ

ಯಾವುದೇ ನೀತಿ- ನಿಯಮಗಳನ್ನು ರಚಿಸಿಕೊಳ್ಳದೇ ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಗ್ಯಾರಂಟಿಗಳನ್ನು ತಂದು ಇದೀಗ ಇಡೀ ರಾಜ್ಯವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಇತ್ತ ಜನರಿಗೂ ಸರಿಯಾಗಿ ಹಣ ಜಮಾ ಮಾಡದೆ ಮಹಾ ವಂಚನೆ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us