
ಬೆಂಗಳೂರು, ಜುಲೈ 19: ಗ್ಯಾರಂಟಿ ಗದ್ದಲದ ನಡುವೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸ್ವಪಕ್ಷದ ಶಾಸಕರೇ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಇದೀಗ, ಬೇಸರ ವ್ಯಕ್ತಪಡಿಸಿ ಬಹಿರಂಗ ಅಸಮಾಧಾನ ಹೊರಹಾಕಿದ್ದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ (Siddaramaiah) 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಸರ್ಕಾರದ ಅನುದಾನ ಬಿಡುಗಡೆ ವಿರುದ್ಧ ಬಿಜೆಪಿ-ಜೆಡಿಎಸ್ (BJP-JDS) ಶಾಸಕರು ಸಿಡಿದೆದ್ದಿದ್ದಾರೆ. ಇದಕ್ಕೆ ಕಾರಣ, ಆಡಳಿತಾರೂಢ ಪಕ್ಷದ ಶಾಸಕರಿಗೆ 50 ಕೋಟಿ ರೂ., ವಿಪಕ್ಷದ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ಬಿಡುಗಡೆ ಮಾಡಿರುವುದು. ಈ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟ ಏರ್ಪಟ್ಟಿದೆ.
ಕಳೆದ 2 ವರ್ಷದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ಯಾವ ಮುಖ ಇಟ್ಟುಕೊಂಡು ಹೋಗಬೇಕು ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಅನುದಾನ ಬಿಡುಗಡೆ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ. ನೀವು ಯಾವ ಮುಖ ಇಟ್ಟುಕೊಂಡು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತೀರಿ? ನೀವು ಕೊಡುವ ಅನುದಾನದಲ್ಲೇ ತಾರತಮ್ಯ ಮಾಡಿದ್ದೀರಿ. ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಬೇಡಿ. ಒಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ರೆ ಸಾಲದು. ಇಡೀ ರಾಜ್ಯದ ಅಭಿವೃದ್ಧಿ ಮಾಡಬೇಕು. ಒಂದೇ ಮೊತ್ತದ ಅನುದಾನ ಬಿಡುಗಡೆ ಮಾಡಿ ಎಂದು ಆರ್.ಅಶೋಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಕೀಳು ಮಟ್ಟದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿದ್ದಾರೆ. ಎಲ್ಲಾ 224 ಶಾಸಕರ ಮೇಲೆ ಜನರ ಮೇಲೆ ವಿಶ್ವಾಸ ಇರಲಿ. ಈ ಮೂಲಕ ಸಿದ್ದರಾಮಯ್ಯ ಖಳನಾಯಕ ಆಗಬಾರದು. ಸಿದ್ದರಾಮಯ್ಯನವರಂತಹ ಬುದ್ಧಿವಂತರು ಅನುದಾನ ಕೊಡದಷ್ಟು ಸಣ್ಣತನ ತೋರಬಾರದು. ಸಿದ್ದರಾಮಯ್ಯ ತಮ್ಮ ನಿರ್ಣಯ ಪುನರ್ ಪರಿಶೀಲಿಸಲಿ. ಎಲ್ಲಾ ಶಾಸಕರಿಗೂ ಸಮಾನ ಅನುದಾನ ಕೊಡಲಿ, ಸಮಾನತೆ ಕಾಪಾಡಲಿ ಎಂದು ಸೋಮಣ್ಣ ಆಗ್ರಹಿಸಿದ್ದಾರೆ.
ಅನುದಾನದ ತಾರತಮ್ಯದ ವಿರುದ್ಧ ಜೆಡಿಎಸ್ ಶಾಸಕರೂ ಸಹ ತಿರುಗಿಬಿದ್ದಿದ್ದಾರೆ. ಅದು ಸರ್ಕಾರದ ಹಣ, ಕೆಪಿಸಿಸಿಯದ್ದು ಅಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಆಕ್ರೋಶ ಹೊರಹಾಕಿದ್ದಾರೆ. ನಾವು ಸದನದಲ್ಲಿ ಇದನ್ನು ಪ್ರಶ್ನಿಸಿ ಸರ್ಕಾರ ಚಾಟಿ ಬೀಸುತ್ತೇವೆ ಎಂದು ಅವರು ಹೇಳಿದ್ದಾರೆ. ಅನುದಾನ ಹಂಚಿಕೆ ಮಾಡಿಲ್ಲ ಅಂದರೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೌಂಟರ್ ಕೊಟ್ಟಿದ್ದಾರೆ. ಹಿಂದೆ ಅವರೇ ಮಾಡಿಕೊಟ್ಟಿರುವುದು. ಆಡಳಿತ ಪಕ್ಷದ ಶಾಸಕರಿಗೆ ಒಂದು, ವಿಪಕ್ಷದವರಿಗೆ ಒಂದು ಕೊಟ್ಟಿದ್ದರು. ಅವರ ಶಾಸಕರಿಗೆ 50 ಕೋಟಿ ರೂ. ಕೊಟ್ಟಿದ್ರು. ನಮಗೆಲ್ಲಾ ಆಗ 25 ಕೋಟಿ ರೂ., 15, 10 ಕೋಟಿ ರೂ. ಕೊಟ್ಟಿದ್ದರು. ಅದನ್ನೇ ನಾವು ಅನುಸರಿಸಿದ್ದೇವೆ. ಆದರೆ ನಾವು ಪ್ರತೀಕಾರ ಮಾಡಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ! ಅಭಿವೃದ್ಧಿಗೆ ಅನುದಾನ ಘೋಷಣೆ
ಸದ್ಯ ಆಡಳಿತ ಮತ್ತು ವಿಪಕ್ಷಗಳ ನಡುವೆ ಅನುದಾನದ ಫೈಟ್ ಜೋರಾಗಿದೆ. ಬಿಜೆಪಿ-ಜೆಡಿಎಸ್ ಶಾಸಕರ ಒತ್ತಡಕ್ಕೆ ಮಣಿದು ಸರ್ಕಾರ ಎಲ್ಲರಿಗೂ ಒಂದೇ ಮೊತ್ತದ ಅನುದಾನ ಬಿಡುಗಡೆ ಮಾಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.