ಬಿಜೆಪಿ ಭಿನ್ನಮತಕ್ಕೆ ಮದ್ದರೆದ ಆರ್​ಎಸ್​ಎಸ್! ಆಂತರಿಕ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಪಕ್ಷದಲ್ಲಿ‌ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು, ಸಂಘಟನೆ ಬಲಿಷ್ಠಗೊಳಿಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಬಿಜೆಪಿ ರಾಜ್ಯ ನಾಯಕರು ಪರಸ್ಪರ ವಿಶ್ವಾಸ ಮೂಡಿಸಿಕೊಳ್ಳಲು ಮುಂದಾಗಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ಒಗ್ಗೂಡಿಕೊಂಡು ಹೋಗುವ ಬಗ್ಗೆ ಚರ್ಚೆಯಾಗಿದ್ದು, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೂ ಆಗ್ರಹ ವ್ಯಕ್ತವಾಗಿದೆ. ಸಭೆಯಲ್ಲಿ ಏನೇನು ಚರ್ಚೆಯಾಯ್ತು ಎಂಬ ವಿವರ ಇಲ್ಲಿದೆ.

ಬಿಜೆಪಿ ಭಿನ್ನಮತಕ್ಕೆ ಮದ್ದರೆದ ಆರ್​ಎಸ್​ಎಸ್! ಆಂತರಿಕ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Jun 28, 2025 | 3:56 PM

ಬೆಂಗಳೂರು, ಜೂನ್ 28: ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ್ ಅವರ ಬೆಂಗಳೂರು ನಿವಾಸದಲ್ಲಿ ಶುಕ್ರವಾರ ನಡೆದ ಬಿಜೆಪಿ (BJP) ನಾಯಕರ ಸಭೆಯಲ್ಲಿ ಪರಸ್ಪರ ವಿಶ್ವಾಸ ಮೂಡಿಸಿಕೊಂಡು ಹೋಗುವ ಬಗ್ಗೆ ಚರ್ಚೆ ನಡೆದಿದೆ. ಆರ್​ಎಸ್​ಎಸ್ ನಿರ್ದೇಶನದ ಮೇರೆಗೆ ಸಭೆ ನಡೆದಿದೆ. ಕಳೆದ ವಾರ ನಡೆದಿದ್ದ ಆರ್​ಎಸ್​ಎಸ್ (RSS) ಸಭೆಯಲ್ಲಿ ಆಗಾಗ ಸಮನ್ವಯ ಸಭೆ ನಡೆಸಲು ಸೂಚನೆ ಸಿಕ್ಕಿತ್ತು. ಪ್ರತಿ ಹದಿನೈದು ದಿನಗಳಿಗೊಮ್ಮೆ ನೇರವಾಗಿ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಸೂಚನೆ ನೀಡಲಾಗಿತ್ತು. ಪಕ್ಷದೊಳಗಿನ ವ್ಯತ್ಯಾಸ ಸರಿಪಡಿಸಲು ಜೊತೆಯಾಗುವಂತೆ ಬಿಜೆಪಿ ನಾಯಕರಿಗೆ ಆರ್​ಎಸ್​ಎಸ್ ಸೂಚನೆ ನೀಡಿತ್ತು. ರಾಜ್ಯ ಬಿಜೆಪಿ ಸಂಘಟನೆ ವಿಚಾರ ಹಾಗೂ ಹೋರಾಟದ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

ಬಿಜೆಪಿ ಸಭೆಯಲ್ಲಿ ಏನೇನು ಚರ್ಚೆಯಾಯ್ತು?

  • ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ದ ಹೋರಾಟ ಮಾಡಬೇಕು.
  • ಸರ್ಕಾರದ ವಿರುದ್ದ ಸಾಲು ಸಾಲು ಹೋರಾಟಗಳನ್ನು ಮಾಡಬೇಕು.
  • ಸರ್ಕಾರದ ವಿರುದ್ದ ಹೋರಾಟಕ್ಕೂ ಮುನ್ನ ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು.
  • ಸರ್ಕಾರದ ವಿರುದ್ದ ಹೋರಾಟ ಆಮೇಲೆ ಮಾಡೋಣ, ಮೊದಲು ಸಂಘಟನೆ ಸರಿಪಡಿಸಬೇಕು.
  • ಆಂತರಿಕ ಸಮಸ್ಯೆಯಿಂದಾಗಿ ಕಾರ್ಯಕರ್ತರ ಮನೋಬಲ ಸಂಪೂರ್ಣ ಕುಗ್ಗಿದೆ.
  • ಮೊದಲಿಗೆ ಕಾರ್ಯಕರ್ತರು ಹಾಗೂ ನಾಯಕರ ನಡುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
  • ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚಿತ ಅಂಶಗಳು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಲೇಬೇಕು.

ಈ ಮಧ್ಯೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮಾದರಿಯಲ್ಲೇ ರೇಣುಕಾಚಾರ್ಯ ವಿರುದ್ಧವೂ ಕ್ರಮಕ್ಕೆ ಹೈಕಮಾಂಡ್​​ಗೆ ಶಿಫಾರಸು ಮಾಡಬೇಕು ಎಂಬ ಮಟ್ಟಿಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತಿ ದೊಡ್ಡ ಅಚ್ಚರಿಯಾಗಿತ್ತು. ಕಳೆದ ಬಾರಿಯ ಸಭೆಗೂ ಅರವಿಂದ ಲಿಂಬಾವಳಿಗೆ ಆಹ್ವಾನ ಇತ್ತೆನ್ನಲಾಗಿದ್ದು, ಬೆಂಗಳೂರಿನಲ್ಲಿ ಇರದ ಕಾರಣ ಲಿಂಬಾವಳಿ ಗೈರಾಗಿದ್ದರು‌. ವಿಜಯೇಂದ್ರ‌ ನಾಯಕತ್ವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಲಿಂಬಾವಳಿ ನೇರವಾಗಿ ಹೇಳಿದ್ದಾರೆ ಎನ್ನಲಾಗಿದ್ದು, ಹಳೆಯದನ್ನೆಲ್ಲಾ ಮರೆತು ಎಲ್ಲರೂ ಒಟ್ಟಾಗಿ ಹೋಗೋಣ ಎಂಬ ಸಮಾಧಾನದ ಮಾತುಗಳು ಹಿರಿಯರಿಂದ ವ್ಯಕ್ತವಾಗಿವೆ.

ಇದನ್ನೂ ಓದಿ
ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!
ಭಾನುವಾರ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ, ಇಲ್ಲಿದೆ ವಿವರ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಮುಂಚೂಣಿಯಲ್ಲಿ ಈ ನಾಯಕರ ಹೆಸರು!
ಜೋಶಿ ವಿರುದ್ಧ ನಿಂದನೆ, ಜೀವ ಬೆದರಿಕೆ: ರಾಯಚೂರಿನಲ್ಲಿ ಪ್ರಕರಣ ದಾಖಲು

ಈ ಮಧ್ಯೆ ಬಿಜೆಪಿಯ ತಂತ್ರಗಾರ ಎನ್ನಿಸಿಕೊಂಡಿರುವ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಶುಕ್ರವಾರ ಇಡೀ ದಿನ ಬೆಂಗಳೂರಿನಲ್ಲಿದ್ದರು. ರಾತ್ರಿ ವಿಜಯೇಂದ್ರ‌ ಒಂದೂವರೆ ಗಂಟೆಗೂ ಹೆಚ್ಚು ಕಾಲ ಯಾದವ್ ಜೊತೆ ಖಾಸಗಿ ಹೋಟೆಲ್​​ನಲ್ಲಿ ಚರ್ಚೆ ನಡೆಸಿದ್ದಾರೆ.

ಆರ್ ಅಶೋಕ್ ಗೈರು!

ಈ ಮಧ್ಯೆ, ಪಕ್ಷದ ವೇದಿಕೆಯೆಲ್ಲೇ ಎರಡು ಮೂರು ಕಾರ್ಯಕ್ರಮಗಳು ನಡೆದರೂ ದೆಹಲಿಗೆ ಹೋಗಿ ಬಂದ ಬಳಿಕ ವಿಧಾನಸಭೆ ವಿಪಕ್ಷ ನಾಯಕ ಅಶೋಕ್ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಮೈಸೂರಿನಲ್ಲಿ ತುರ್ತು ಪರಿಸ್ಥಿತಿ ಕುರಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಈ ನಾಯಕರ ಹೆಸರು!

ಒಟ್ಟಾರೆ, ಶುಕ್ರವಾರದ ಸಭೆಯ ಪ್ರಧಾನ ಅಜೆಂಡಾ ಇದ್ದಿದ್ದು, ಮಾಜಿ ಸಚಿವ ಲಿಂಬಾವಳಿ ಮನವೊಲಿಕೆ. ಆದರೆ ಅಷ್ಟು ಸುಲಭವಾಗಿ ಒಪ್ಪದ ಲಿಂಬಾವಳಿ ತಮ್ಮ ನಿಲುವನ್ನು ನೇರಾನೇರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಮೊದಲು ನಿಮ್ಮ ನಿಮ್ಮ ವ್ಯತ್ಯಾಸ ಸರಿಪಡಿಸಿಕೊಳ್ಳಿ ಎಂಬ ಆರ್​​ಎಸ್​ಎಸ್ ನಿರ್ದೇಶನ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆಯೋ ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ