
ಬೆಂಗಳೂರು, ಮೇ 20: ಕೊಲೆ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಬಿಜೆಪಿ (BJP MLA) ಶಾಸಕ ಮುನಿರತ್ನ ಅವರಿಗೆ (Munirathna) ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಬಿಎಂಪಿ (BBMP) ಗುತ್ತಿಗೆದಾರ ಚಲುವಾರಜುಗೆ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ತನಿಖೆಗೆ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಅಡಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಎಲ್ಎ ಮುನಿರತ್ನ ವಿರುದ್ಧ ತನಿಖೆಗೆ ಸಿಐಡಿ ಪೋಲಿಸ್ ಮಹಾ ನಿರ್ದೇಶಕರು ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ಕೋರಿದ್ದರು. ಸಕ್ಷಮ ಪ್ರಾಧಿಕಾರ ತನಿಖೆಗೆ ಅನುಮತಿ ನೀಡಿದೆ. ಇದರಿಂದ ಶಾಸಕ ಮುನಿರತ್ನಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಕಸ ವಿಲೇವಾರಿ ಗುತ್ತಿಗೆ ನೀಡಲು ಶಾಸಕ ಮುನಿರತ್ನ ಅವರು 36 ಲಕ್ಷ ರೂ. ಲಂಚ ಕೇಳಿದ್ದು, 20 ಲಕ್ಷ ರೂ. ಈಗಾಗಲೆ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಅಡಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿನಗರ ವಾರ್ಡ್ನ ಡಿ ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣ ಮತ್ತು ವಿಲೇವಾರಿ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದೆ. ಶಾಸಕ ಮುನಿರತ್ನ 36 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂದು ಚಲುವರಾಜು ಆರೋಪಿಸಿದ್ದರು.
ಅಲ್ಲದೆ, ಹಣ ಕೊಡಲು ನಿರಾಕರಿಸಿದ್ದಕ್ಕೆ ಕಚೇರಿಗೆ ಕರೆಸಿಕೊಂಡು ಶಾಸಕ ಮುನಿರತ್ನ ಅಸಹ್ಯ ಪದಗಳಿಂದ ನಿಂದಿಸಿದ್ದಾರೆ. ಹಲವು ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಚಲುವರಾಜು ಆರೋಪ ಹೊರಸಿದ್ದರು. ಇನ್ನು, ಶಾಸಕ ಮುನಿರತ್ನ ಆಪ್ತ ಸಹಾಯಕ ವಸಂತಕುಮಾರ್ ಹಾಗೂ ಇತರರು ರೇಣುಕಾಸ್ವಾಮಿಯನ್ನು ಕೊಂದ ರೀತಿಯಲ್ಲೇ ನಿನ್ನನ್ನು ಕೂಡ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಚಲುವರಾಜು ಸ್ವಾಮಿ ದೂರಿದ್ದರು.
ಇದನ್ನೂ ಓದಿ: ಮುನಿರತ್ನ ವಿರುದ್ಧದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ: ಅಶ್ಲೀಲ ಫೋಟೊ, ವಿಡಿಯೋ ಮಾಡಿದ್ದು ಬಹಿರಂಗ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ ಲಕ್ಷ ರೂ. ಹಣ ಲಂಚ ನೀಡುವಂತೆ ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು ಎಂಬ ಆಡಿಯೋ ಕೂಡ ವೈರಲ್ ಆಗಿತ್ತು. ಆಡಿಯೋದಲ್ಲಿ ಗುತ್ತಿಗೆದಾರ ಚೆಲುವರಾಜು ಮತ್ತು ಸ್ನೇಹಿತ ಸಹ ಮಾತಾಡಿದ್ದರು ಎನ್ನಲಾಗಿತ್ತು.
Published On - 7:22 pm, Tue, 20 May 25