ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್ಸಿಬಿಯ ಮುಂದಿನ ಪಂದ್ಯ ಬೇರೆಡೆಗೆ ಶಿಫ್ಟ್: ಎಲ್ಲಿಗೆ ಗೊತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ. ಆದರೂ ಸಹ ಆರ್‌ಸಿಬಿಗೆ ಮಳೆ ಕಾಟ ಕೊಡುತ್ತಿದೆ. ಮೊನ್ನೆ ಅಷ್ಟೇ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದರಿಂದ ಇದೀಗ ಇದೇ ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಹೈದರಾಬಾದ್ ಹಾಗೂ ಆರ್‌ಸಿಬಿ ಪಂದ್ಯವನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.

ಐಪಿಎಲ್-2025ರ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಮೇ 29ರಿಂದ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಅದರಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹಾಗೂ ಸನ್ ರೈಸರ್ಸ್ ಹೈದರಾಬಾದ್ (Sunrisers hyderabad) ನಡುವಿನ ಹೈವೋಲ್ಟೇಜ್ ಪಂದ್ಯ ಬೇರೆಡೆಗೆ ಶಿಫ್ಟ್ ಆಗಿದೆ. ಇದೇ ಮೇ 23 ರಂದು ನಿಗದಿಯಂತೆ ಆರ್‌ಸಿಬಿ ಮತ್ತು ಎಸ್ಆರ್ಎಚ್(SRH) ಪಂದ್ಯವು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಮೇ 23ರಂದೇ ಆರ್‌ಸಿಬಿ ವರ್ಸಸ್ ಹೈದರಾಬಾದ್ ನಡುವಿನ ಪಂದ್ಯ ಲಕ್ನೋನ ಏಕನಾಥ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋದ ಎಕನಾ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೇ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ವಿರುದ್ಧ ಪಂದ್ಯವಿತ್ತು. ಆದರೆ ಮಳೆಯಿಂದಾಗಿ ನಡೆಸಲು ಸಾಧ್ಯವಾಗಲಿಲ್ಲ. ಪಂದ್ಯ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಎರಡೂ ತಂಡಕ್ಕೆ ತಲಾ ಒಂದೊಂದು ಅಂಕ ನೀಡಲಾಯ್ತು, ಇದರಿಂದ ಆರ್‌ಸಿಬಿ ಪ್ಲೇ ಆಫ್ಗೆ ಪ್ರವೇಶಿಸಿದರೆ, ಕೆಕೆಆರ್ ಪ್ಲೇ ಆಫ್ನಿಂದ ಹೊರಬಿದ್ದಿದೆ.
ಇದನ್ನೂ ಓದಿ: IPL 2025: ದೂರದ ಬ್ರಿಸ್ಬೇನ್ನಿಂದ RCB ಅಭಿಮಾನಿಗಳಿಗೆ ಗುಡ್ ನ್ಯೂಸ್
ಈ ರೀತಿ ಮತ್ತೆ ಆಗಬಾರದು ಎನ್ನುವ ಕಾರಣಕ್ಕೆ ಆರ್‌ಸಿಬಿ ಮತ್ತು ಎಸ್ಆರ್ಎಚ್ ಪಂದ್ಯವನ್ನು ಬೆಂಗಳೂರಿನ ಲಕ್ನೋಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಆರ್‌ಸಿಬಿ ಮೇ 23ರಂದು ಹೈದರಾಬಾದ್ ಜತೆ ಹಾಗೂ ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇದೇ ಲಕ್ನೋನ ಎಕಾನಾ ಸ್ಟೇಡಿಯಂನಲ್ಲಿ ಆಡಲಿದೆ. ಈಗಾಗಲೇ ಆರ್‌ಸಿಬಿ ಪ್ಲೇ ಆಫ್ಗೆ ಪ್ರವೇಶಿಸಿದ್ದು, ಇನ್ನುಳಿದ ಈ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಥವಾ ಎರಡನೇ ಸ್ಥಾನ ಪಡೆದುಕೊಂಡರೆ ಪ್ಲೇ ಆಫ್ನಲ್ಲಿ ಸೋತರೂ ಸಹ ಇನ್ನೊಂದು ಅವಕಾಶ ಸಿಗಲಿದೆ. ಹೀಗಾಗಿ ಆರ್‌ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ ಒನ್ ಅಥವಾ ಎರಡನೇ ಕಾಯ್ದುಕೊಳ್ಳಲು ಪ್ಲಾನ್ ಮಾಡಿದೆ. ಮತ್ತೊಂದೆಡೆ ಆರ್‌ಸಿಬಿ ಫ್ಯಾನ್ಸ್ ಸಹ ಈ ಸಲ ಕಪ್ ನಮ್ದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಆರ್‌ಸಿಬಿ ತನ್ನ ಸಂಘಟಿತ ಆಟದ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದರಿಂದ ಈ ಬಾರಿ ಆರ್‌ಸಿಬಿ ಕಪ್ ಎತ್ತಿ ಹಿಡಿಯಲಿದೆ ಎನ್ನುವ ಆಶಾಭಾವನೆ ಇದ್ದು, ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನು ಐಪಿಎಲ್ ಅಂತಿಮಘಟ್ಟ ತಲುಪಿದ್ದು, ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Tue, 20 May 25




