ಸಂಚಾರಿ ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಅಂತಿಮ ದರ್ಶನಕ್ಕೆ ಗ್ರಾಮಸ್ಥರು ಮತ್ತು ಸ್ನೇಹಿತರು ನೆರೆದಿದ್ದರು. ಬಿಲ್ವಪತ್ರೆ, ಭಸ್ಮ ಬಳಸಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ತಿಳಿಸಿದ್ದಾರೆ. ಸ್ಥಳದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಜಿಲ್ಲಾಧಿಕಾರಿ, ಎಸ್ಪಿ ಸ್ಥಳದಲ್ಲೇ ಮೊಕ್ಕಾ ಹೂಡಿದ್ದಾರೆ. ಸಂಚಾರಿ ವಿಜಯ್ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನೆರವೇರುವ ಮುನ್ನ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬೆಟ್ಟದಂತಹ ಕನಸು ಕಂಡಿದ್ದರು..
ಬೆಟ್ಟದಂತಹ ಕನಸು ಕಂಡಿದ್ರು.. ಬಹುದೊಡ್ಡ ಗುರಿ ಕಣ್ಮುಂದೆ ಇತ್ತು. ಕಷ್ಟಗಳು ಎದುರಾದ್ರೂ ಅವಕಾಶಗಳು ಕಡಿಮೆ ಸಿಕ್ಕರೂ ಹಿಂದೆ ಸರಿದಿರಲಿಲ್ಲ. ಸಹನೆ ಕಳೆದುಕೊಳ್ಳಲಿರಲಿಲ್ಲ. ಚಿಕ್ಕ ಚಿಕ್ಕ ಅವಕಾಶಗಳಲ್ಲೇ ತಮ್ಮನ್ನ ತಾವು ಗುರುತಿಸಿಕೊಂಡಿದ್ರು. ಹೀಗೆ ಸಿನಿಮಾ ಕ್ಷೇತ್ರದಲ್ಲೂ ಚಾಪು ಮೂಡಿಸಿದ್ದ ನಟ ಸಂಚಾರಿ ವಿಜಯ್ ಸಂಚಾರ ಮುಗಿಸಿದ್ದಾರೆ. ರಂಗಭೂಮಿ, ಧಾರವಾಹಿ, ಸಿನಿಮಾ ನಟನಾಗಿ ಮಿಂಚಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ಗೆ ಇಂದು ಅಂತಿಮ ನಮನ ಸಲ್ಲಿಸಲಾಗುತ್ತಿದೆ. ಈ ವೇಳೆ ಕುಟುಂಬಸ್ಥರು, ಗಣ್ಯರು, ಸ್ನೇಹಿತರು ಕಂಬನಿಯ ವಿದಾಯ ಹೇಳಿದ್ದಾರೆ. ತಮ್ಮ ಅಂಗಾಂಗ ದಾನ ಮಾಡಿರುವ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಟ ಸಂಚಾರಿ ವಿಜಯ್ ಕಳೆದುಕೊಂಡು ವಿಜಯ್ ಸಾಕುತಾಯಿ ಇಂದಿರಮ್ಮ ಕಣ್ಣೀರು ಹಾಕಿದ್ದಾರೆ. ವಿಜಯ್ ಬದುಕಲಿ ಎಂದು ಮೃತ್ಯುಂಜಯ ಜಪ ಮಾಡಿದ್ದೆ. ವಿಜಯ್ ಬದುಕಿ ಬರುತ್ತಾನೆ ಅಂದುಕೊಂಡಿದ್ದೆ. ಮೃತ್ಯುಂಜಯ ಜಪ ಸೇರಿದಂತೆ ಯಾವುದೂ ಕೂಡ ಫಲಿಸಲಿಲ್ಲ ಎಂದು ಟಿವಿ9ಗೆ ವಿಜಯ್ ಸಾಕುತಾಯಿ ಇಂದಿರಮ್ಮ ವಿಜಯ್ ನೆನೆದು ಕಣ್ಣೀರು ಹಾಕಿದ್ದಾರೆ. ವಿಜಯ್ ಅಂಗಾಂಗ ದಾನದಿಂದ ಆರೇಳು ಜನರಿಗೆ ನೆರವು ಸಿಕ್ಕಿದೆ. ನನ್ನ ಮಗ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ಹೇಳಿದ್ದಾರೆ.
ಹಾಸನದ ವಿದ್ಯಾನಗರದ ಶಿವಶಂಕರ್ ಎಂಬ ಅಭಿಮಾನಿ ಪೆನ್ಸಿಲ್ ನಿಂದ ಸಂಚಾರಿ ವಿಜಯ್ ಆಕರ್ಷಕ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನೆಚ್ಚಿನ ನಟನಿಗೆ ಪ್ರೀತಿಯಿಂದ ಚಿತ್ರ ಬರೆದು ಕಣ್ಣೀರ ವಿದಾಯ ಹೇಳಿದ್ದಾರೆ.