ಸಂಡೂರು ಬೈ ಎಲೆಕ್ಷನ್: ವಿವಿಧ ಇಲಾಖೆಗಳ 9 ಅಧಿಕಾರಿಗಳು, ನೌಕರರ ವರ್ಗಾವಣೆಗೆ ಬಿಜೆಪಿ ದೂರು
ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ 9 ಅಧಿಕಾರಿಗಳನ್ನು ವರ್ಗಾಯಿಸುವಂತೆ ಬಿಜೆಪಿ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟಫ್ ಫೈಟ್ ಇದೆ.
ಬೆಂಗಳೂರು, ಅಕ್ಟೋಬರ್ 26: ನ.13ರಂದು ಸಂಡೂರು (Sandur) ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಚುನಾವಣೆಯ ಪಾರದರ್ಶಕತೆಯ ಹಿತದೃಷ್ಟಿಯಿಂದ ಸಂಡೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ 9 ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ.
ಬಿಜೆಪಿ ದೂರಿನಲ್ಲೇನಿದೆ?
ಸಂಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಒಂಬತ್ತು ಅಧಿಕಾರಿ ನೌಕರರನ್ನು ಚುನಾವಣೆಯ ಪಾರದರ್ಶಕತೆಯ ಹಿತದೃಷ್ಟಿಯಿಂದ ಉಪ-ಚುನಾವಣೆ ಅಧಿಕಾರಿ ನೌಕರರುಗಳನ್ನು ಚುನಾವಣೆ ಕರ್ತವ್ಯದ ಸ್ಥಳಗಳನ್ನು ಬದಲಿಸುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಕೆಯಾದ ಬಳಿಕ ಪ್ರಚಾರಕ್ಕೆ ಬರುತ್ತೇನೆಂದು ರಾಜ್ಯಾಧ್ಯಕ್ಷರಿಗೆ ಹೇಳಿದ್ದೆ: ಬಿ ಶ್ರೀರಾಮುಲು
ಈ ವಿಚಾರವಾಗಿ ಈ ಹಿಂದೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ದಿನಾಂಕ 18.05.2024 ರಂದು ಮನವಿ ಸಲ್ಲಿಸಲಾಗಿತ್ತು. ಸದರಿ ಮನವಿಯಲ್ಲಿನ ನೈಜ್ಯ ಸತ್ಯಾ-ಸತ್ಯತೆಗಳನ್ನು ಗಮನಿಸದೆ ಕೊಟ್ಟ ಸಕಾರಣಗಳನ್ನು ತಳ್ಳಿ ಹಾಕಿ ಅ. 23 ರಂದು ನೀಡಲಾಗಿರುವ ಹಿಂಬರಹವು ಕಾನೂನು ಬಾಹಿರ ಮತ್ತು ಅಕ್ರಮದಿಂದ ಕೂಡಿದ್ದು ಸದರಿ ಆದೇಶವನ್ನು ತಮ್ಮ ಗಮನಕ್ಕೆ ತರಲಾಗಿದೆ.
ಚುನಾವಣೆಯು ಮುಕ್ತ ಮತ್ತು ಪಾರದರ್ಶಕತೆಯ ಹಿತದೃಷ್ಟಿಯಿಂದ ಈ ಮೇಲೆ ತಿಳಿಸಿದ ವಿವಿಧ ಇಲಾಖೆಯ ಒಂಬತ್ತು ಅಧಿಕಾರಿ ನೌಕರರನ್ನು ಕರ್ತವ್ಯದ ಸ್ಥಳದಿಂದ ಬದಲಾಯಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ತಕ್ಷಣ ತಾವು ಆದೇಶ ಮಾಡಬೇಕೆಂದು ಬಿಜೆಪಿ ಮನವಿ ಮಾಡಿದೆ.
ಸಂಡೂರು, ಶಿಗ್ಗಾಂವಿ ಉಪಚುನಾವಣಾ ಅಖಾಡ ರಂಗೇರಿದೆ. ಜಿದ್ದಾಜಿದ್ದಿಯ ಕಣವಾಗಿಯೂ ಮಾರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಮಧ್ಯೆ ಟಫ್ ಫೈಟ್ ಇದೆ. ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಇದನ್ನೂ ಓದಿ: ಜನಾರ್ಧನ ರೆಡ್ಡಿಯನ್ನು 2008ರಿಂದ ಎದುರಿಸುತ್ತಿದ್ದೇವೆ, ಅವರಿಂದ ಆತಂಕವಿಲ್ಲ: ಅನ್ನಪೂರ್ಣ
ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಡೂರು ಅಖಾಡದಿಂದ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ನಾಮಪತ್ರ ಸಲ್ಲಿಸಿದ್ದಾರೆ. ಸಂಡೂರಿನ ಎಪಿಎಂಸಿಯಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ ಮಾಜಿ ಸಚಿವ ನಾಗೇಂದ್ರ, ಸೇರಿದಂತೆ ಕೈ ನಾಯಕರು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:59 pm, Sat, 26 October 24