ಕರ್ನಾಟಕದಲ್ಲಿ 7 ಪಟ್ಟು ಹೆಚ್ಚಾಯ್ತು ಎಚ್1ಎನ್1: ಬೆಂಗಳೂರಿನಲ್ಲೇ ಅತಿಹೆಚ್ಚು
ಒಂದೆಡೆ ಡೆಂಗ್ಯೂ ಹಾವಳಿ ಇನ್ನೇನು ತಹಬಂದಿಗೆ ಬಂತು ಎಂಬಷ್ಟರಲ್ಲೇ ಬೆಂಗಳೂರು ನಗರದಲ್ಲಿ ಮಂಕಿಪಾಕ್ಸ್ ಆತಂಕ ಎದುರಾಗಿದೆ. ವಿದೇಶಗಳಿಂದ ಬರುವವರ ಸ್ಕ್ರೀನಿಂಗ್, ಟೆಸ್ಟಿಂಗ್ ಜೋರಾಗಿದೆ. ಈ ಮಧ್ಯೆ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಎಚ್1ಎನ್1 ಸದ್ದಿಲ್ಲದೇ ವ್ಯಾಪಿಸುತ್ತಿದೆ. ಎಚ್1ಎನ್1 ಸಓಂಕಿತರ ಸಂಖ್ಯೆ ಕಳೆದ ವರ್ಷಕ್ಕಿಂತ 7 ಪಟ್ಟು ಹೆಚ್ಚಾಗಿದೆ.
ಬೆಂಗಳೂರು, ಆಗಸ್ಟ್ 30: ಕರ್ನಾಟಕದಲ್ಲಿ ಎಚ್1ಎನ್1 ಪ್ರಕರಣಗಳ ಸಂಖ್ಯೆ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ ಎಂಬುದು ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರ್ಷ ಜುಲೈ 31 ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜುಲೈ ವೇಳೆಗೆ ರಾಜ್ಯಾದ್ಯಂತ 118 ಪ್ರಕರಣಗಳು ವರದಿಯಾಗಿದ್ದವು.
ಈ ವರ್ಷ ಎಚ್1ಎನ್1 ಸೋಂಕಿನಿಂದಾಗಿ ಮೈಸೂರಿನಲ್ಲಿ 15 ವರ್ಷದ ಹುಡುಗ ಮತ್ತು ದೊಡ್ಡಬಳ್ಳಾಪುರದಲ್ಲಿ 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ವೈರಸ್ ಪರೀಕ್ಷೆ ಮಾಡಿಸಿ ಪಾಟಿಸಿವ್ ಬಂದ ಮೂವರು ಇತರೆ ರೋಗಗಳು ಮತ್ತು ವಯಸ್ಸಿನ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯು ಎಚ್1ಎನ್1 ಬಗ್ಗೆ ಸಕ್ರಿಯ ಕಣ್ಗಾವಲು ಇಟ್ಟಿಲ್ಲ. ಆದಾಗ್ಯೂ ಹೆಚ್ಚಿನ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಹೆಚ್ಚಿದ ಟೆಸ್ಟಿಂಗ್ ಪ್ರಕರಣಗಳ ಟ್ರ್ಯಾಕಿಂಗ್ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡಿದೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂನ ಯೋಜನಾ ನಿರ್ದೇಶಕ ಡಾ.ಅನ್ಸಾರ್ ಅಹಮದ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ನಾವು ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ನಮ್ಮ ದಾಖಲೀಕರಣ ಪ್ರಕ್ರಿಯೆಯನ್ನು ಸುಧಾರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ವೈದ್ಯರು ಕಳೆದ ಎರಡು ವಾರಗಳಲ್ಲಿ ಎಚ್1ಎನ್1 ಪ್ರಕರಣಗಳು ದ್ವಿಗುಣಗೊಂಡಿರುವುದನ್ನು ಗಮನಿಸಿದ್ದಾರೆ. ಈ ಪ್ರಕರಣಗಳಲ್ಲಿ ರೋಗಿಗಳಲ್ಲಿ ತೀವ್ರತೆ ಹೆಚ್ಚಿತ್ತು ಎಂದೂ ವರದಿ ಉಲ್ಲೇಖಿಸಿದೆ.
ಜ್ವರದ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಬೆಂಗಳೂರಿನಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಒಂದು ಪಾಳಿಯಲ್ಲಿ ಸುಮಾರು 30 ರೋಗಿಗಳನ್ನು ನೋಡಿದರೆ, ಅವರಲ್ಲಿ ಕನಿಷ್ಠ 20 ಜನರು ಜ್ವರ ರೋಗಲಕ್ಷಣಗಳೊಂದಿಗೆ ಬರುತ್ತಿದ್ದಾರೆ ಎಂದು ಬೆಂಗಳೂರಿನ ನಾಗರಭಾವಿಯಲ್ಲಿರುವ ಖಾಸಗಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ತಜ್ಞ ಡಾ.ಮಜೀದ್ ಪಾಷಾ ಹೇಳಿದ್ದಾರೆ. ಕಳೆದ ಒಂದು ತಿಂಗಳಲ್ಲಿ, ಎಚ್1ಎನ್1 ಪತ್ತೆಯಾದ ಸುಮಾರು 70 ರೋಗಿಗಳ ಪೈಕಿ 25 ಕ್ಕೂ ಹೆಚ್ಚು ಮಂದಿಗೆ ಆಮ್ಲಜನಕ ನೀಡಬೇಕಾಯಿತು. 7-10 ಜನರಿಗೆ ವೆಂಟಿಲೇಟರ್ ಅಳವಡಿಸಬೇಕಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಎಚ್1ಎನ್1 ಲಕ್ಷಣಗಳೇನು? ಪತ್ತೆ ಹೇಗೆ?
ಆರ್ಟಿ ಪಿಸಿಆರ್ ಪರೀಕ್ಷೆ ಮಾಡಿ ಎಚ್1ಎನ್1 ರೋಗನಿರ್ಣಯ ಮಾಡಲಾಗುತ್ತದೆ. ಉಸಿರಾಟದ ಸೋಂಕು ತೀವ್ರ ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು, ಆಯಾಸ ಮತ್ತು ತಲೆನೋವುಗಳು ಪ್ರಮುಖ ಲಕ್ಷಣಗಳಾಗಿವೆ. ಕೆಲವರಲ್ಲಿ ತೀವ್ರ ಉಸಿರಾಟದ ತೊಂದರೆ ಜತೆಗೆ ವಾಕರಿಕೆ, ವಾಂತಿ, ಅತಿಸಾರ ಮತ್ತು ನ್ಯುಮೋನಿಯಾ ಕಾಣಿಸುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ಟೆಸ್ಟಿಂಗ್, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು
50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಮಾನ್ಯವಾಗಿ ತೀವ್ರವಾದ ರೋಗಲಕ್ಷಣಗಳಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ