ಶಿವಮೊಗ್ಗ, ಫೆ.9: ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ (SSLC Preparatory Exam) ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarty Sulibele) ವಿರುದ್ಧ ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಗೆ ಜಿಲ್ಲಾ ಎನ್ಎಸ್ವಿ ದೂರು ನೀಡಿದ್ದು, ಸಿಆರ್ಪಿಸಿ ಕಲಂ 157 ಅಡಿ ಎಫ್ಐಆರ್ (FIR) ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಸಂಬಂಧಿಸಿದಂತೆ ಮಕ್ಕಳು ಧಾರ್ಮಿಕವಾಗಿ ಪರಿಣಾಮ ಬೀಳುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್ಎಸ್ವಿ ಸದಸ್ಯರು ದೂರು ನೀಡಿದ್ದಾರೆ.
ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಸಮಯಾವಕಾಶ ನೀಡಲು ಬೆಳಗ್ಗಿನ ಪರೀಕ್ಷೆಗಳನ್ನು ಮಧ್ಯಾಹ್ನದ ನಂತರ ನಿಗದಿ ಮಾಡಲಾಗಿದೆ ಎಂಬ ಬಲಪಂಥೀಯರು ಟೀಕಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ (ಟ್ವಿಟರ್) ವೇಳಾಪಟ್ಟಿ ಹಂಚಿಕೊಂಡ ಚಕ್ರವರ್ತಿ ಸೂಲಿಬೆಲೆ, ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗಿನ ಅವಧಿಯಲ್ಲಿ ನಡೆಯಲಿದೆ. ಶುಕ್ರವಾರ ಮಾತ್ರ ಯಾಕೆ ಮಧ್ಯಾಹ್ನದ ನಂತರ ಎಂದು ಪ್ರಶ್ನಿಸಿದ್ದರು. ಅಲ್ಲದೆ, ನಮಾಜ್ಗೆ ಸಮಯವೇ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಕಪ್ಪು ಪಟ್ಟಿ ಪ್ರದರ್ಶನ: ಕೈ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ಕಲ್ಲು ತೂರಿದ ಬಿಜೆಪಿಗರು
ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಸ್ಪಷ್ಟನೆ ನೀಡಿದ ಪರೀಕ್ಷಾ ಮಂಡಳಿ, ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಬೆಳಗ್ಗೆ ನಡೆಯುವ ಕಾರಣ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಮಾಡಲಾಗಿದೆ. ನಮಾಜ್ಗೆ ಅನುಕೂಲ ಮಾಡಿಕೊಡಲು ಮಧ್ಯಾಹ್ನ ಪರೀಕ್ಷೆ ನಡೆಸುತ್ತಿಲ್ಲ ಸ್ಪಷ್ಟನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Fri, 9 February 24