ಪ್ರಜ್ವಲ್ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಗೆ ಕೇಂದ್ರಕ್ಕೆ ಸಿದ್ದರಾಮಯ್ಯ ಪತ್ರ
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಆದರೆ ಪ್ರಜ್ವಲ್ ರೇವಣ್ಣ ಮಾತ್ರ ವಿದೇಶದಲ್ಲಿದ್ದು, ಎಸ್ಐಟಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಬೆಂಗಳೂರು, ಮೇ 21: ಸಂಸದ ಪ್ರಜ್ವಲ್ ರೇವಣ್ಣ (Prawal Revanna) ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ (Union Government) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪತ್ರ ಬರೆದಿದ್ದಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ (G Parmeshwar) ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಈಗಾಗಲೆ ವಾರಂಟ್ ಜಾರಿ ಆಗಿದೆ. ಅದರ ಆಧಾರದ ಮೇಲೆ ಪಾಸ್ಪೋರ್ಟ್ ರದ್ದು ಕೋರಿ ಪತ್ರ ಬರೆಯಲಾಗಿದೆ. ಪಾಸ್ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ಭಾರತಕ್ಕೆ ಬರಬೇಕಾಗುತ್ತದೆ ಎಂದರು.
ಶರಣಾಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮನವಿ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಇದು ಅವರ ಕುಟುಂಬದ ಆಂತರಿಕ ವಿಚಾರ. ಇನ್ನು ಫೋನ್ ಟ್ಯಾಪ್ ಆಗುತ್ತಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ವತಿಯಿಂದ ಯಾರ ಫೋನ್ ಸಹ ಟ್ಯಾಪ್ ಮಾಡಿಲ್ಲ. ಒಂದು ವೇಳೆ ಫೋನ್ ಟ್ಯಾಪ್ ಆಗಿದ್ದರೆ ದಾಖಲೆ ಕೊಡಲಿ. ತನಿಖೆ ಮಾಡುತ್ತೇವೆ ಎಂದರು.
ವಕೀಲ ದೇವರಾಜೇಗೌಡ ಆಡಿಯೋ ಬಗ್ಗೆ ಎಸ್ಐಟಿ ನೋಡಿಕೊಳ್ಳುತ್ತೆ. ಪ್ರತಿಯೊಂದು ಹಂತದಲ್ಲಿ ತನಿಖೆ ಮಾಡಲು ನಾವು ಹೇಳಲ್ಲ. ತನಿಖೆ ಮಾಡಲು ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಹೇಳಿದರು. ಹೆಚ್.ಡಿ ದೇವೇಗೌಡರ ಕುಟುಂಬ ಮುಗಿಸಲು ಷಡ್ಯಂತ್ರ್ಯ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೆಚ್ಡಿ ಕುಮಾರಸ್ವಾಮಿ ಅವರು ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಹಳ ಕೆಲಸ ಇದೆ, ಆಡಳಿತ ಮಾಡಬೇಕು. ಇಡೀ ದೇಶ ನಮ್ಮ ಕಾಂಗ್ರೆಸ್ ಸರ್ಕಾರದ ಕಡೆ ನೋಡುತ್ತಿದೆ ಎಂದರು.
ಬೆಂಗಳೂರಿನ ಜಿ.ಆರ್.ಫಾರ್ಮ್ಹೌಸ್ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ದಾಳಿ ವೇಳೆ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಮಾಹಿತಿ ಪಡೆದಿದ್ದಾರೆ. ಡ್ರಗ್ಸ್ ಫ್ರೀ ರಾಜ್ಯ ಮಾಡಬೇಕು ಅಂತ ಕ್ರಮ ಕೈಗೊಳ್ಳುತ್ತಿದ್ದೇವೆ. ಗಾಂಜಾ ಎಲ್ಲಿಂದ ಬರುತ್ತೆ ಅಂತ ಮಾಹಿತಿ ಮೇಲೆ ಆರೋಪಿಗಳನ್ನು ಹಿಡಿಯುತ್ತೇವೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ರೇವ್ ಪಾರ್ಟಿ ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್: ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾದ ಕುಮಾರಸ್ವಾಮಿ
ಹೊರ ರಾಜ್ಯದಿಂದ ಗಾಂಜಾ ಸಹ ಬರುತ್ತೆ. ಇದನ್ನು ಕಂಡು ಹಿಡಿಯಲು ಪ್ರತ್ಯೇಕ ಘಟಕ ಇವೆ. ಇಲ್ಲೆ ಮನೆಯ ಮಾಳಿಗೆ ಮೇಲೆ ಕೂಡ ಗಾಂಜಾ ಬೆಳೆಯುತ್ತಾರೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ವಿದೇಶದಿಂದ ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬಂದು ಕೆಲವರು ಡ್ರಗ್ಸ್ ಮಾರುತ್ತಿದ್ದಾರೆ. ಮಾಡುತ್ತಾರೆ. ಅವರ ಮೇಲೆ ನಿಗಾ ಇಟ್ಟಿದ್ದೇವೆ. ಅವರ ದೇಶದ ಎಂಬಿಸ್ಸಿಗೆ ಡಿಪೋರ್ಟ್ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ವಿಫಲವಾಗಿದೆ, ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕೆಂಬ ಬಿಜೆಪಿ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ಸರ್ಕಾರ ಅನೇಕ ಸಾಧನೆ ಮಾಡಿದೆ. ಅಭಿವೃದ್ಧಿ, ನೀರಾವರಿ ಕೆಲಸಗಳು ನಿಂತಿಲ್ಲ. ಎಲ್ಲಿ ವಿಫಲರಾಗಿದ್ದೀವಿ ಅಂತ ಬಿಜೆಪಿಯವರು ಹೇಳಲಿ. ವಿಪಕ್ಷವಾಗಿ ಸುಮ್ನೆ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ವಜಾ ಆಗಬೇಕು ಅಂತ ಅವರು ಹೇಳೆ ಹೇಳುತ್ತಾರೆ, ಯಾಕಂದರೆ ಅವರು ವಿಪಕ್ಷದವರು. ಆದರೆ ಎಲ್ಲಿ ವಿಫಲ ಆಗಿದ್ದೇವೆ ಅಂತ ಹೇಳಬೇಕಲ್ಲ ಎಂದು ಟಾಂಗ್ ಕೊಟ್ಟರು.
ಮಾತು ಕೊಟ್ಟಂತೆ ಭರವಸೆ ಇಡೇರಿಸಿದ್ದೇವೆ. ಅದರ ಪ್ರಕಾರ ಆಡಳಿತ ನಡೆಸುತ್ತಿದ್ದೇವೆ. ಬರಗಾಲ ಬಂದಿದ್ದಕ್ಕೆ ನಾವು ಕೇಂದ್ರಕ್ಕೆ ಹಣ ಕೇಳಿದ್ದೇವೆ. ಕೊಡದಿದ್ದಾಗ ನಾವು ದೆಹಲಿಗೆ, ಕೋರ್ಟ್ಗೆ ಹೋಗಿದ್ದೇವೆ. ನಿಮಗೆ ಹೊಟ್ಟೆ ಉರಿ ಇರಬಹುದು. ಬಡಜನರಿಗೆ ಅನುಕೂಲಕ್ಕಾಗಿ ಗ್ಯಾರಂಟಿ ಜಾರಿಯಾಗಿದೆ. ಬಡತನ ರೇಖೆಗಿಂತ ಹೊರಬರಲಿ ಅಂತ ನಾವು ಕೆಲಸ ಮಾಡುತ್ತಿದ್ದೇವೆ. ರಸ್ತೆ ಕಾಮಗಾರಿ ಆಗುತ್ತಿದೆ, ಆಡಳಿತ ಚೆನ್ನಾಗಿ ನಡೆಯುತ್ತಿದೆ ಎಂದರು. ಲೋಕಸಭೆ ಫಲಿತಾಂಶದ ನಂತರ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಅದು ಮುಖ್ಯಮಂತ್ರಿಗಳ ವಿವೇಚನಿಗೆ ಬಿಟ್ಟಿದ್ದು. ನಾವೆಲ್ಲ ಹೇಳುವುದಿಲ್ಲ ಎಂದು ಜಾರಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ