
ದೇವನಹಳ್ಳಿ, ಸೆಪ್ಟೆಂಬರ್ 28: ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾಗಿದ್ದ ನಕಲಿ ಔಷಧ ಜಾಲ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಕಿಂಗ್‌ಪಿನ್ ಎಂದು ತನಿಖಾ ತಂಡ ಶಂಕಿಸಿರುವ ಪ್ರಶಾಂತ್ ರಂಜನ್ ಬಾಬುನನ್ನು ಅಜರ್‌ಬೈಜಾನ್‌ನಿಂದ ವಾಪಸಾದ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಬಂಧಿಸಲಾಗಿದೆ. ಮುಂಜಾನೆ ಅಜರ್‌ಬೈಜಾನ್‌ನಿಂದ ಕೆಐಎಬಿಗೆ ಬಂದಿದ್ದ ಪ್ರಶಾಂತ್ನನ್ನು ಲುಕ್‌ಔಟ್ ನೋಟಿಸ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅರೈವಲ್ ಗೇಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತಂಡಕ್ಕೆ ಹಸ್ತಾಂತರಿಸಲಾಗಿದೆ.
ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದ ನಕಲಿ ಔಷಧ ಜಾಲದ ಪ್ರಮುಖ ಕಿಂಗ್‌ಪಿನ್ ಎಂದು ಪ್ರಶಾಂತ್ ರಂಜನ್ ಬಾಬುನನ್ನು ಎಸ್‌ಐಟಿ ಶಂಕಿಸಿದೆ. ಈ ಹಿಂದೆ ತನಿಖೆ ವೇಳೆ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿರುವುದು ಪತ್ತೆಯಾಗಿತ್ತು. ಸೆಪ್ಟೆಂಬರ್ 9ರಂದು ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದ. ಭಾರತ ಮತ್ತು ಅಜರ್‌ಬೈಜಾನ್ ನಡುವೆ ಅವರನ್ನು ನೇರವಾಗಿ ಹಸ್ತಾಂತರಿಸಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ, ಆತ ಭಾರತಕ್ಕೆ ಮರಳಿದ ಬಳಿಕ ಲುಕ್‌ಔಟ್ ನೋಟಿಸ್ ಆಧರಿಸಿ ಬಂಧಿಸಬೇಕಿತ್ತು.
ನಕಲಿ ಔಷಧ ಜಾಲದಲ್ಲಿ ಪ್ರಶಾಂತ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ತನಿಖಾ ತಂಡ ಮುಂದಾಗಿತ್ತು. ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್, ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿತ್ತು. ವೀರೇಶ್ ಬೆಂಗಳೂರಿನ ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ಪೂರೈಸುತ್ತಿದ್ದ ಎನ್ನಲಾಗಿದ್ದು, ಜಾಲದ ವಹಿವಾಟು ವಾರ್ಷಿಕ ಸುಮಾರು ₹15 ಕೋಟಿಯಷ್ಟಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿತ್ತು.
ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನಡೆಸಿದ್ದ ದಾಳಿ ವೇಳೆ, ರಾಮನಗರದ ದೊಡ್ಡೇರಿ ಗ್ರಾಮದ ಬಳಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ದಂಧೆ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ಮುಂದುವರಿದಂತೆ ನಕಲಿ ಔಷಧಗಳ ಉತ್ಪಾದನೆ, ಪೂರೈಕೆ ಹಾಗೂ ಅವುಗಳನ್ನು ವಿವಿಧ ಆಸ್ಪತ್ರೆ ಮತ್ತು ಮೆಡಿಕಲ್‌ಗಳಿಗೆ ತಲುಪಿಸುವ ಬಹುದೊಡ್ಡ ಜಾಲದ ಬಗ್ಗೆ ಮಾಹಿತಿ ಹೊರಬಂದಿತ್ತು. ತನಿಖೆ ರಾಜ್ಯದ ಹೊರಗೂ ವಿಸ್ತರಿಸಿದ್ದು, ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿತ್ತು.

ತನಿಖೆಯಲ್ಲಿ ನಕಲಿ ಔಷಧ ಜಾಲಕ್ಕೆ ಅಂತರರಾಜ್ಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಟರ್ಕಿಯಿಂದ ನಕಲಿ ಲೇಬಲ್‌ಗಳನ್ನು ತರಿಸಿ ಔಷಧ ಪೂರೈಕೆಗೆ ಬಳಸಲಾಗುತ್ತಿತ್ತು ಎಂಬ ಮಾಹಿತಿಯೂ ಬಯಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್
ಇದೀಗ ಪ್ರಶಾಂತ್ ರಂಜನ್ ಬಾಬು ಬಂಧನವಾಗಿರುವ ಹಿನ್ನೆಲೆಯಲ್ಲಿ, ದೊಡ್ಡೇರಿ ಫಾರ್ಮ್‌ಹೌಸ್‌ನಿಂದ ಆರಂಭವಾದ ನಕಲಿ ಔಷಧ ಜಾಲದ ಕಾರ್ಯವೈಖರಿ, ಹಣಕಾಸು ವ್ಯವಹಾರ ಮತ್ತು ಇತರ ಆರೋಪಿಗಳ ಸಂಪರ್ಕದ ಕುರಿತು ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 am, Mon, 28 September 26