
ಬೆಂಗಳೂರು, ಅಕ್ಟೋಬರ್ 14: ಸ್ಟಿಂಗ್ ಆಪರೇಷನ್ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೋರ್ಟ್ ಬಾಗಿಲು ತಟ್ಟಿ ನಿರ್ಬಂಧಕಾಜ್ಞೆ ತಂದಿರೋದು ಕಾಂಗ್ರೆಸಿಗರಲ್ಲಿಯೇ ತಳಮಳ ಸೃಷ್ಟಿಸಿದೆ. ಮತ್ತೊಂದೆಡೆ ಇದೇ ವಿಚಾರವನ್ನು ಅಸ್ತ್ರ ಮಾಡಿಕೊಂಡಿರುವ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಉನ್ನತ ತನಿಖೆಗೆ ಆಗ್ರಹಿಸಿದೆ. ಕಾಂಗ್ರೆಸ್ ಶಾಸಕರೇ ಆದ ತನ್ವೀರ್ ಸೇಠ್, ಕೆ.ಎನ್.ರಾಜಣ್ಣ ಸೇರಿ ಹಲವರೂ ಇದಕ್ಕೆ ಧ್ವನಿ ಗೂಡಿಸಿರುವ ಕಾರಣ ವಿಚಾರ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.
ಕ್ಯಾಬಿನೆಟ್ ಸಭೆಯಲ್ಲಿ ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ಹಲವರು ಸಚಿವರ ಸ್ಟಿಂಗ್ ಆಪರೇಷನ್ ಯತ್ನ ನಡೆಯುತ್ತಿದ್ದು, ಅದನ್ನು ಬಳಸಿಕೊಂಡು ವಿಪಕ್ಷಗಳು ಸರ್ಕಾರಕ್ಕೆ ಮುಜುಗರ ತರುವ ಪ್ಲ್ಯಾನ್ ನಡೆಸಿವೆ ಎಂದು ಹೇಳಿದ್ದರು. ಬಳಿಕ ಒಂದು ಹೆಜ್ಜೆ ಮುಂದೆ ಹೋಗಿ ಸ್ವತಃ ನನ್ನನ್ನೇ ಟ್ರ್ಯಾಪ್ ಮಾಡುವ ಯತ್ನವೂ ನಡೆದಿತ್ತು ಎಂದು ಬಾಂಬ್ ಸಿಡಿಸಿದ್ದರು. ಹೀಗಾಗಿ ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದಿದ್ದ ವಿಪಕ್ಷಗಳು, ಸ್ಟಿಂಗ್ ಮಾಡಲು ಬಂದವರನ್ನು ಯಾಕೆ ಬಿಟ್ಟು ಕಳುಹಿಸಿದ್ದೀರಿ? ಎಲ್ಲ ಮಾಹಿತಿ ಇದ್ದೂ ಯಾಕೆ ತನಿಖೆಗೆ ಆದೇಶಿಸಿಲ್ಲ? ಎಂಬಿತ್ಯಾದಿ ಸಾಲು ಸಾಲು ಪ್ರಶ್ನೆಗಳ ಬಾಣವನ್ನು ಡಿಕೆಶಿಯತ್ತ ಬಿಟ್ಟಿದ್ದವು. ಸ್ಟಿಂಗ್ ಮಾಡಿದವರು ಯಾರು? ಮಾಡಿಸದವರು ಯಾರು? ಯಾವೆಲ್ಲ ನಾಯಕರ ಟ್ರ್ಯಾಪ್ ಯತ್ನ ನಡೆದಿತ್ತು? ಎಂಬಿತ್ಯಾದಿ ಪ್ರಶ್ನೆಗಳು ರಾಜ್ಯದ ಜನರ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿರುವಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸ್ಟಿಂಗ್ ವಿಚಾರವಾಗಿ ಕೋರ್ಟ್ನಿಂದ ಸ್ಟೇ ತಂದಿರೋದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕಮಿಷನರ್ಗೆ ದೂರು, ಕೋರ್ಟ್ಗೆ ಅರ್ಜಿ: ಸ್ಟಿಂಗ್ ಆಪರೇಷನ್ ಬಗ್ಗೆ ಸ್ಫೋಟಕ ಸಂಗತಿಗಳೊಂದಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಇನ್ನು ಸ್ಟಿಂಗ್ ಆಪರೇಷನ್ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಈ ಕೆಲಸ ಮಾಡುತ್ತಿವೆ ಎಂದು ಸ್ವತಃ ಸಿಎಂ ಆರೋಪಿಸಿದ್ದರೆ, ಕೇಂದ್ರದ ಸಚಿವರೊಬ್ಬರು ಮತ್ತು ರಾಜ್ಯದ ಬಿಜೆಪಿ ನಾಯಕನೊಬ್ಬ ಇದರ ಹಿಂದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿ ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ ಸಿಎಂ ಡಿಕೆಶಿ ವಿರುದ್ಧವೇ ಕೇಂದ್ರ ಸಚಿವ ಕುಮಾರಸ್ವಾಮಿ ಬೊಟ್ಟು ಮಾಡಿದ್ದು, ಪ್ರಜ್ವಲ್ ರೇವಣ್ಣ ಪ್ರಕರಣದ ಹಿಂದೆ ಇದ್ದವರೇ ಸಿದ್ದರಾಮಯ್ಯನವರ ಇಂದಿನ ಸ್ಥಿತಿಗೆ ಕಾರಣ ಎಂದು ಕುಟುಕಿದ್ದರು. ಸಿಡಿ ತೋರಿಸಿಯೇ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದರೆ, ಎಲ್ಲವೂ ಗೊತ್ತಿದ್ದು ಯಾಕೆ ಸಿಎಂ ಈ ಬಗ್ಗೆ ತನಿಖೆಗೆ ಆದೇಶ ನೀಡಿಲ್ಲ ಎಂದು ವಿಪಕ್ಷ ಬಿಜೆಪಿ ಕಾಂಗ್ರೆಸ್ ಕಾಲೆಳೆದಿದೆ.
ಅಷ್ಟಕ್ಕೂ ಕರ್ನಾಟಕ ರಾಜಕಾರಣದಲ್ಲಿ ಹನಿಟ್ರ್ಯಾಪ್, ಸ್ಟಿಂಗ್ ಆಪರೇಷನ್ ವಿಚಾರ ಹೊಸತೇನಲ್ಲ. ಈ ಹಿಂದೆಯೂ ಅನೇಕ ಘಟಾನುಘಟಿ ನಾಯಕರೇ ಈ ಬಲೆಗೆ ಸಿಲುಕಿ ಮುಜುಗರ ಅನುಭವಿಸಿದ್ದರು. 2021ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿ ಬಿಡುಗಡೆಯಾಗಿ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿತ್ತು. ಇದು ವ್ಯವಸ್ಥಿತ ಹನಿಟ್ರ್ಯಾಪ್ ಹಾಗೂ ಬ್ಲಾಕ್ಮೇಲ್ ತಂತ್ರ ಎಂದು ಆರೋಪಿಸಲಾಗಿತ್ತಾದರೂ, ಈ ವಿವಾದದಿಂದಾಗಿ ಅವರು ಸಚಿವ ಸ್ಥಾನ ತ್ಯಜಿಸಬೇಕಾಯಿತು. ಹಾಗೆಯೇ 2016ರ ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್. ವೈ. ಮೇಟಿ ಅವರ ಸ್ಟಿಂಗ್ ಆಪರೇಷನ್ ವಿಡಿಯೋ ಕೂಡ ಭಾರಿ ಹಲ್ಚಲ್ ಸೃಷ್ಟಿಸಿತ್ತು. ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಕಾರಣ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಳೆದ ವರ್ಷ ಹಾಲಿ ಶಾಸಕ ಕೆ.ಎನ್. ರಾಜಣ್ಣ ಅವರ ಹನಿಟ್ರ್ಯಾಪ್ ಯತ್ನ ವಿಚಾರವೂ ದೊಡ್ಡ ಸುದ್ದಿಯಾಗಿತ್ತು. ರಾಜ್ಯದ ಸುಮಾರು 48 ಶಾಸಕರು ಹಾಗೂ ರಾಜಕಾರಣಿಗಳನ್ನು ವಿರೋಧಿಗಳು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದು ಸಂಚಲನ ಮೂಡಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.