ಮಂಗಳೂರು, ಆಗಸ್ಟ್ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್ಸಿ ಐವನ್ ಡಿಸೋಜಾ (Ivan D’Souza) ಮನೆ ಮೇಲೆ ಕಲ್ಲುತೂರಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಭರತ್ ಅಲಿಯಾಸ್ ಯಕ್ಷಿತ್, ದಿನೇಶ್ ಕುರ್ತಮೊಗೆರು ಬಂಧಿತರು. ಸಿಸಿಕ್ಯಾಮರಾ ದೃಶ್ಯ ಆಧರಿಸಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಐವನ್ ಡಿಸೋಜಾ ಹೇಳಿಕೆಯಿಂದ ಸಿಟ್ಟಾಗಿ ಕಲ್ಲೆಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿ ಭರತ್, ಬಂಟ್ವಾಳ ತಾಲೂಕಿನ ಬೋಳಂತೂರಿನ ರಾಘವ ಭಂಡಾರಿ ಪುತ್ರ. ಭರತ್ ವಿರುದ್ಧ ಹಲ್ಲೆ ಆರೋಪದಡಿ ಈವರೆಗೆ 3 ಪ್ರಕರಣ ದಾಖಲಾಗಿವೆ. ಕನ್ಯಾನದಲ್ಲಿ ಫೈನಾನ್ಸ್ ವಸೂಲಿ ವಿಭಾಗದಲ್ಲಿ ದಿನೇಶ್ ಕೆಲಸ ಮಾಡುತ್ತಿದ್ದ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಆನಂದ ಪೂಜಾರಿ ಪುತ್ರ.
ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಥಾಮರ್ ಚಂದ್ ಗೆಹಲೋತ್ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಆ.22 ರಂದು ರಾತ್ರಿ ಸುಮಾರು 11 ಗಂಟೆಗೆ ಹೆಲ್ಮೆಟ್ ಹಾಕಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಮನೆಯ ಮೇಲೆ ರಾತ್ರಿ ಕಲ್ಲು ತೂರಾಟ ಮಾಡಿ ಪರಾರಿಯಾಗಿದ್ದರು.
ಇದನ್ನೂ ಓದಿ: ಕೈ ಎಂಎಲ್ಸಿ ಐವನ್ ಡಿಸೋಜಾಗೆ ಸಂಕಷ್ಟ: ಜನಪ್ರತಿನಿಧಿಗಳ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ ಬಿಜೆಪಿ
ಇದಾದ ನಂತರ 2 ನಿಮಿಷ ಬಿಟ್ಟು ಮತ್ತೆ ಬೈಕ್‌ನಲ್ಲಿ ಬಂದು ಕಲ್ಲು ತೂರಾಟ ಮಾಡಿದ್ದರು. ಇದರಿಂದ ಐವನ್ ಡಿಸೋಜಾ ಅವರ ಮನೆಯ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಕಲ್ಲು ತೂರಾಟ ವೇಳೆ ಐವನ್ ಡಿಸೋಜಾ ಅವರ ಪತ್ನಿ ಕವಿತಾ ಡಿಸೋಜಾ ಮನೆಯಲ್ಲಿ ಇದ್ದರು. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:27 pm, Wed, 28 August 24