ಬೆಂಗಳೂರು ಅರಮನೆ ಜಮೀನು ವಿವಾದ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್
ಬೆಂಗಳೂರು ಅರಮನೆ ಮೈದಾನದ ಭೂವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತಾತ್ಕಾಲಿಕ ರಿಲೀಫ್ ದೊರೆತಿದೆ. 3400 ಕೋಟಿ ರೂ. ಟಿಡಿಆರ್ ಪಾವತಿಗೆ ತಡೆಯಾಜ್ಞೆ ನೀಡಲಾಗಿದೆ. ರಾಜಮನೆತನಕ್ಕೆ ಟಿಡಿಆರ್ ನೀಡುವಂತೆ ಹಿಂದೆ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಜುಲೈ 21 ಮತ್ತು ಆಗಸ್ಟ್ 18 ರಂದು ಮುಂದಿನ ವಿಚಾರಣೆ ನಿಗದಿಯಾಗಿದೆ.

ನವದೆಹಲಿ, ಮೇ 29: ಬೆಂಗಳೂರು ಅರಮನೆ ಮೈದಾನದ ಭೂ ವಿವಾದ ಪ್ರಕರಣಕ್ಕೆ (Bengaluru palace land case) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ಗುರುವಾರ ತಾತ್ಕಾಲಿಕ ರಿಲೀಫ್ ದೊರೆತಿದೆ. ಸುಮಾರು 3,400 ಕೋಟಿ ರೂ. ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ಅಥವಾ ಟಿಡಿಆರ್ ಸರ್ಟಿಫಿಕೇಟ್ (TDR certificate) ಅನ್ನು ರಾಜಮನೆತನಕ್ಕೆ ಹಸ್ತಾಂತರ ಮಾಡಬೇಕೆಂದು ಈ ಹಿಂದೆ ನೀಡಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನ್ಯಾ.ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದ್ದು, ಮರುಪರಿಶೀಲನಾ ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಹಾಗೂ ಮುಖ್ಯ ಸಿವಿಲ್ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದೆ.
ಬಳ್ಳಾರಿ ಮತ್ತು ಜಯಮಹಲ್ ರಸ್ತೆಯ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಮಾಡಿದ್ದಕ್ಕೆ ಸಂಬಂಧಿಸಿದ್ದ ಪ್ರಕರಣ ಇದಾಗಿದೆ. ಟಿಡಿಆರ್ಗಳನ್ನು ರಾಜಮನೆತನಕ್ಕೆ ನೀಡಬಾರದು ಎಂದು ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು. ಆದರೆ, 3,400 ಕೋಟಿ ರೂ. ಟಿಡಿಆರ್ ಅನ್ನು ರಾಜಮನೆತನದವರಿಗೆ ನೀಡುವಂತೆ ಮೇ 22 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ, ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಟಿಡಿಆರ್ ಹಸ್ತಾಂತರಕ್ಕೆ ತಡೆ ನೀಡಿದೆ.
ಇದನ್ನೂ ಓದಿ: ಬೆಂಗಳೂರಿನ ಅರಮನೆ ಜಮೀನು ವಿವಾದ: ರಾಜಮನೆತನಕ್ಕೆ ಟಿಡಿಆರ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ ಶಶಿ ಕಿರಣ್ ಶೆಟ್ಟಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದರು.
ಏನಿದು ಪ್ರಕರಣ?
ಬೆಂಗಳೂರು ಅರಮನೆ ಮೈದಾನದ ಬಳಿ ರಸ್ತೆ ಅಗಲೀಕರಣಕ್ಕಾಗಿ ಒಟ್ಟು 15.36 ಎಕರೆ ಜಮೀನು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಇದರ ವಿರುದ್ಧ ರಾಜಮನೆತನದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎಕರೆಗೆ 200 ಕೋಟಿ ರೂಪಾಯಿಯಂತೆ 3,400 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಟಿಡಿಆರ್ ನೀಡಲು ಒಪ್ಪದ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಹೂಡಿತ್ತು. ಹೀಗಾಗಿ ಸುಗ್ರೀವಾಜ್ಞೆ ಮತ್ತು ಪರಿಹಾರ ನೀಡದ್ದಕ್ಕೆ ರಾಜಮನೆತನ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೇ 22 ರಂದು ಟಿಡಿಆರ್ ಪಾವತಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Thu, 29 May 25








