ಸತತ 4 ವರ್ಷಗಳಿಂದ ತಮಿಳುನಾಡಿಗೆ ಕರ್ನಾಟಕದಿಂದ ಹೆಚ್ಚುವರಿ ಕಾವೇರಿ ನೀರು ಬಿಡುಗಡೆ
2021ರ ಜೂನ್ ನಿಂದ 2022ರ ಮೇ ತಿಂಗಳ ಅವಧಿಯೊಳಗೆ ಕರ್ನಾಟಕವು 177.25 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಗಿತ್ತು. ಆದರೆ, ಈ ಅವಧಿಯೊಳಗೆ ಕರ್ನಾಟಕವು 281 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ.
ಬೆಂಗಳೂರು: ಕರ್ನಾಟಕವು ತಮಿಳುನಾಡಿಗೆ (Tamil Nadu) ಪ್ರತಿ ವರ್ಷ ಬಿಡಬೇಕಾದ ಕಾವೇರಿ ನೀರಿನ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಹೀಗಾಗಿ, ಹೆಚ್ಚುವರಿ ಕಾವೇರಿ ನೀರನ್ನು (Cauvery River) ಕರ್ನಾಟಕದಲ್ಲೇ ಸಂಗ್ರಹಿಸಿಡಲು ಮೇಕೆದಾಟು (Mekedatu Dam) ಬಳಿ ಡ್ಯಾಂ ನಿರ್ಮಾಣಕ್ಕೆ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗ ಕರ್ನಾಟಕದ ಬೇಡಿಕೆಗೆ ಪೂರಕವಾದ ಅಂಕಿ-ಅಂಶಗಳು ಲಭ್ಯವಾಗಿವೆ. ಕರ್ನಾಟಕವು ಕಳೆದ ನಾಲ್ಕು ವರ್ಷಗಳಲ್ಲೂ ನಿರಂತರವಾಗಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ.
ಕರ್ನಾಟಕವು ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾದ ವರ್ಷಗಳಲ್ಲಿ ಕಾವೇರಿ ನದಿ ನೀರು ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿಗಿಂತ ಹೆಚ್ಚಿನ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ಈ ವಾದಕ್ಕೆ ಪುಷ್ಟಿ ನೀಡುವ ಕಳೆದ ನಾಲ್ಕು ವರ್ಷದ ನೀರು ಬಿಡುಗಡೆಯ ಅಂಕಿಅಂಶಗಳು ಲಭ್ಯವಾಗಿವೆ. ಹೀಗಾಗಿ ಕರ್ನಾಟಕದ ಗಡಿಯ ಮೇಕೆದಾಟಿನಲ್ಲಿ ಹೊಸದಾಗಿ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟುವ ಕರ್ನಾಟಕದ ಬೇಡಿಕೆಗೆ ಅಂಕಿಅಂಶಗಳು ಪೂರಕವಾಗಿವೆ.
ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ಪ್ರತಿಯೊಂದು ಜಲ ವರ್ಷದಲ್ಲಿ ಕರ್ನಾಟಕವು ಬಿಳಿಗುಂಡ್ಲು ಜಲಮಾಪಕದ ಮೂಲಕ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಜಲ ವರ್ಷವು ಜೂನ್ ತಿಂಗಳಲ್ಲಿ ಪ್ರಾರಂಭವಾಗಿ, ಮೇ ತಿಂಗಳಲ್ಲಿ ಅಂತ್ಯವಾಗುತ್ತದೆ. ಹೀಗಾಗಿ ಜೂನ್ ನಿಂದ ಮೇ ತಿಂಗಳ ಅಂತ್ಯದೊಳಗೆ ಕರ್ನಾಟಕವು 177.25 ಟಿಎಂಸಿ ಕಾವೇರಿ ನೀರನ್ನು ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ಬಿಡಬೇಕು. ಮಳೆ ಕೊರತೆಯಾದ ವರ್ಷಗಳಲ್ಲಿ ಸಂಕಷ್ಟವನ್ನು ಕರ್ನಾಟಕ-ತಮಿಳುನಾಡು ರಾಜ್ಯಗಳೆರೆಡೂ ಸಮಾನವಾಗಿ ಹಂಚಿಕೊಳ್ಳಬೇಕು. ಸಂಕಷ್ಟದ ಪ್ರಕಾರವೇ ಸಂಕಷ್ಟದ ವರ್ಷಗಳಲ್ಲಿ ನೀರಿನ ಹಂಚಿಕೆಯಾಗಬೇಕು ಎನ್ನುವುದು ಕರ್ನಾಟಕದ ವಾದ. ಆದರೇ, ಸಂಕಷ್ಟದ ವರ್ಷದಲ್ಲಿ ನೀರಿನ ಹಂಚಿಕೆ ಯಾವ ಮಾನದಂಡದ ಪ್ರಕಾರ ನಡೆಯಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ.
ಇದನ್ನೂ ಓದಿ: ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳ; ಅವರ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ: ಸಿಎಂ ಬೊಮ್ಮಾಯಿ
2021ರ ಜೂನ್ನಿಂದ 2022ರ ಮೇ ತಿಂಗಳ ಜಲ ವರ್ಷದ ಅವಧಿಯಲ್ಲಿ ಕರ್ನಾಟಕವು ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚಿನ ಕಾವೇರಿ ನೀರನ್ನು ಹರಿಸಿರುವುದು ವಿಶೇಷ. 2021ರ ಜೂನ್ ನಿಂದ 2022ರ ಮೇ ತಿಂಗಳ ಅವಧಿಯೊಳಗೆ ಕರ್ನಾಟಕವು 177.25 ಟಿಎಂಸಿ ಕಾವೇರಿ ನೀರನ್ನು ತನ್ನ ನಾಲ್ಕು ಜಲಾಶಯಗಳಿಂದ ತಮಿಳುನಾಡಿಗೆ ಹರಿಸಬೇಕಾಗಿತ್ತು. ಆದರೆ, ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಕಳೆದ ವರ್ಷ ಡಿಸೆಂಬರ್-ಜನವರಿವರೆಗೂ ಮಳೆ ಸುರಿದಿದ್ದರಿಂದ ಹೆಚ್ಚಿನ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. 2021ರ ಜೂನ್ ನಿಂದ 2022ರ ಮೇ ತಿಂಗಳ ಅವಧಿಯೊಳಗೆ ಕರ್ನಾಟಕವು 281 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಅಂದರೆ, ಜಲ ವರ್ಷದಲ್ಲಿ 103 ಟಿಎಂಸಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿಸಲಾಗಿದೆ. 2021ರ ಆಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕವು 145 ಟಿಎಂಸಿ ನೀರನ್ನು ಹರಿಸಿದೆ. ಅಕ್ಟೋಬರ್ ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಕರ್ನಾಟಕವು ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ 40 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಡ್ಯಾಂಗಳಿಂದ 145 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಇದರಿಂದಾಗಿ ಒಟ್ಟಾರೆ 2021-22ರ ಜಲ ವರ್ಷದಲ್ಲಿ ಕರ್ನಾಟಕವು ತಮಿಳುನಾಡಿಗೆ 281 ಟಿಎಂಸಿ ನೀರು ಹರಿಸಲು ಸಹಾಯಕವಾಯಿತು.
ಕೇವಲ 2021-22ರ ಜಲ ವರ್ಷದಲ್ಲಿ ಮಾತ್ರವಲ್ಲದೆ, ಈ ಹಿಂದಿನ 3 ಜಲ ವರ್ಷಗಳಲ್ಲೂ ಕರ್ನಾಟಕವು ನಿಗದಿಗಿಂತ ಹೆಚ್ಚಿನ ಪ್ರಮಾಣದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಕರ್ನಾಟಕವು 2018-19ರಲ್ಲಿ ಒಟ್ಟಾರೆ 405 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಅಂದರೆ, 228 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿಸಿದೆ.
2019-20ರ ಜಲವರ್ಷದಲ್ಲಿ ಕರ್ನಾಟಕವು ಒಟ್ಟಾರೆ 275 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಅಂದರೆ, ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ 177.25 ಟಿಎಂಸಿಗಿಂತ ಹೆಚ್ಚುವರಿಯಾಗಿ 97 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. 2020-21ರ ಜಲ ವರ್ಷದಲ್ಲಿ 211 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಂದರೆ, 34 ಟಿಎಂಸಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿಸಲಾಗಿದೆ. 2021-22ರಲ್ಲಿ 281 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಂದರೆ, 103 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕರ್ನಾಟಕವು ತಮಿಳುನಾಡಿಗೆ ಹರಿಸಿದೆ.
ಈ ಅಂಕಿಅಂಶಗಳನ್ನು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಟಿವಿ9ಗೆ ನೀಡಿದ್ದಾರೆ. ಹೀಗಾಗಿ, ಕರ್ನಾಟಕವು ಹೆಚ್ಚುವರಿಯಾಗಿ ಹರಿಸಿದ ನೀರುನ್ನ ತಮಿಳುನಾಡು ರಾಜ್ಯ ಕೂಡ ಬಳಕೆ ಮಾಡಿಕೊಳ್ಳಲಾಗದೇ ಸಮುದ್ರಕ್ಕೆ ಹರಿಸುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಬಾರಿ ಮಳೆಯಾದಾಗ, ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ನೀರು ಒಮ್ಮೆ ಸಮುದ್ರ ಸೇರಿದ ಮೇಲೆ ವಾಪಾಸ್ ತಂದು ಕೃಷಿ ಬೆಳೆಗಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕರ್ನಾಟಕವು ರಾಜ್ಯದ ಗಡಿಯ ಮೇಕೆದಾಟು ಬಳಿ ಹೊಸದಾಗಿ 64 ಟಿಎಂಸಿ ಸಾಮರ್ಥ್ಯದ ಹೊಸ ಡ್ಯಾಂ ನಿರ್ಮಾಣ ಮಾಡಿದರೆ ಈ ಡ್ಯಾಂನಲ್ಲಿ ಮಳೆ ಹೆಚ್ಚಾದ ವರ್ಷಗಳ ನೀರನ್ನು ಸಂಗ್ರಹಿಸಿಡಬಹುದು. ತಮಿಳುನಾಡಿನ 177.25 ಟಿಎಂಸಿ ನೀರನ್ನು ಹರಿಸಿದ ಬಳಿಕ ಹೆಚ್ಚುವರಿ ನೀರನ್ನು ಮೇಕೆದಾಟು ಬಳಿಯ ಡ್ಯಾಂನಲ್ಲಿ ಸಂಗ್ರಹಿಸಿಡಬಹುದು. ತಮಿಳುನಾಡಿಗೆ ನೀರಿನ ಕೊರತೆಯಾದಾಗ, ಮೇಕೆದಾಟು ಡ್ಯಾಂನಿಂದ ಕೂಡ ತಮಿಳುನಾಡಿಗೆ ನೀರನ್ನು ಹರಿಸುತ್ತೇವೆ. ಮೇಕೆದಾಟು ಡ್ಯಾಂನಿಂದ ತಮಿಳುನಾಡಿಗೂ ಕೂಡ ಅನುಕೂಲ ಎಂಬುದು ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕದ ಮೂರು ರಾಜಕೀಯ ಪಕ್ಷಗಳ ವಾದ.
ಆದರೆ, ತಮಿಳುನಾಡಿನ ರಾಜಕೀಯ ಪಕ್ಷಗಳು ಹಾಗೂ ತಮಿಳುನಾಡು ಸರ್ಕಾರ ಈ ವಾದವನ್ನು ಒಪ್ಪುತ್ತಿಲ್ಲ. ಮೇಕೆದಾಟು ಬಳಿ ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಮತ್ತೊಂದು ಡ್ಯಾಂ ಕಟ್ಟುವ ಮೂಲಕ ಕಾವೇರಿ ನೀರಿನ ಸಹಜ ಹರಿವಿಗೆ ತಡೆಯೊಡ್ಡಲು ಹೊರಟಿದೆ. ಇದರಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನೀರಿನ ಹರಿವಿಗೆ ತೊಂದರೆಯಾಗುತ್ತದೆ. ಹೀಗಾಗಿ ಮೇಕೆದಾಟು ಬಳಿ ಹೊಸ ಡ್ಯಾಂ ನಿರ್ಮಾಣ ಮಾಡಬಾರದು ಎಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ