ಹೈಕೋರ್ಟ್ ರಿಲೀಫ್: ನಾನು ತಪ್ಪು ಮಾಡಿಲ್ಲ ಎಂದ ಡಿಕೆ ಶಿವಕುಮಾರ್; ವಿಜಯೇಂದ್ರ ಸೇರಿ ಯಾರು ಏನಂದ್ರು?
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಸಿಬಿಐ ನಡೆಯ ಮೇಲೆ ಅವರ ಭವಿಷ್ಯ ನಿಂತಿದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ತಮ್ಮ ವಕೀಲರೊಂದಿಗೆ ಮಾತುಕತಡೆ ನಡೆಸಿದ್ದಾರೆ. ಹಾಗಾದರೆ, ಕೋರ್ಟ್ ರಿಲೀಫ್ ಬಗ್ಗೆ ಡಿಕೆ ಶಿವಕುಮಾರ್ ಏಂದ್ರು? ವಿಪಕ್ಷ ನಾಯಕರು ಏನಂದ್ರು? ಇಲ್ಲಿದೆ ಮಾಹಿತಿ.
ಬೆಂಗಳೂರು, ನ.29: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂದ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಮುಂದೆ ಮಾಡಬೇಕಾದ ಕಾನೂನು ಹೋರಾಟದ ವಿಚಾರವಾಗಿ ತಮ್ಮ ವಕೀಲರೊಂದಿಗೆ ಮಾತಕತೆ ನಡೆಸಿದ್ದಾರೆ. ಅಲ್ಲದೆ, ಕೋರ್ಟ್ನಿಂದ ರಿಲೀಫ್ ಸಿಕ್ಕಿದ ಬಗ್ಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ ಅಂತಾ ಈಗಾಗಲೇ ಹೇಳಿದ್ದೇನೆ ಎಂದರು.
ನ್ಯಾಯಾಲಯದ ಬಗ್ಗೆ ನನಗೆ ತುಂಬಾ ಗೌರವ ಇದೆ. ನನಗೆ ಕೊಡಬಾರದ ನೋವು ಕೊಟ್ಟಿದ್ದಾರೆ. ಈ ಬಗ್ಗೆ ಕೇಳಿದರೆ ಗಾಬರಿಪಡುತ್ತೀರಿ, ನಾನು ಪಕ್ಷದ ಕೆಲಸ ಮಾಡಿದ್ದು, ನನ್ನ ಕಷ್ಟದ ಸಮಯದಲ್ಲಿ ಜನರು ಪ್ರಾರ್ಥನೆ ಮಾಡಿದ್ದಾರೆ. ಮೇಲೊಬ್ಬ ದೇವರಿದ್ದಾನೆ ಅವನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ವಕೀಲರ ಬಳಿ ಏನೇನು ಆಗಿದೆ ಎಲ್ಲವನ್ನೂ ಚರ್ಚೆ ಮಾಡಬೇಕು ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್, ಮೇಲ್ಮನವಿ ವಾಪಸ್ಗೆ ಅನುಮತಿ
ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದ ಬಗ್ಗೆ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಬಳಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್, ಅದು ಒಳ್ಳೆದಲ್ವಾ ನಾವು ಅದನ್ನೇ ಬಯಸಿದ್ದೆವು. ಹಿಂದೆ ಬಿಜೆಪಿ ಸರ್ಕಾರ ತಪ್ಪು ಮಾಡಿದ್ದರು. ಸ್ಪೀಕರ್ ಅನುಮತಿ ಇಲ್ಲದೆ ಪ್ರಕರಣ ಸಿಬಿಐಗೆ ಕೊಟ್ಟಿದ್ದರು ಅಂತ ಕೇಸ್ ವಾಪಸ್ ಪಡೆದಿದ್ದೆವು. ಸರ್ಕಾರದ ಆದೇಶವನ್ನು ಹೈಕೋರ್ಟ್ಗೆ ಕಮ್ಯುನಿಕೇಟ್ ಮಾಡಿದ್ದೆವು. ಅದಕ್ಕೆ ರಿಲೀಫ್ ಸಿಕ್ಕಿದೆ ಅಂದರೆ ಬಹಳ ಸಂತೋಷ ಎಂದರು.
ನ್ಯಾಯಾಲಯದಲ್ಲಿ ಜಯ ಸಿಗಲ್ಲ: ವಿಜಯೇಂದ್ರ
ಜಾರಿ ನಿರ್ದೇಶನಾಲಯ ಪತ್ರ ಬರೆದಾಗ ಸಿಬಿಐ ತನಿಖೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮತಿ ಕೊಟ್ಟಿತ್ತು. ಆದರೆ, ಇದನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ಕಾನೂನು ಬಾಹಿರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇದಕ್ಕೆ ನ್ಯಾಯಾಲಯದಲ್ಲಿ ಜಯ ಸಿಗಲ್ಲ. ಏನೇ ಪ್ರಯತ್ನ ಮಾಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಅವರನ್ನು ಅಪರಾಧಿ ಎನ್ನುತ್ತಿಲ್ಲ. ತಪ್ಪು ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದರು.
ನಾವೇನು ಡಿಕೆಶಿ ವಿರೋಧಿಗಳಲ್ಲ: ಯಡಿಯೂರಪ್ಪ
ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾವೇನು ಡಿಕೆ ಶಿವಕುಮಾರ್ ವಿರೋಧಿಗಳಲ್ಲ. ಕೋರ್ಟ್ ತೀರ್ಮಾನದ ಬಗ್ಗೆ ನಾವೇನು ಹೇಳುವುದಕ್ಕೆ ಆಗಲ್ಲ ಎಂದರು. ಬಿಹಾರದಲ್ಲಿ ಹಿಂದೂಗಳ ಹಬ್ಬಗಳ ರಜೆ ಕಡಿತ ವಿಚಾರವಾಗಿ ಮಾತನಾಡಿದ ಅವರು, ಇದು ಅಕ್ಷಮ್ಯ ಅಪರಾಧ. ಹಿಂದೂ ಹಬ್ಬಗಳ ರಜೆ ಕಡಿತಗೊಳಿಸಿ ಮುಸ್ಲಿಂರ ಹಬ್ಬಗಳ ರಜೆ ಹೆಚ್ಚಿಸುವುದು ಸರಿಯಲ್ಲ ಎಂದರು.
ಬಿಜೆಪಿ ಶಾಸಕ ಸಿಎನ್ ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿ, ಕೋರ್ಟ್ ವಿಚಾರ ಆಗಿರುವುದರಿಂದ ಏನೂ ಹೇಳಲು ಆಗುವುದಿಲ್ಲ. ನ್ಯಾಯಾಲಯದ ನಿಲುವನ್ನು ಪ್ರಶ್ನೆ ಮಾಡಲು ಆಗಲ್ಲ ಎಂದರು. ಡಿಕೆ ಶಿವಕುಮಾರ್ ಕಟ್ಟಿಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಧಿಕಾರ ದುರ್ಬಳಕೆ ಮಾಡಿದವರಿಗೆ ಮಾತನಾಡಲು ಆತ್ಮಸಾಕ್ಷಿ ಇದ್ಯಾ? ಡಿ.ಕೆ.ಶಿವಕುಮಾರ್ ಬಿಟ್ಟರೆ ಇವರಿಗೆ ಬೇರೆ ಅಸ್ತಿತ್ವ ಇಲ್ಲವೇ? ಒಬ್ಬ ವ್ಯಕ್ತಿ ರಕ್ಷಣೆಗೆ ಸರ್ಕಾರ ದುರ್ಬಳಕೆ ಮಾಡಿಕೊಂಡಿದ್ದು ಭಂಡತನ ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ತಾತ್ಕಾಲಿಕ ರಿಲೀಫ್: ಸಿಬಿಐ ನಡೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇನೆ ಎಂದ ಯತ್ನಾಳ್
ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಡಿಕೆ ಶಿವಕುಮಾರ್ ತಮ್ಮ ಮೇಲ್ಮನವಿಯನ್ನು ಕೋರ್ಟ್ನಲ್ಲಿ ಹಿಂಪಡೆದಿದ್ದಾರೆ. ಕೋರ್ಟ್ ತೀರ್ಮಾನ ಸ್ಪಷ್ಟವಾಗಿ ಇನ್ನು ಗೊತ್ತಿಲ್ಲ. ಮುಖ್ಯವಾದ ವಿಷಯದ ಬಗ್ಗೆ ಚರ್ಚೆ ಕೋರ್ಟ್ ಮುಂದೆ ಇದೆ. ಕೇಸ್ ಹಿಂಪಡೆಯುವುದು ಕ್ಯಾಬಿನೆಟ್ ತೀರ್ಮಾನವಾಗಿದೆ. ಕಾಂಗ್ರೆಸ್ ಸರಕಾರ ನಡು ಬೀದಿಯಲ್ಲಿ ಬಟ್ಟೆ ಬಿಚ್ಚಿ ನಿರ್ವಾಹಣ ನಿಂತಂತೆ ಆಗಿದೆ. ಸಿಬಿಐ ತನಿಖೆ 90 ರಷ್ಟು ಮುಗಿದಿದೆ. ತಮಗೆ ಶಿಕ್ಷೆ ಖಚಿತ ಎಂದು ಗೊತ್ತಾಗಿ ಸರಕಾರದ ಮೇಲೆ ಒತ್ತಡ ತಂದು ಡಿಕೆ ಶಿವಕುಮಾರ್ ಈ ತೀರ್ಮಾನ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಇದನ್ನು ಅನುಭವಿಸಲೇ ಬೇಕಾಗುತ್ತದೆ ಎಂದರು.
ಕಾಯ್ದೆಯಲ್ಲಿ ಸ್ಪೀಕರ್ ಅನುಮತಿ ಪಡೆಯಬೇಕು ಎಂದು ಎಲ್ಲು ಇಲ್ಲ. ಸಿಬಿಐಗೆ ವಹಿಸಿದ ಕ್ರಮ ಸರಿಯಾಗಿತ್ತು. ಜನ ಇಂತಹ ಲಜ್ಜೆಗೆಟ್ಟ ತೀರ್ಮಾನ ನೋಡುತ್ತಿದ್ದಾರೆ. ಕೋರ್ಟ್ ಸಹ ಸರಿಯಾದ ತೀರ್ಪು ಕೊಡುತ್ತದೆ ಎಂದರು. ಯತ್ನಾಳ್ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ್ ಮಧ್ಯ ಪ್ರವೇಶಕ್ಕಾಗಿ ಅರ್ಜಿ ಹಾಕಿದ್ದಾರೆ. ಕೋರ್ಟ್ ಅದನ್ನು ಮಾನ್ಯ ಮಾಡಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Wed, 29 November 23