ಬೆಂಗಳೂರು, ಅಕ್ಟೋಬರ್ 11: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 43 ಕೇಸ್ಗಳನ್ನ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡ ಈ ನಿರ್ಧಾರಕ್ಕೆ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. 43 ಕೇಸ್ಗಳ ಜೊತೆಗೆ ಕೆಲ ನಾಯಕರ ಮೇಲಿನ ಕೇಸ್ಗಳನ್ನು ವಾಪಸ್ ಪಡೆಯಲಾಗಿದೆ. ಹಾಗಾದರೆ ರಾಜ್ಯ ಸರ್ಕಾರ ಯಾರ ಯಾರ ಮೇಲಿನ ಕೇಸ್ ವಾಪಸ್ ಪಡೆದಿದೆ ಎಂಬ ಪಟ್ಟಿ ಇಲ್ಲಿದೆ.
ಹಿಜಾಬ್ ಪರ ಪ್ರತಿಭಟನೆ ನಡೆಸಿದ್ದ ಎಐಎಂಐಎಂ ಕಾರ್ಯಕರ್ತರ ವಿರುದ್ಧ ಕಲಬುರಗಿ ಜಿಲ್ಲೆ ಆಳಂದ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಾಪಸ್ ಪಡೆಯಲಾಗಿದೆ. 2022ರಲ್ಲಿ ಆಳಂದ ಠಾಣೆಯಲ್ಲಿ AIMIM ವಿರುದ್ಧ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ಸರ್ಕಾರಕ್ಕೆ ಕೆಲವು ಕೇಸ್ಗಳನ್ನು ಹಿಂಪಡೆಯುವ ಅಧಿಕಾರ ಇದೆ ಎಂದ ಸಿದ್ದರಾಮಯ್ಯ
ಕನ್ನಡ ಪರ ಹೋರಾಟಗಾರರು ರೋಲ್ಕಾಲ್ ಗಿರಾಕಿಗಳೆಂದು 2022ರಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಲಗಿತ್ತು. ಬಾಗಲಕೋಟೆಯ ನವನಗರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ವಾಪಸ್ ಪಡೆಯಲಾಗಿದೆ.
2023 ರಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನಿವಾಸದ ಮುಂದೆ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘ ಪ್ರತಿಭಟನೆ ನಡೆಸಿದ ಪ್ರಕರಣವನ್ನು ವಾಪಸ್ ಪಡೆಯಲಾಗಿದೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಂದ್ರ ಸಚಿವ ವಿ. ಸೋಮಣ್ಣ ಮೂಲಕ ಮನವಿ ಸಲ್ಲಿಸಲ್ಪಟ್ಟಿದ್ದ ಎರಡು ಪ್ರಕರಣಗಳು ವಾಪಸ್ ಪಡೆಯಲಾಗಿದೆ.
ಬೆಂಗಳೂರಿನ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2008 ಕರವೇ ಕಾರ್ಯಕರ್ತರು ಕೇಬಲ್ ಕಚೇರಿ ಮೇಲೆ ದಾಳಿ ಮಾಡಿದ್ದ ಪ್ರಕರಣ ಮತ್ತು 2008 ರಲ್ಲಿ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದ ರೈಲ್ವೇ ಇಲಾಖೆ ನೇಮಕಾತಿ ವೇಳೆ ಕರವೇ ಕಾರ್ಯಕರ್ತರ ಪ್ರತಿಭಟನೆ ಪ್ರಕರಣವನ್ನು ವಾಪಸ್ ಪಡೆಯಲಾಗಿದೆ.
ಇದನ್ನೂ ಓದಿ: ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 43 ಪ್ರಕರಣ ವಾಪಸ್: ಸಚಿವ ಸಂಪುಟ ನಿರ್ಧಾರ
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸಲ್ಲಿಸಿದ್ದ ಮನವಿ ಪ್ರಕರಣವನ್ನು ಕೂಡ ವಾಪಸ್ ಪಡೆಯಲಾಗಿದೆ. 2015ರಲ್ಲಿ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಅಕ್ರಮ ಗುಂಪು ಕಟ್ಟಿ ಸಾರ್ವಜನಿಕ ಓಡಾಟಕ್ಕೆ ತಡೆಯೊಡಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ವಾಪಸ್ ಪಡೆಯಲು ಸಚಿವ ಡಾ.ಎಂ.ಸಿ. ಸುಧಾಕರ್ ಮನವಿ ಸಲ್ಲಿಸಿದ್ದರು ಅದರಂತೆ ವಾಪಸ್ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.