ಅವ್ಯವಸ್ಥೆಗಳ ಆಗರ: ನವಲಗುಂದದ ಮೊರಾರ್ಜಿ ವಸತಿ ಶಾಲೆ
ಸರಕಾರ ಸಾಕಷ್ಟು ವರದಾನಗಳನ್ನು ನೀಡುತ್ತಿದ್ದರೂ ನವಲಗುಂದದ ಮೊರಾರ್ಜಿ ವಸತಿ ಶಾಲೆಗೆ ಯಾವುದೇ ಸೌಲಭ್ಯಗಳು ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ಧಾರವಾಡ: ಸರಕಾರ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿವರ್ಷ ಕೊಟ್ಯಾಂತರ ರೂಪಾಯಿ ಅನುದಾನವನ್ನು ಯೋಜನೆಗಳಿಗೆ ಬಿಡುಗಡೆ ಮಾಡುತ್ತಲೇ ಇದೆ. ಆದರೆ ಅದು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ ತಲುಪುತ್ತದೆ ಎನ್ನುವುದಕ್ಕೆ ಸಾಕ್ಷಿ ನವಲಗುಂದದ ಮೊರಾರ್ಜಿ ವಸತಿ ಶಾಲೆ. ಸರಕಾರ ಸಾಕಷ್ಟು ಅನುದಾನ ನೀಡಿದ್ದರೂ ವಸತಿ ನಿಲಯದ ಮಕ್ಕಳಿಗೆ ಊಟ ಹಾಕಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಭಾರೀ ಸಮಸ್ಯೆಯುಂಟಾಗಿದೆ.
ಸರಕಾರ ಸೌಲಭ್ಯ ನೀಡಿದರೂ ಮಕ್ಕಳಿಗೆ ಅದು ತಲುಪುತ್ತಿಲ್ಲ: ಕೊರೊನಾ ಹಾವಳಿ ನಂತರ ನವಲಗುಂದದ ಮುರಾರ್ಜಿ ವಸತಿ ಶಾಲೆ ಜನವರಿ 1ರಿಂದ ಆರಂಭಗೊಂಡಿದೆ. ಈ ಮೊರಾರ್ಜಿ ವಸತಿ ಶಾಲೆಯಲ್ಲಿ ಸದ್ಯಕ್ಕೆ 10ನೇ ತರಗತಿಯಲ್ಲಿ 50 ಮಕ್ಕಳು ಇದ್ದಾರೆ. ವಸತಿ ಶಾಲೆ ಆರಂಭದ ದಿನದಿಂದಲೂ ವಿದ್ಯಾರ್ಥಿಗಳು ಪ್ರಾಚಾರ್ಯರ ಧೋರಣೆಯಿಂದ ನಿತ್ಯ ಅರೆಹೊಟ್ಟೆಯಲ್ಲಿರುವಂತಾಗಿದೆ. ಇದಲ್ಲದೇ, ನಿರಂತರವಾಗಿ ವಿದ್ಯುತ್ ಸಮಸ್ಯೆ ವಿದ್ಯಾರ್ಥಿಗಳನ್ನು ಸಮಸ್ಯೆಗೆ ಸಿಲುಕಿಸುತ್ತಿದೆ.
ಅವ್ಯವಸ್ಥೆಯ ಆಗರವಾಗಿರುವ ವಸತಿ ಶಾಲೆ: ಇನ್ನು ವಸತಿ ಶಾಲೆಯಲ್ಲಿ ಕುಡಿಯುವ ನೀರಿಗೂ ಬರ. ಇದರಿಂದಾಗಿ ವಿದ್ಯಾರ್ಥಿಗಳು ದಾಹದಿಂದ ಪರದಾಡುವಂತಾಗಿದೆ. ಇನ್ನು ಓದಲು ಪುಸ್ತಕಗಳಾದರೂ ಇವೆಯಾ ಅಂದರೆ ಅದೂ ಇಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಸರಿಯಾದ ವೇಳೆಗೆ ಪಾಠ ಹೇಳಲು ಶಿಕ್ಷಕರು ಬರುವುದೇ ಇಲ್ಲ ಅನ್ನುವುದು ವಿದ್ಯಾರ್ಥಿಗಳ ಆರೋಪ. ಇನ್ನು ಮಕ್ಕಳಿಗೆ ಅನಾರೋಗ್ಯವುಂಟಾದರೆ ಶುಶ್ರೂಷಕಿಯರು ಕೂಡ ಬರುವುದಿಲ್ಲ. ವಿದ್ಯಾರ್ಜನೆಗಾಗಿ ಪಾಲಕರನ್ನು ತೊರೆದು ಬಂದಿರುವ ವಿದ್ಯಾರ್ಥಿಗಳು ಇಲ್ಲಿ ವಾಸಿಸುವುದೇ ಕಷ್ಟವಾಗಿ ಹೋಗಿದೆ. ಶಾಲೆ ಆರಂಭಕ್ಕೂ ಮುನ್ನ ಎಲ್ಲ ಶಾಲಾ ಕೊಠಡಿ ಆವರಣವನ್ನು ಸ್ವಚ್ಛಗೊಳಿಸುವಂತೆ ಸರಕಾರ ಸೂಚಿಸಿದ್ದರೂ ಇದುವರೆಗೆ ಅದು ಆಗಿಯೇ ಇಲ್ಲ. ಇದಕ್ಕಿಂತ ಭಯಂಕರ ಸಂಗತಿ ಎಂದರೆ ಇದೇ ವಸತಿ ನಿಲಯದಲ್ಲಿ ಕೊರೊನಾ ರೋಗಿಗಳ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆಗಿನ ಕೊರೊನಾ ರೋಗಿಗಳಿಗೆ ನೀಡಲಾಗಿದ್ದ ಬೆಡ್‍ಗಳು ಇನ್ನು ಶಾಲಾ ಕೊಠಡಿಗಳಲ್ಲಿಯೇ ಇವೆ. ವಿದ್ಯಾರ್ಥಿಗಳಿಗೆ ಇದೇ ಕೊಠಡಿಗಳನ್ನು ನೀಡಲಾಗಿದ್ದರೂ, ಇದುವರೆಗೂ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ.
ವಸತಿ ಶಾಲೆಯಲ್ಲಿ 25 ವಿದ್ಯಾರ್ಥಿನಿಯರು ಇದ್ದಾರೆ. ಇದುವರೆಗೂ ತಮಗೆ ಸರಕಾರ ನೀಡುವ ಶುಚಿ ಸಂಭ್ರಮ ಕಿಟ್‍ನ್ನು ಪ್ರಾಚಾರ್ಯರು ಇದುವರೆಗೆ ವಿತರಿಸಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ತಮಗೆ ಇಲ್ಲಿ ಸರಿಯಾದ ಯಾವುದೇ ರಕ್ಷಣೆ ಇಲ್ಲ. ಇನ್ನು ಆರೋಗ್ಯ ಸಂಬಂಧವಾಗಿ ಯಾರು ಕೂಡ ವಿಚಾರಿಸುವುದಿಲ್ಲ. ಸಣ್ಣದೊಂದು ಆರೋಗ್ಯ ಸಮಸ್ಯೆಯಾದರೂ ಪಾಲಕರಿಗೆ ಫೋನ್ ಮಾಡಿ ಔಷಧ ತರಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.
ಇದುವರೆಗೂ ಪುಸ್ತಕ ನೀಡಿಲ್ಲ: ಶಾಲೆ ಆರಂಭವಾಗಿ ಒಂದು ತಿಂಗಳು ಕಳೆದರೂ ಇದುವರೆಗೂ ತಮಗೆ ಸರಕಾರದಿಂದ ಬಂದಿರುವ ನೋಟ್ಬುಕ್ ಹಾಗೂ ರೀಡಿಂಗ್ ಬುಕ್ಗಳನ್ನು ಸಮರ್ಪಕವಾಗಿ ವಿತರಿಸಿಲ್ಲ. ಈ ಕುರಿತಾಗಿ ಸಿಬ್ಬಂದಿಯನ್ನು ಕೇಳಿದರೆ, ಬೇಕಿದ್ದರೆ ಇಲ್ಲಿ ಇರಬಹುದು. ಇಲ್ಲದಿದ್ದರೆ ನಿಮ್ಮ ಟಿ.ಸಿ. ತೆಗೆದುಕೊಂಡು ಹೋಗಿ ಎಂದು ಗದರಿಸುತ್ತಾರೆ. ವಸತಿ ನಿಲಯದ ಪರಿಸ್ಥಿತಿಯನ್ನು ಹೊರಗೆ ಹೇಳಿದರೆ ಸಾಕಷ್ಟು ಕಿರಿಕಿರಿ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಅಳಲು.
ತಹಶೀಲ್ದಾರರ ಗಮನಕ್ಕೂ ಬಂದ ಅವ್ಯವಸ್ಥೆ, ಶಿಸ್ತು ಕ್ರಮ ಜಾರಿ:
ಈ ಬಗ್ಗೆ ನವಲಗುಂದ ತಹಸೀಲ್ದಾರ್ ನವೀನ್ ಹುಲ್ಲೂರು ಅವರಿಗೆ ಅನೇಕ ವಿದ್ಯಾರ್ಥಿಗಳು ಹಾಗೂ ಪಾಲಕರು ದೂರು ನೀಡಿದ್ದಾರೆ. ಈ ಬಗ್ಗೆ ಅವರು ವಿಚಾರಿಸಿ ನೋಡಿದಾಗ ಇಲ್ಲಿ ಸಾಕಷ್ಟು ಅವ್ಯವಸ್ಥೆ ಇರುವುದು ಅವರ ಗಮನಕ್ಕೆ ಬಂದಿದೆ.
ಈ ವಸತಿ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ, ಕಳಪೆ ಆಹಾರ ಪೂರೈಕೆ ಮಾಡುತ್ತಿರುವುದು ಕಂಡು ಬಂದಿದೆ. ಪ್ರಾಚಾರ್ಯರ ಕುರಿತು ಬಂದಿರುವ ದೂರು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿರುವ ಹಿನ್ನೆಲೆಯಲ್ಲಿ ಪ್ರಭಾರಿ ಪ್ರಾಚಾರ್ಯರಾಗಿದ್ದ ಅಬಿದಾ ಬೇಗಂ ಅವರನ್ನು ಅಲ್ಲಿಂದ ತೆಗೆಯಲಾಗಿದೆ. ಅವರ ಸ್ಥಾನಕ್ಕೆ ಮಲ್ಲಿಕಾರ್ಜುನ ಸಜ್ಜನ್ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಇನ್ನೂ ಐದು ಜನ ಶಿಕ್ಷಕರನ್ನು ಅಲ್ಲಿಂದ ಬೇರೆಡೆಗೆ ವರ್ಗ ಮಾಡಲು ನಿರ್ಧರಿಸಲಾಗಿದೆ. ಇನ್ನು ಅವ್ಯವಸ್ಥೆಯನ್ನು ಸರಿಪಡಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ ನವೀನ್ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ್ದಾರೆ.
ಈ ಹಾಸ್ಟೆಲ್ನ ನೀರಿನ ಟ್ಯಾಂಕ್ ನೋಡಿಬಿಟ್ಟರೆ ಬೆಚ್ಚಿ ಬೀಳೋದು ಗ್ಯಾರಂಟಿ: ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಚಿಂತೆ