‘ಇದೆಲ್ಲ ಮನುವಾದಿಗಳ ಹುನ್ನಾರ’: ವಿಪಕ್ಷಗಳ ಪ್ರತಿಭಟನೆ ಬೆನ್ನಲ್ಲೇ ದಲಿತ ದಾಳ ಉರುಳಿಸಿದ ಸಚಿವ ನಾಗೆಂದ್ರ

ವಾಲ್ಮೀಕಿ ನಿಗಮದ ಹಗರಣ ಸಂಬಂಧ ಕ್ಲೀನ್​​ಚಿಟ್​​ ಸಿಗದ ಹೊರತಾಗಿಯೂ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ಉಭಯ ಸದನಗಳಲ್ಲಿ ವಿಪಕ್ಷಗಳ ಹೋರಾಟ ತೀವ್ರಗೊಂಡಿದೆ. ಈ ನಡುವೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಾಗೇಂದ್ರ, ಇವೆಲ್ಲವೂ ಮನುವಾದಿಗಳು ಮಾಡ್ತಿರುವ ಹುನ್ನಾರ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನಗೆ ಶಿಕ್ಷೆ ಪ್ರಕಟ ಆಗಿದ್ದರೆ ರಾಜ್ಯಪಾಲರು ಮಂತ್ರಿಯಾಗಿ ಪ್ರಮಾಣವಚನಕ್ಕೆ ಅವಕಾಶ ನೀಡುತ್ತಿದ್ದರಾ ಎಂದೂ ಪ್ರಶ್ನಿಸಿದ್ದಾರೆ.

ಇದೆಲ್ಲ ಮನುವಾದಿಗಳ ಹುನ್ನಾರ: ವಿಪಕ್ಷಗಳ ಪ್ರತಿಭಟನೆ ಬೆನ್ನಲ್ಲೇ ದಲಿತ ದಾಳ ಉರುಳಿಸಿದ ಸಚಿವ ನಾಗೆಂದ್ರ
ಸಚಿವ ನಾಗೆಂದ್ರ
Image Credit source: Tv9 Kannada
Edited By:

Updated on: Aug 19, 2026 | 1:33 PM

ಬೆಂಗಳೂರು, ಆಗಸ್ಟ್​​ 19: ವಾಲ್ಮೀಕಿ ನಿಗಮದ ಹಗರಣ ಸಂಬಂಧ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಉಭಯ ಸದನಗಳಲ್ಲಿಯೂ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ಸಾಂಖ್ಯಿಕ ಮತ್ತು ಯೋಜನಾ ಸಚಿವ ನಾಗೇಂದ್ರ ದಲಿತ ದಾಳ ಉರುಳಿಸಿದ್ದು, ಇದು ತನ್ನನ್ನು ಉಳಿಸಬಾರದು ಅಂತಾ ಮನುವಾದಿಗಳು ಮಾಡ್ತಿರುವ ಹುನ್ನಾರ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮನುವಾದಿಗಳು ಈ ದೇಶವನ್ನು ಹೇಗೆ ನಡೆಸುತ್ತಿದ್ದಾರೆ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗ ಶುದ್ಧೀಕರಣ ಮಾಡ್ತಾರೆ ಅಂದ್ರೆ ವರ್ಣಾಶ್ರಮ ಪದ್ಧತಿ ಇನ್ನೂ ಜೀವಂತ ಇದೆ. ಪ್ರಧಾನಿಗೆ ಸರಿಸಮನಾದ ವ್ಯಕ್ತಿಗೆ ಹೀಗಾದರೆ ಒಬ್ಬ ಸಾಮಾನ್ಯ ದಲಿತ ವ್ಯಕ್ತಿಯಾದ ತನ್ನನ್ನು ಬಿಡ್ತಾರಾ? ಎಂದು ನಾಗೇಂದ್ರ ಪ್ರಶ್ನಿಸಿದ್ದಾರೆ.

‘ರಾಜಕೀಯ ಪ್ರೇರಿತ ದುರುದ್ದೇಶ’

ನನಗೆ ಶಿಕ್ಷೆ ಪ್ರಕಟ ಆಗಿದ್ದರೆ ರಾಜ್ಯಪಾಲರು ಬಿಡ್ತಿದ್ರಾ? ರಾಜ್ಯಪಾಲರು ಪ್ರಮಾಣ ವಚನಕ್ಕೆ ಯಾಕೆ ಅವಕಾಶ ಮಾಡಿಕೊಟ್ಟರು? ಅಧಿಕಾರ ನಡೆಸಲು ಬಿಡಬಾರದೆಂದು ವಿಪಕ್ಷಗಳು ಹೀಗೆ ಮಾಡ್ತಿದ್ದಾರೆ. ರಾಜಕೀಯ ಪ್ರೇರಿತ ದುರುದ್ದೇಶ ಇಟ್ಟುಕೊಂಡು ವಿಪಕ್ಷಗಳು ಪ್ರತಿ ದಿನ ಮಹರ್ಷಿ ವಾಲ್ಮೀಕಿಗೆ ಅಪಮಾನ ಮಾಡ್ತಿದ್ದಾರೆ. ಮೊನ್ನೆ ರಾಮನ ಹುಂಡಿ ಕದ್ದರು, ಅದಕ್ಕಿಂತ ದೊಡ್ಡ ಕೃತ್ಯನಾ ಇದು? ರಾಮರಾಜ್ಯ ಬರಲು ಮನುವಾದಿಗಳು ಬಿಡ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಾಗೇಂದ್ರ ರಾಜೀನಾಮೆಗೆ ಬಿಜೆಪಿ-ಜೆಡಿಎಸ್ ಪಟ್ಟು: ಸದನದೊಳಗೆ ಗದ್ದಲ, ಜಿಲ್ಲೆಗಳಲ್ಲಿಯೂ ಪ್ರತಿಭಟನೆ ಜೋರು

‘ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ’

ಸದನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೆ. ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ಆಗಬೇಕೆಂದು ಅಧಿವೇಶನ ಕರೆದಿದ್ದರು. ಆದರೆ ವಿಪಕ್ಷದವರು ಚರ್ಚೆ ಮಾಡುವುದಕ್ಕೆ ಅವಕಾಶ ಕೊಡುತ್ತಿಲ್ಲ. ಸದನದಲ್ಲಿ ವಿಪಕ್ಷದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಸದನದ ಬಾವಿಗೂ ಇಳಿಯುತ್ತಿಲ್ಲ, ಅವರ ಸ್ಥಾನದಲ್ಲೇ ಗಲಾಟೆ ಮಾಡ್ತಿದ್ದಾರೆ. ವಾಲ್ಮೀಕಿ ಬಗ್ಗೆ ಬಿಜೆಪಿ ಘೋಷಣೆ ಕೂಗಿದ್ದು ನೋಡಿದ್ರೆ ನೋವಾಗುತ್ತೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬ್ಯಾಂಕ್​ಗೆ 187 ಕೋಟಿ ರೂ. ಅಧ್ಯಕ್ಷರ ಗಮನಕ್ಕೂ ಬಾರದೆ ವರ್ಗಾವಣೆ ಆಗಿತ್ತು. ನಿಗಮದ ಬ್ಯಾಂಕ್ ಅಕೌಂಟ್ ಬಗ್ಗೆಯೂ ತನಗೆ ಮಾಹಿತಿ ಇರಲಿಲ್ಲ. ಬೋರ್ಡ್ ಮೀಟಿಂಗ್ ಒಪ್ಪಿಗೆ ಇಲ್ಲದೆಯೇ ಹಣ ವರ್ಗಾವಣೆ ಆಗಿತ್ತು. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ 1 ದಿನದ ಬಳಿಕ ಈ ಬಗ್ಗೆ ಗೊತ್ತಾಗಿದ್ದು, ತಕ್ಷಣ 100 ಕೋಟಿ ಹಣ ಫ್ರೀಜ್​​ ಮಾಡಲಾಗಿತ್ತು. ಬಳಿಕ ಎಸ್​ಐಟಿ ತನಿಖೆ ಮಾಡಿಸಲು ನಮ್ಮ ಸರ್ಕಾರ ತೀರ್ಮಾನಿಸಿತು. ತನಿಖೆಗೆ ಪಾರದರ್ಶಕವಾಗಿ ಆಗಬೇಕೆಂದು ತಾನು ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. SIT ಆಗಲಿ ಯಾರೇ ಆಗಲಿ ನನ್ನ ಖಾತೆಗೆ ಹಣ ಹೋಗಿರುವ ಬಗ್ಗೆ ಹೇಳಿಲ್ಲ ಎಂದು ನಾಗೇಂದ್ರ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us