ಸಚಿವ ನಾಗೇಂದ್ರ ರಾಜೀನಾಮೆ ಜಟಾಪಟಿ: ಉಭಯ ಸದನಗಳಲ್ಲಿ ಆಡಳಿತ-ವಿಪಕ್ಷದ ನಡುವೆ ತೀವ್ರ ವಾಕ್ಸಮರ
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಬಿಜೆಪಿ ಪಟ್ಟು ಹಿಡಿದ ಪರಿಣಾಮ ಉಭಯ ಸದನಗಳ ಕಲಾಪ ತೀವ್ರ ಗದ್ದಲ, ವಾಕಸ್ಮರಕ್ಕೆ ಸಾಕ್ಷಿಯಾಯಿತು. ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಕಪ್ಪು ಶಾಲು ತಿರುಗಿಸಿ ಆಕ್ರೋಶ ಹೊರಹಾಕಿದ್ದರೆ, ವಿಧಾನ ಪರಿಷತ್ನಲ್ಲಿಯೂ ಭಾರಿ ಹೈಡ್ರಾಮಾ ನಡೆಯಿತು. ಹೀಗಾಗಿ ಗಲಾಟೆಯ ನಡುವೆಯೇ ಸ್ಪೀಕರ್ ಮತ್ತು ಸಭಾಪತಿಗಳು ಕಲಾಪ ನಡೆಸಬೇಕಾಯಿತು.

ಮುಖ್ಯಾಂಶಗಳು
- ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷ ಬಿಜೆಪಿ ಪಟ್ಟು
- ಉಭಯ ಸದನಗಳಲ್ಲಿ ಆಡಳಿತ-ವಿಪಕ್ಷದ ನಡುವೆ ವಾಕ್ಸಮರ
- ಗಲಾಟೆಯ ನಡುವೆಯೇ ಸ್ಪೀಕರ್ ಮತ್ತು ಸಭಾಪತಿಗಳಿಂದ ಕಲಾಪ
ಬೆಂಗಳೂರು, ಆಗಸ್ಟ್ 18: ವಾಲ್ಮೀಕಿ ನಿಗಮದ ಹಗರಣದ ನಡುವೆಯೂ ನಾಗೇಂದ್ರಗೆ ಮತ್ತೆ ಮಂತ್ರಿಗಿರಿ ನೀಡಲಾಗಿದ್ದು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷ ಬಿಜೆಪಿ ಪಟ್ಟು ಹಿಡಿದ ಪರಿಣಾಮ ಉಭಯ ಸದನಗಳ ನಾಲ್ಕನೇ ದಿನದ ಕಲಾಪದಲ್ಲಿ ಭಾರಿ ವಾಕ್ಸಮರವೇ ನಡೆದಿದೆ. ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಕಪ್ಪು ಶಾಲು ತಿರುಗಿಸಿ ಆಕ್ರೋಶ ಹೊರಹಾಕಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ಸಿಬಿಐ ಚಾರ್ಜ್ಶೀಟ್ ಪ್ರತಿ ಪ್ರದರ್ಶಿಸಿ ಕಿಡಿ ಕಾರಿದ್ದಾರೆ.
ವಿಪಕ್ಷ v/s ಆಡಳಿತಪಕ್ಷ
ಇನ್ನು ಬಿಜೆಪಿಗರ ಪ್ರತಿಭಟನೆ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಮಮಂದಿರ ದುಡ್ಡು ಎಲ್ಲಿ ಹೋಯಿತು? ಅದರ ಬಗ್ಗೆಯೂ ಚರ್ಚೆ ಮಾಡೋಣ ಎಂದು ಆಗ್ರಹಿಸಿದರು. ಈ ವೇಳೆ ಪ್ರಿಯಾಂಕ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದು, ಮುಡಾ ಮುಡಾ ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು. ನಿಮ್ಮ ಯೋಗ್ಯತೆ ಗೊತ್ತಿಲ್ವಾ ಎಂದು ಸಚಿವ ಶಿವಲಿಂಗೇಗೌಡ ವಿಪಕ್ಷಗಳ ವಿರುದ್ಧ ಹರಿಹಾಯ್ದ ಪರಿಣಾಮ ವಿಧಾನ ಸಭೆ ಮತ್ತಷ್ಟು ಗದ್ದಲದ ಗೂಡಾಗಿ ಮಾರ್ಪಟ್ಟಿತು. ಬಿಜೆಪಿ ಶಾಸಕರು ಮತ್ತು ಸಚಿವ ಹೆಚ್.ಸಿ.ಬಾಲಕೃಷ್ಣ ನಡುವೆ ತೀವ್ರ ವಾಕ್ಸಮರ ನಡೆದಿದ್ದು, ಬಾಲಕೃಷ್ಣ ಅವರಿಗೆ ಸಚಿವ ಕೃಷ್ಣ ಭೈರೇ ಗೌಡ ಕೂಡ ಸಾಥ್ ನೀಡಿದ್ದರು. ಇಷ್ಟೆಲ್ಲ ನಡೆಯುತ್ತಿದ್ದರೂ ಇತರೆ ಸಚಿವರು, ಶಾಸಕರು ವಿಧಾನಸಭೆಯಲ್ಲಿ ಮೌನಕ್ಕೆ ಶರಣಾಗಿದ್ದು ಕೂಡ ಕಂಡುಬಂತು.
ಇದನ್ನೂ ಓದಿ: ನಾಗೇಂದ್ರ ರಾಜೀನಾಮೆಗೆ ಬಿಜೆಪಿ-ಜೆಡಿಎಸ್ ಪಟ್ಟು: ಸದನದೊಳಗೆ ಗದ್ದಲ, ಜಿಲ್ಲೆಗಳಲ್ಲಿಯೂ ಪ್ರತಿಭಟನೆ ಜೋರು
ಬಿಜೆಪಿಗೆ ಮುಜುಗರ ತಂದಿಟ್ಟ ಮಿತ್ರಪಕ್ಷ ಜೆಡಿಎಸ್ ನಡೆ
ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಧರಣಿಗೆ ನಿರ್ಧರಿಸಿದ್ದರೂ ಬರಗಾಲದ ಚರ್ಚೆಗೆ ನಿಲುವಳಿ ನೋಟಿಸ್ ನೀಡಿದ್ದ ಜೆಡಿಎಸ್ ನಡೆ ವಿಪಕ್ಷ ಬಿಜೆಪಿಗೆ ಮುಜುಗರ ತಂದಿಟ್ಟ ಪ್ರಸಂಗವೂ ನಡೆಯಿತು. ಬಿಜೆಪಿ ನಾಗೇಂದ್ರ ರಾಜೀನಾಮೆಗೆ ಒತ್ತಾಯ ಆರಂಭಿಸಿದ ಕೂಡಲೇ, ಜೆಡಿಎಸ್ ನಿಲುವಳಿ ಮೇಲೆ ಚರ್ಚೆಗೆ ಸ್ಪೀಕರ್ ಅವಕಾಶ ಕೊಟ್ಟರು. ಹೀಗಾಗಿ ಬರ ಪರಿಸ್ಥಿತಿ ಬಗ್ಗೆ ನಿಲುವಳಿ ವಾಪಸ್ ಪಡೆಯುವಂತೆ ವಿಧಾನಸಭೆಯಲ್ಲಿ ಜೆಡಿಎಲ್ಪಿ ನಾಯಕ ಸುರೇಶ್ ಬಾಬುಗೆ ಬಿಜೆಪಿಯ ಸುನೀಲ್ ಕುಮಾರ್, ಅಶ್ವತ್ಥ್ ನಾರಾಯಣ ಮನವಿ ಮಾಡಿದರು. ನಿಲುವಳಿ ಹಿಂಪಡೆದಿರುವುದಾಗಿ JDLP ನಾಯಕ ಸುರೇಶ್ ಬಾಬು ಹೇಳಿದರಾದರೂ, ನೀವು ನೋಟಿಸ್ ಕೊಟ್ಟಿದ್ದೀರಿ. ಹೀಗಾಗಿ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆಂದು ಸ್ಪೀಕರ್ ತಿಳಿಸಿದರು.
ವಿಧಾನ ಪರಿಷತ್ನಲ್ಲೂ ತೀವ್ರ ವಾಕ್ಸಮರ
ನಾಗೇಂದ್ರ ರಾಜೀನಾಮೆಗೆ ಪರಿಷತ್ನಲ್ಲಿ ವಿಪಕ್ಷ ಸದಸ್ಯರ ಪಟ್ಟು ಹಿಡಿದ ಪರಿಣಾಮ ಕಾಂಗ್ರೆಸ್, ಬಿಜೆಪಿ ಸದಸ್ಯರಿಂದ ಪರ ವಿರೋಧ ಘೋಷಣೆಗಳು ಮೊಳಗಿದವು. ವಾಲ್ಮೀಕಿ ನಿಗಮ ಹಣ ಎಲ್ಲಿಹೋಯ್ತು, ರಾಹುಲ್ ಜೇಬಿಗೆ ಹೋಯ್ತು ಎಂದು ಬಿಜೆಪಿ ನಾಯಕರು ಕೂಗಿದರು. ಬಿಜೆಪಿ ನಾಯಕರ ಘೋಷಣೆಗೆ ಕಾಂಗ್ರೆಸ್ ಸದಸ್ಯರಿಂದಲೂ ಕೌಂಟರ್ ವ್ಯಕ್ತವಾಗಿದ್ದು, ರಾಮನ ಹುಂಡಿ ಹಣ ಎಲ್ಲಿ ಹೋಯ್ತು? ಅಮಿತ್ ಶಾ ಜೇಬಿಗೆ ಹೋಯ್ತು ಎಂದು ‘ಕೈ’ ಸದಸ್ಯರು ಪ್ರತ್ಯಾರೋಪ ಮಾಡಿದರು. ನಾಗೇಂದ್ರ ರಾಜೀನಾಮೆ ಕೊಡಿಸುವಂತೆ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ ವೇಳೆ ಮಧ್ಯ ಪ್ರವೇಶಿಸಿದ ಸಭಾ ನಾಯಕ ಯತೀಂದ್ರ ಸಿದ್ದರಾಮಯ್ಯ, ಕಳಂಕಿತ ಸಚಿವ ಎಂದು ಬಳಸುವುದು ತಪ್ಪು. ನಾಗೇಂದ್ರ ವಿರುದ್ಧ ಆರೋಪವಿದೆ, ಆದರೆ ಇನ್ನೂ ಸಾಬೀತಾಗಿಲ್ಲ ಎಂದರು. ಹೀಗಾಗಿ ತೀವ್ರ ಗದ್ದಲದ ನಡುವೆಯೇ ಸಭಾಪತಿಗಳು ಪ್ರಶ್ನೋತ್ತರ ಕಲಾಪ ನಡೆಸಬೇಕಾಯೀತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:05 pm, Tue, 18 August 26




